ಮೊಳಹಳ್ಳಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಆಕರ ಗ್ರಂಥ ಬಿಡುಗಡೆಗೊಳಿಸಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ವಿಶ್ಲೇಷಣೆ
ಮಂಗಳೂರು: ಕರಾವಳಿಯ ಸಹಕಾರ ಪಿತಾಮಹ ಎನಿಸಿಕೊಂಡಿರುವ ದಿ.ಮೊಳಹಳ್ಳಿ ಶಿವರಾವ್ ಅವರು ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮಗೆಲ್ಲರಿಗೂ ಆದರ್ಶಪ್ರಾಯರು. ಸಹಕಾರ ಕ್ಷೇತ್ರದಲ್ಲಿ ಏನೆಲ್ಲ ಸಾಧನೆ ಮಾಡಬಹುದೋ ಅವೆಲ್ಲವನ್ನೂ ಮೊಳಹಳ್ಳಿ ಶಿವರಾಯರು ಮಾಡಿ ತೋರಿಸಿದ್ದಾರೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಬಣ್ಣಿಸಿದರು.
https://chat.whatsapp.com/FCEnlTkAKCC0MGPhXtX4i4
ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಜಂಟಿ ಆಶ್ರಯದಲ್ಲಿ ದಿ.ಮೊಳಹಳ್ಳಿ ಶಿವರಾಯರ 146ನೇ ಜನ್ಮದಿನಾಚರಣೆ ಹಾಗೂ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಹೊರತಂದಿರುವ ಅರವಿಂದ ಚೊಕ್ಕಾಡಿ ಅವರು ಬರೆದಿರುವ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಎಂಬ ಆಕರ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪಾರ ವಹಿವಾಟುಗಳಿಗೆ ಶಕ್ತಿ ತುಂಬಿರುವುದು ಸಹಕಾರ ಕ್ಷೇತ್ರ. ಈ ಸಹಕಾರ ಕ್ಷೇತ್ರದಲ್ಲಿ ಅವಿರತ ದುಡಿಮೆ ದುಡಿದು ಇದರ ಶಕ್ತಿಯನ್ನು ಜನರ ಮುಂದಿಟ್ಟವರು ಮೊಳಹಳ್ಳಿಯವರು. ಒಂದು ಕಾಲದಲ್ಲಿ ಬ್ಯಾಂಕುಗಳ ತವರೂರು ಆಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದು ಉದಯಿಸಿದ್ದ ಬ್ಯಾಂಕುಗಳು ವಿಲೀನಗೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂಥ ಕಾಲಘಟ್ಟದಲ್ಲಿ ಇಲ್ಲಿಯ ಸಣ್ಣ ಸಣ್ಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಲಾಭ ಗಳಿಸುವ ಮೂಲಕ ವಾಣಿಜ್ಯ ಬ್ಯಾಂಕುಗಳಿಗೆ ಸವಾಲೊಡ್ಡುತ್ತಿವೆ. ಇದಕ್ಕೆ ಕಾರಣ ಮೊಳ್ಳಹಳ್ಳಿ ಶಿವರಾಯರು ಹಾಕಿಕೊಟ್ಟ ಭದ್ರವಾದ ಬುನಾದಿ ಎಂದು ಅವರು ವಿಶ್ಲೇಷಿಸಿದರು.
ಸೀಮಿತ ದಾಖಲೆಗಳಲ್ಲೇ ಉತ್ತಮ ಕೃತಿ
ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಪುಸ್ತಕದ ಕೃತಿಕಾರ ಅರವಿಂದ ಚೊಕ್ಕಾಡಿಯವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಮೊಳಹಳ್ಳಿ ಶಿವರಾಯರು ತಮ್ಮ ಕಾರ್ಯದ ಅವಧಿಯಲ್ಲಿ ಮಾತನಾಡಿದ್ದು ಕಡಿಮೆ. ಆದರೆ ಅವರು ಆಡುತ್ತಿದ್ದ ಮಾತುಗಳು ಅತ್ಯಂತ ನಿಖರವಾಗಿರುತ್ತಿದ್ದವು. ಭಾಷೆಯ ಬಳಕೆಗೆ ಅವರು ಹೆಚ್ಚಿನ ಮಹತ್ವ ನೀಡಿದ್ದರು. ಅತ್ಯಂತ ಕಡಿಮೆ ಶಬ್ದಗಳಲ್ಲಿ ಪರಿಣಾಮಕಾರಿ ಮಾತುಗಳು ಮೊಳಹಳ್ಳಿಯವರಿಂದ ಹೊರಬರುತ್ತಿದ್ದವು. ಅವರ ಕುರಿತು ದಾಖಲೀಕರಣ ಇರುವುದು ಕಡಿಮೆ. ಇರುವ ಸೀಮಿತ ದಾಖಲೆಗಳಲ್ಲೇ ಉತ್ತಮ ಕೃತಿಯನ್ನು ಹೊರತಂದಿದ್ದೇವೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರ ಎಂಬುದು ತುಂಬ ಸೂಕ್ಷ್ಮತೆಯ ಕ್ಷೇತ್ರ. ಸಹಕಾರ ಕ್ಷೇತ್ರದಲ್ಲಿ ಎಲ್ಲರನ್ನೂ ಒಳಗೊಂಡು ಒಂದೇ ದಿಕ್ಕಿನತ್ತ ಕೊಂಡೊಯ್ಯುವ ಕೆಲಸ ಸುಲಭವಲ್ಲ. ಆ ಕೆಲಸ ಮೊಳಹಳ್ಳಿ ಶಿವರಾಯರು ಜೀವಿಸಿದ್ದ ಕಾಲಘಟ್ಟಕಿಂತ ಈಗ ಹೆಚ್ಚು ಪ್ರಸ್ತುತವಾಗಿದೆ. ಆ ಕೆಲಸವನ್ನು ಸಹಕಾರ ರತ್ನ ಡಾ.ಎಂ ಎನ್ ರಾಜೇಂದ್ರ ಕುಮಾರ್ ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇವತ್ತಿನ ಕಾಲದಲ್ಲಿ ಮೊಲಹಳ್ಳಿಯವರ ಕಾಲಘಟ್ಟದ ಸಹಕಾರ ಕ್ಷೇತ್ರವನ್ನು ರೂಪಿಸಬೇಕು. ಮೊಳಹಳ್ಳಿಯವರ ಕಾಲದಲ್ಲಿ ಅವರು ಮಾಡಿದ ಸಹಕಾರ ಕ್ಷೇತ್ರದ ಕೆಲಸದಲ್ಲಿ ಪ್ರಯೋಗಶೀಲತೆ, ಆವಿಷ್ಕಾರ ಮನೋವೃತ್ತಿ ಇತ್ತು. ಸಹಕಾರ ಕ್ಷೇತ್ರದ ಜೊತೆ ಉಳಿದೆಲ್ಲ ರಂಗವನ್ನೂ ಅವರು ಜೊತೆಗೆ ಕೊಂಡೊಯ್ಯುತ್ತಿದ್ದರು ಎಂದು ಅರವಿಂದ ಚೊಕ್ಕಾಡಿಯವರು ಬಣ್ಣಿಸಿದರು.

ಮೊಳಹಳ್ಳಿ ಶಿವರಾಯರು ಶೋಷಿತರ ಅಭ್ಯುದದಯಕ್ಕೆ ಸಾಕಷ್ಟು ಕೆಲಸ ಮಾಡಿದ್ದರು. ಯಾವುದೇ ರಂಗದಲ್ಲಿ ಹೊಸತನ ತರುವುದು ಸುಲಭ. ಆದರೆ ಹೊಸತನ ತರುವಲ್ಲಿ ಎದುರಿಸಬೇಕಾದ ಸಂಕೀರ್ಣ ಕ್ಷಣಗಳನ್ನು ಎದುರಿಸುವ ಸಂದರ್ಭ ಬಂದಾಗ ಅದನ್ನು ಎದುರಿಸುವುದು ಸುಲಭವಲ್ಲ. ಇದನ್ನು ಮೊಳಹಳ್ಳಿಯವರು ಮಾಡಿ ತೋರಿಸಿದ್ದರು ಎಂದು ಅರವಿಂದ ಚೊಕ್ಕಾಡಿಯವರು ಹಲವು ಉದಾಹರಣೆಗಳ ಮೂಲಕ ಬಣ್ಣಿಸಿದರು. ಪಾಣೆಮಂಗಳೂರು ಸೇತುವೆಯ ಕೆಲಸ ಆದಾಗ ಬ್ರಿಟಿಷ್ ಅಧಿಕಾರಿಯ ಮನವೊಲಿಸಿ ಅದರ ಹಣ ಮಾಡುವಷ್ಟರ ಮಟ್ಟಿಗೆ ಅವರನ್ನು ಒಪ್ಪಿಸುವ ಮನೋವೃತ್ತಿ ಅವರಲ್ಲಿತ್ತು. ಸಮಾಜವನ್ನು ಸದಾಕಾಲ ಚಲನಶೀಲ ಪ್ರವೃತ್ತಿಯಲ್ಲಿಡಬೇಕೆಂಬ ಭವ್ಯವಾದ ಕಲ್ಪನೆ ಅವರದಾಗಿತ್ತು. ಸಂಘಟನೆ ಮತ್ತು ಸಹಕಾರದ ಮೂಲಕ ಇಡೀ ಭಾರತವನ್ನು ಹೇಗೆ ಕಟ್ಟಬೇಕೆಂಬ ಕಲ್ಪನೆ ಅವರಲ್ಲಿತ್ತು ಎಂದು ಪ್ರತಿಪಾದಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಶುಭ ಹಾರೈಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ನೀಲಯ ಎಂ ಅಗರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ ಚಿತ್ತರಂಜನ್ ಬೋಳಾರ್, ಸತೀಶ್ ಕೆ ಕಾಶಿಪಟ್ಣ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೈರಾಜ್ ಬಿ.ರೈ, ಕುಶಾಲಪ್ಪ ಗೌಡ, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮೊದಲಾದವರು ಹಾಜರಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ಸಿಬ್ಬಂದಿ ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ್ ವಂದಿಸಿದರು.





