ಬಂಟ್ವಾಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ನೀಡಲಾಗುವ ಪ್ರಶಸ್ತಿಗಳ ಪೈಕಿ ಉತ್ತಮ ಪತ್ತಿನ ಸಹಕಾರ ಸಂಘ ಪುರಸ್ಕಾರಕ್ಕೆ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆಯ್ಕೆಯಾಗಿದೆ. ನವೆಂಬರ್ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
https://chat.whatsapp.com/FCEnlTkAKCC0MGPhXtX4i4
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ರೈಸ್ತ ಸಮುದಾಯದ ಅಭಿವೃದ್ಧಿ ಮತ್ತು ಇತರ ವರ್ಗದ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ಧೇಶವನ್ನಿಟ್ಟು ಸ್ಥಾಪನೆಯಾದ ‘ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.’ ಸ್ಥಾಪಕ ಅಧ್ಯಕ್ಷರಾದ ದಿ.ಲಿಗೋರಿ ಲೋಬೊ ಇವರ ಸತತ ಪರಿಶ್ರಮದಿಂದ ಮತ್ತು ಕಥೋಲಿಕ್ ಬಾಂಧವರ ಸಹಯೋಗದಿಂದ 1997 ಆಕ್ಟೋಬರ್ 02ರಂದು ಸಂಘವು ಬಂಟ್ವಾಳ ಪರಿಸರದಲ್ಲಿ ಅಸ್ತಿತ್ವವನ್ನು ಪಡೆಯಿತು. ಆರಂಭದಲ್ಲಿ 661 ಸದಸ್ಯರಿಂದ ಪಾಲು ಬಂಡವಾಳ ರೂ.4,86,983 ಮತ್ತು ರೂ.27,100 ಠೇವಣಿಯೊಂದಿಗೆ ಮುನ್ನಡೆದು ಸತತ ಲಾಭದೊಂದಿಗೆ ಸದಸ್ಯರಿಗೆ ಉತ್ತಮ ಪಾಲು ಮುನಾಫೆಯನ್ನು ನೀಡುತ್ತಾ ಬಂದಿದೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರ ದೃಢ ನಿಲುವು, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ದುಡಿಮೆ ಹಾಗೂ ಸದಸ್ಯರ ವ್ಯವಹಾರದಿಂದ, ಬಂಟ್ವಾಳ ಹಾಗೂ ಮಂಗಳೂರು ಪರಿಸರದಲ್ಲಿ ಜನಮೆಚ್ಚುಗೆ, ಹಾಗೂ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆಗೆ ಸಂಘವು ಸಾಕ್ಷಿಯಾಗಿದೆ.

ಪ್ರಸ್ತುತ ಸಂಘವು ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ತನ್ನ 11 ಶಾಖೆಗಳಾದ ಬಿ.ಸಿ.ರೋಡ್, ಫರಂಗಿಪೇಟೆ, ಬಂಟ್ವಾಳ, ವಾಮದಪದವು, ಕುಪ್ಪೆಪದವು, ಗುರುಪುರ-ಕೈಕಂಬ, ಸಿದ್ದಕಟ್ಟೆ, ಬೋಳಿಯಾರು, ಕಲ್ಲಡ್ಕ, ಗ್ರಾಮಚಾವಡಿ ಮತ್ತು ಬಜ್ಪೆ ಶಾಖೆಗಳಲ್ಲಿ ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯ ನೀಡುತ್ತ ಬಂದಿದೆ. 2026 ಮಾರ್ಚ್ ಅ೦ತ್ಯಕ್ಕೆ ಒಟ್ಟು 17,177 ಸದಸ್ಯರಿ೦ದ ರೂ.3.94 ಕೋಟಿ ಪಾಲು ಬ೦ಡವಾಳ, ರೂ.180 ಕೋಟಿ ಠೇವಣಿ ಸ೦ಗ್ರಹದೊ೦ದಿಗೆ ಹೊರಬಾಕಿ ಸಾಲ ರೂ.137 ಕೋಟಿ ಇದ್ದು, 2025-26ನೇ ಸಾಲಿನಲ್ಲಿ ಸಂಘದ ಒಟ್ಟು ವಹಿವಾಟು ರೂ.1434 ಕೋಟಿ ಆಗಿರುತ್ತದೆ. ಸಂಘವು ರೂ.164 ಕೋಟಿ ದುಡಿಯುವ ಬಂಡವಾಳದೊಂದಿಗೆ, ಕ್ಷೇಮ ನಿಧಿ ಹಾಗೂ ಇತರ ನಿಧಿಗಳನ್ನು ಸೇರಿ ರೂ.11.72 ಕೋಟಿ ನಿಧಿಗಳನ್ನು, ರೂ.32.71 ಕೋಟಿ ಧನವಿನಿಯೋಗಗಳನ್ನು ಹೊಂದಿದೆ. ವ್ಯವಹಾರದಲ್ಲಿ ಆಧುನಿಕತೆಯನ್ನು ತರುವ ನಿಟ್ಟಿನಲ್ಲಿ ಸಂಘದ ಎಲ್ಲಾ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ತಂತ್ರಾಂಶ ಅಳವಡಿಸಿ, RTGS /NEFT , SMS Alert , E-Stamp ಸೌಲಭ್ಯದೊಂದಿಗೆ, ಆಕರ್ಷಕ ಬಡ್ಡಿ ದರಗಳನ್ನು ಗ್ರಾಹಕ ಸದಸ್ಯರಿಗೆ ನೀಡುತ್ತಾ ಬಂದಿರುತ್ತದೆ. ಸಂಘದಲ್ಲಿ ಗ್ರಾಹಕರನ್ನು ಹಾಗೂ ವ್ಯವಹಾರವನ್ನು ವೃದ್ದಿಸುವ ಸಲುವಾಗಿ ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಪ್ರಗತಿಯಲ್ಲಿದೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.3.40 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 18 ಡಿವಿಡೆಂಡ್ ನೀಡಲಾಗಿದೆ.
ಸಂಘವು ಸಮಾಜಮುಖಿ ಕಾರ್ಯಗಳಿಗೆ, ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚ ಹಾಗೂ ಆರ್ಥಿಕವಾಗಿ ಹಿ೦ದುಳಿದ ಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡಿದೆ. ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ಗುರುತಿಸಿ ಗೌರವಿಸಿದೆ. ಸರಕಾರದ ಯಶಸ್ವಿನಿ ಯೋಜನೆಯನ್ನು ಸದಸ್ಯರಿಗೆ ಪರಿಚಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಈ ವಿಮೆಗೆ ಸೇರಿಸಲಾಗಿದೆ. ಸಂಘವು ಸಹಕಾರ ಇಲಾಖೆಯ ಆದೇಶದಂತೆ, ಆಡಳಿತ ಮಂಡಳಿಯ ಉತ್ತಮ ನಿರ್ಣಯಗಳಿಂದ ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಿದ್ದು, ಇದರ ಪ್ರತಿಫಲವೆಂಬಂತೆ ಸಹಕಾರ ಇಲಾಖೆ ಹಾಗೂ ಎಂ.ಸಿ.ಎಸ್ ಬ್ಯಾಂಕ್ ಮೂಡುಬಿದಿರೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾ೦ಕ್-ಮ೦ಗಳೂರು ಇವರಿಂದ ಒಟ್ಟು 10 ಬಾರಿ ಸಾಧನಾ ಪ್ರಶಸ್ತಿ ಪಡೆದಿರುತ್ತದೆ.


