ಕಾಪು: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 22ನೇ ಹವಾನಿಯಂತ್ರಿತ ಶಾಖೆಯು ಬುಧವಾರ ಕಾಪು ಪೇಟೆಯ ಮಂಜುಶ್ರೀ ಎನ್‌ಕ್ಲೇವ್ ಕಟ್ಟಡದ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿದೆ.
https://chat.whatsapp.com/FCEnlTkAKCC0MGPhXtX4i4
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿ, ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಆಡಳಿತ ಮಂಡಳಿಯ ಜತೆಗೆ ಸಿಬ್ಬಂದಿಯ ಶ್ರಮ, ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿದೆ. ಬ್ಯಾಂಕಿಂಗ್ ವಲಯ ಚಲನಶೀಲವಾಗಿರುತ್ತದೆ. ಠೇವಣಿ ರೂಪದಲ್ಲಿ ಬಂದ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ವಿಷಯದಲ್ಲಿ ಗ್ರಾಹಕರ ವಿಶ್ವಾರ್ಹತೆ ಗಳಿಸುವುದು ಅತೀ ಮುಖ್ಯವಾಗಿದ್ದು ಸಂಸ್ಥೆ ಇನ್ನಷ್ಟು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಕಾಪು ಬಂಟರ ಸಂಘದ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ದೀಪ ಪ್ರಜ್ವಲಿಸಿ ಮಾತನಾಡಿ, ಉತ್ತಮ ಠೇವಣಿ ಗಳಿಸಿ, ಸಾಲ ವಿತರಣೆ ಜತೆಗೆ ವಸೂಲಾತಿಯೂ ಉತ್ತಮ ರೀತಿಯಲ್ಲಿ ನಡೆದು ಸಂಸ್ಥೆ ಉತ್ತರೋತ್ತರ ಶ್ರೇಯಸ್ಸಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಕೋರ್ಯಾರು ಮಾತನಾಡಿ, 2005ರಲ್ಲಿ 400 ಸದಸ್ಯರೊಂದಿಗೆ ಆರಂಭವಾದ ಸೊಸೈಟಿ ಪ್ರಸ್ತುತ 36,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಇದು 22ನೇ ಶಾಖೆಯಾಗಿದೆ. ಅತಿ ಶೀಘ್ರದಲ್ಲಿ ಇನ್ನೂ ಎರಡು ಶಾಖೆ ಉದ್ಘಾಟನೆಯಾಗಲಿದೆ. ಸ್ಥಾಪಕ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಅವರು ಸಂಸ್ಥೆಗೆ ವ್ಯವಸ್ಥಿತ ಬುನಾದಿ ಹಾಕಿಕೊಟ್ಟಿದ್ದಾರೆ. ಪ್ರಸ್ತುತ ಸಂಸ್ಥೆಯು 485 ಕೋಟಿ ರೂ. ಗೂ ಅಧಿಕ ದುಡಿಯುವ ಬಂಡವಾಳ, 790 ಕೋಟಿ ರೂ. ವಹಿವಾಟು, 450 ಕೋಟಿ ರೂ. ಠೇವಣಿ, 340 ಕೋಟಿ ರೂ. ಸಾಲ ನೀಡಿದೆ. ಸೊಸೈಟಿಯು ಆಡಿಟ್ ವರದಿಯಲ್ಲಿ ನಿರಂತರ ‘ಎ’ ಶ್ರೇಣಿ ಪಡೆಯುತ್ತಾ ಬಂದಿದೆ. ಸದಸ್ಯರಿಗೆ ಉತ್ತಮ ಡಿವಿಡೆಂಡ್ ಕೂಡ ನೀಡುತ್ತಾ ಬರುತ್ತಿದೆ. ಬ್ಯಾಂಕಿಂಗ್ ವ್ಯವಸ್ಥೆ ಗ್ರಾಹಕರ ನಂಬಿಕೆ ಮೇಲೆ ನಿಂತಿದ್ದು ಅದನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದ್ದೇವೆ. ಸೊಸೈಟಿ ಮೂಲಕ ವೈಯಕ್ತಿಕ ಸಾಲ, ಅಡಮಾನ ಸಾಲ, ವಾಹನ ಸಾಲ ಸಹಿತ ಉದ್ಯಮ ಉದ್ದೇಶಿತ ವಿವಿಧ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.

ಕಾಪು ಮೊಗವೀರ ಮಹಾಸಭೆ ಅಧ್ಯಕ್ಷ ಸುಜಿತ್ ಕುಮಾರ್, ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ಪೊಲಿಪು ಜಾಮಿಯಾ ಮಸೀದಿ ಅಧ್ಯಕ್ಷ ಶೇಖ್ ನಝೀರ್ ಅಹಮ್ಮದ್, ಮಂಜುಶ್ರೀ ಎನ್‌ಕ್ಲೇವ್ ಮಾಲಕ ಪ್ರಸಾದ್ ಎಸ್.ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ, ಸೊಸೈಟಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕೆ., ಶಾಖಾ ಪ್ರಬಂಧಕ ಬಿ.ಬಾಲಕೃಷ್ಣ ಶೆಟ್ಟಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ನೊಚ್ಚ ಪ್ರಸ್ತಾವನೆಗೈದು ಸ್ವಾಗತಿಸಿದರು. ರಘುರಾಮ ಶೆಟ್ಟಿ ಉಜಿರೆ ಕಾರ್ಯಕ್ರಮ ನಿರೂಪಿಸಿ, ಸಿಇಒ ಸುಜಯ್ ಶೆಟ್ಟಿ ವಂದಿಸಿದರು.


