ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು, ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಮಂಗಳೂರು ತಾಲೂಕಿನ ಸರಕಾರಿ ಶಾಲೆಗಳ ಮಧ್ಯಾಹ್ನ ಬಿಸಿಯೂಟ ಯೋಜನೆಯ 100 ಸಿಬ್ಬಂದಿಗಳಿಗೆ ಅವರ ಸೇವೆಯನ್ನು ಗುರುತಿಸಿ ಉಡುಗೊರೆಗಳನ್ನು ನೀಡಿ ಗೌರವಿಸುವ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ನವೆಂಬರ್ 19ರ ಗುರುವಾರದಂದು ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಆಯೋಜಿಸಿದೆ.
https://chat.whatsapp.com/FCEnlTkAKCC0MGPhXtX4i4
ಶಾಲೆಗಳಲ್ಲಿ ಬಿಸಿ ಊಟ ತಯಾರಿಸಿ ಮಕ್ಕಳಿಗೆ ನಿತ್ಯವೂ ನೀಡುವ ಜವಾಬ್ದಾರಿ ನಿಭಾಯಿಸುತ್ತಿರುವ ಸಿಬ್ಬಂದಿಗಳ ಸೇವೆ ಅನನ್ಯ, ಅಸದೃಶ.ಇಂತಹ ಮಾತೃ ಹೃದಯಿ ತಾಯಂದಿರು ತೆರೆಮರೆಯಲ್ಲೇ ಉಳಿದಿದ್ದಾರೆ. ಇಂತಹ ಸಿಬ್ಬಂದಿಗಳನ್ನು ಗುರುತಿಸಿ ಉಡುಗೊರೆಗಳನ್ನಿತ್ತು ಗೌರವಿಸುವ ಕಾರ್ಯಕ್ರಮವನ್ನು ಸೊಸೈಟಿಯು ಹಮ್ಮಿಕೊಂಡಿದೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಸೀರೆಯ ಜೊತೆಗೆ ಇತರೆ ಉಡುಗೊರೆಗಳನ್ನು ನೀಡಲಾಗುತ್ತಿದೆ. ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಜಿತಕಾಮಾನಂದ ಸ್ವಾಮಿಗಳು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ನಿರ್ದೇಶಕಿ ಭಾರತಿ ಜಿ.ಭಟ್, ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಇದರ ಅಧ್ಯಕ್ಷ ಭಾಸ್ಕರ್ ದೇವಸ್ಯ ಮತ್ತು ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


