ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ಸಹಕಾರ ಇಲಾಖೆ ಕರ್ನಾಟಕ ಸರಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್‌ಗೆ ಮೈಸೂರು ವಿಭಾಗದ ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಶತಮಾನೋತ್ಸವ ಸಂಭ್ರಮದಲ್ಲಿರುವ ಶ್ರೀ ಗೋಕರ್ಣನಾಥ ಬ್ಯಾಂಕ್, ಮೈಸೂರು ವಿಭಾಗದ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ಅತ್ಯಧಿಕ ಶಾಖೆಗಳನ್ನು ಹೊಂದಿರುವ ಬ್ಯಾಂಕುಗಳಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ತನ್ನ ಕಾರ್ಯಕ್ಷಮತೆ, ನಿರಂತರ ಬೆಳವಣಿಗೆ ಹಾಗೂ ಗ್ರಾಹಕ ಸೇವೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದು ಈ ಪ್ರಶಸ್ತಿಯ ವಿಶೇಷತೆಯಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕ ಎಚ್.ಕೆ.ಪಾಟೀಲ್, ಹಿರಿಯ ಸಹಕಾರಿಗಳು, ಮಹಾಮಂಡಳದ ಪದಾಧಿಕಾರಿಗಳು ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶ್ರೀ ಗೋಕರ್ಣನಾಥ ಬ್ಯಾಂಕಿನ ಅಧ್ಯಕ್ಷರಾದ ಚಂದ್ರಶೇಖರ ಕುಮಾರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ. ಅವರು ಪ್ರಶಸ್ತಿ ಸ್ವೀಕರಿಸಿದರು. ಬ್ಯಾಂಕಿನ ನಿರ್ದೇಶಕರಾದ ಶ್ರೀ ಜಯರಾಮ್ ಕಾರಂದೂರುರವರು ಉಪಸ್ಥಿತರಿದ್ದರು.

ಶತಮಾನದ ಸೇವೆಗೆ ಸಂದ ಈ ರಾಜ್ಯಮಟ್ಟದ ಗೌರವವು ಬ್ಯಾಂಕಿನ ಮುಂದಿನ ಪಯಣಕ್ಕೆ ಹೊಸ ಪ್ರೇರಣೆ ಮತ್ತು ಉತ್ಸಾಹ ತುಂಬಿದೆ. ಸಂಪ್ರದಾಯದ ಮೌಲ್ಯಗಳನ್ನು ಉಳಿಸಿಕೊಂಡು ತಂತ್ರಜ್ಞಾನದ ವೇಗದೊಂದಿಗೆ ಮುನ್ನಡೆಯುತ್ತಿರುವ ಶ್ರೀ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್, ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ಆರ್ಥಿಕ ಸಬಲೀಕರಣ ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಮುಂದುವರಿಸಲಿದೆ.

