ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.), ಬೆಳ್ತಂಗಡಿ ಇದರ ಬಜಗೋಳಿ ಶಾಖೆಯ ಸ್ಥಳಾಂತರಗೊಂಡ ಸ್ವಂತ ಮಾಲೀಕತ್ವದ ನೂತನ ಕಚೇರಿಯ ಶುಭಾರಂಭ ಸಮಾರಂಭವು ಬುಧವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಮುಡಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಎಂ.ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಗುರುದೇವ ಸಹಕಾರ ಸಂಘವು ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿದರು. ಸಂಘದ ಸಿಬ್ಬಂದಿಗಳ ಉತ್ತಮ ಕಾರ್ಯವೈಖರಿ, ಗ್ರಾಹಕರೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯ ಹಾಗೂ ಸೇವಾ ಮನೋಭಾವ ಮೆಚ್ಚುವಂತದ್ದು ಎಂದು ತಿಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಭಗೀರಥ ಜಿ. ಅವರು ಮಾತನಾಡಿ, ನಮ್ಮ ಸಹಕಾರ ಸಂಘವು ಕೇವಲ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿರದೆ, ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಗ್ರಾಹಕರ ವಿಶ್ವಾಸವೇ ಸಂಘದ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸೇವೆ ನೀಡುವ ಸಂಕಲ್ಪವನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಜಗೋಳಿ ಬಿಲ್ಲವ ಸಂಘದ ಅಧ್ಯಕ್ಷರಾದ ಭಾಸ್ಕರ ಎಸ್. ಪೂಜಾರಿ, ಕುಷ್ಮಾಂಡಿನಿ ಗ್ರೂಪ್‌ನ ಮಾಲಕರಾದ ಮಹಾವೀರ ಜೈನ್, ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಅನಿಲ್ ಎಸ್. ಪೂಜಾರಿ, ಉದ್ಯಮಿಗಳಾದ ಕೆ. ವಿಶ್ವನಾಥ ಪ್ರಭು ಕಡಾರಿ, ಕಟ್ಟಡ ಮಾಲೀಕರಾದ ಪ್ರಶಾಂತ್ ಪ್ರಭು ಹಾಗೂ ಬಜಗೋಳಿ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ರಕ್ಷಿತಾ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ ಸ್ವಾಗತಿಸಿದರು. ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕುಪ್ಪೆಪದವು ಶಾಖಾ ವ್ಯವಸ್ಥಾಪಕರಾದ ಪ್ರವೀಣ ಪೂಜಾರಿ ವಂದಿಸಿದರು. ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಚಂದ್ರಶೇಖರ್, ಡಾ. ರಾಜಾರಾಮ ಕೆ.ಬಿ., ಗಂಗಾಧರ ಮಿತ್ತಮಾರು ಹಾಗೂ ಚಿದಾನಂದ ಪೂಜಾರಿ ಎಲ್ದಕ್ಕ ಉಪಸ್ಥಿತರಿದ್ದರು. ಬಜಗೋಳಿ ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕರಾದ ಸೂರಜ್ ಜೆ ಸಾಲ್ಯಾನ್ ಸೇರಿದಂತೆ ಕೇಂದ್ರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಇತರ ಶಾಖೆಯ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಮತ್ತು ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

