ಗೌರವಾರ್ಪಣೆ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಶ್ಲಾಘನೆ
ಮಂಗಳೂರು: ಸಹಕಾರಿ ಸಂಘಗಳು ವ್ಯವಹಾರದಲ್ಲಿ ಗಳಿಸುವ ಲಾಭದ ಒಂದಂಶವನ್ನುಸಮಾಜಮುಖಿ ಕಾರ್ಯಗಳಿಗೆ ಮತ್ತು ಜನಕಲ್ಯಾಣ ವಿನಿಯೋಗಿಸಿದರೆ ಸಮಾಜದಲ್ಲಿ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆ ಸಾಧ್ಯ. ಅಂತಹ ಬದಲಾವಣೆಗೆ ಶ್ರೀಶಾ ಸೌಹಾರ್ದ ಸಹಕಾರಿ ಸಂಘ ಮುನ್ನುಡಿ ಬರೆದಿದೆ ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಗುರುವಾರ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸರಕಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಆಯೋಜಿಸಲಾದ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಶಾ ಸೌಹಾರ್ದ ಸೊಸೈಟಿಯು ಹೊಸಹೊಸ ರೀತಿಯಲ್ಲಿ ಸಮಾಜಸೇವೆ ಮಾಡುವ ಯೋಜನೆಗಳನ್ನು ಕಂಡುಕೊಂಡಿದೆ. ಗಾಲಿಕುರ್ಚಿ ವಿತರಣೆ, ಸಮಾಜದ ವಿವಿಧ ವರ್ಗಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಗುರುತಿಸುವಿಕೆ, ಶಾಲೆಗಳಿಗೆ ಪುಸ್ತಕ ವಿತರಣೆ ಸಹಿತ ವಿವಿಧ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ. ಶ್ರೀಶಾ ಸಂಸ್ಥೆ ಮತ್ತಷ್ಟು ವಿಸ್ತ್ರತ ಸೇವೆ ನೀಡಲು ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.

ಮುಂದಿನ ಪೀಳಿಗೆಯನ್ನು ರೂಪಿಸುವ ಕೆಲಸ
ಮಕ್ಕಳ ಹಸಿವನ್ನು ನೀಗಿಸುವುದು ಶ್ರೇಷ್ಠ ಕೆಲಸ. ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ನಿಸ್ವಾರ್ಥ ಮನಸ್ಸಿನಿಂದ ಸೇವೆ ನೀಡುತ್ತಿದ್ದಾರೆ. ಅಂತಹ ಸೇವಕರನ್ನು ಗೌರವಿಸಿದ್ದೇವೆ. ದೈನಂದಿನ ಬಳಕೆಗೆ ಅನುಕೂಲವಾಗುವ ಉಡುಗೊರೆಗಳನ್ನು ನೀಡಿ ಕೃತಜ್ಞತೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಬಿಸಿಯೂಟ ನೌಕರರಿಗೆ ಆರೋಗ್ಯ ಶಿಬಿರ ಆಯೋಜಿಸಿ ಚಿಕಿತ್ಸೆ ಹಾಗೂ ಅಗತ್ಯ ಇರುವವರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಶ್ರೀಶಾ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಗುರುರಾಜ್ ಹೇಳಿದರು. ಮಕ್ಕಳಿಗೆ ಊಟ ತಯಾರಿಸಿ ಬಡಿಸುವ ಕೆಲಸವು ಕೇವಲ ಸೇವೆಯಲ್ಲ, ಅದು ಮುಂದಿನ ಪೀಳಿಗೆಯನ್ನು ರೂಪಿಸುವ ಮೂಲಕ ದೇಶ ಕಟ್ಟುವ ಕೆಲಸವಾಗಿದೆ. ಮಕ್ಕಳಿಗೆ ಬಿಸಿಯೂಟ ತಯಾರಿ ಮಾಡುವ ಕೆಲಸ ದೇವರ ಸೇವೆಯೆಂದು ಪರಿಗಣಿಸಿ ಮಾಡಬೇಕು. ಸೇವೆ ಮಾಡುವಾಗ ನಮ್ಮೊಳಗಿನ ಭಾವನೆ ಅತ್ಯಂತ ಮುಖ್ಯವಾಗಿದ್ದು ಶ್ರದ್ದೆ ಮತ್ತು ಪ್ರೀತಿಯಿಂದ ಮಾಡುವ ಸೇವೆಗೆ ದೇವರ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ. ಭಟ್ ಮಾತನಾಡಿ, ಮುಂದಿನ ಪೀಳಿಗೆಗೆ ಪೌಷ್ಟಿಕ ಆಹಾರ ನೀಡುವ ಬಿಸಿಯೂಟ ನೌಕರರ ಸೇವೆ ತಾಯಿಯ ಕೈತುತ್ತಿನಷ್ಟೇ ಮಹತ್ವದ್ದಾಗಿದೆ. ಅಂತಹ ನೌಕರರನ್ನು ಗೌರವಿಸುವ ಶ್ರೀಶಾ ಕೋ-ಅಪರೇಟಿವ್ ಸೊಸೈಟಿ ಒಳ್ಳೆಯ ಹೆಜ್ಜೆ ಇರಿಸಿದೆ ಎಂದರು.
ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ್ ದೇವಸ್ಯ, ಮಂಗಳೂರು ದಕ್ಷಿಣ ವಿಭಾಗದ ಶಿಕ್ಷಣಾಧಿಕಾರಿ ಈಶ್ವರ್, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭವ್ಯ, ಬಿಸಿಯೂಟ ಯೋಜನೆಯ ಉಪನಿರ್ದೇಶಕ ಪ್ರವೀಣ ಕುಮಾರಿ ಶುಭ ಹಾರೈಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ಕಾವ್ಯಾ ವಂದಿಸಿದರು.

