ಇಂದು ಮೊಳಹಳ್ಳಿ ಶಿವರಾವ್ ಅವರ ಜನ್ಮದಿನದ ಅಂಗವಾಗಿ ಈ ಲೇಖನ
ಜಾತ್ಯತೀತ, ಧರ್ಮಾತೀತ, ಪಕ್ಷಾತೀತ ಮತ್ತು ವರ್ಣಾತೀತ ಎಂಬ ಎಲ್ಲ ಮಿತಿಗಳನ್ನು ಮೀರಿ, ಯಾವುದೇ ಸೈದ್ಧಾಂತಿಕ ಗಡಿಗಳನ್ನು ದಾಟಿ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆಯೇ ಸಹಕಾರ ರಂಗ. ಪರಸ್ಪರ ಸಹಾಯ, ಸಾಮೂಹಿಕತೆ, ಸಮಾನತೆ ಮತ್ತು ಸ್ವಾವಲಂಬನೆ ಎಂಬ ಮೌಲ್ಯಗಳ ಮೇಲೆ ನಿಂತಿರುವ ಈ ವ್ಯವಸ್ಥೆಯನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ಅಲ್ಲದೆ, ಸಮಾಜ ನಿರ್ಮಾಣದ ಪ್ರಬಲ ಸಾಧನವನ್ನಾಗಿ ರೂಪಿಸಿದ ಮಹನೀಯರಲ್ಲಿ ದಿವಂಗತ ಮೊಳಹಳ್ಳಿ ಶಿವರಾಯರು ಅಗ್ರಗಣ್ಯರು. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಮತ್ತು ಕಾಞಂಗಾಡು ಪ್ರದೇಶಗಳಲ್ಲಿ ಸಹಕಾರ ಚಳವಳಿಗೆ ಭದ್ರ ಅಡಿಪಾಯ ಹಾಕಿ, ಅದನ್ನು ಜನಜೀವನದ ಭಾಗವನ್ನಾಗಿ ರೂಪಿಸಿದ ಕೀರ್ತಿ ಮೊಳಹಳ್ಳಿ ಶಿವರಾಯರಿಗೆ ಸಲ್ಲುತ್ತದೆ.
https://chat.whatsapp.com/FCEnlTkAKCC0MGPhXtX4i4
ಮೊಳಹಳ್ಳಿ ಶಿವರಾಯರು ಸಹಕಾರವನ್ನು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತಗೊಳಿಸಲಿಲ್ಲ. ಅದನ್ನು ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಸಾಧನವನ್ನಾಗಿ ಬಳಸಿದರು. ಅವರ ದೃಷ್ಟಿಯಲ್ಲಿ ಸಹಕಾರವೆಂದರೆ ಜನರನ್ನು ಒಗ್ಗೂಡಿಸಿ, ಪರಸ್ಪರ ವಿಶ್ವಾಸ ಬೆಳೆಸಿ, ಎಲ್ಲರ ಪಾಲ್ಗೊಳ್ಳುವಿಕೆಯ ಮೂಲಕ ಸಮೃದ್ಧ ಸಮಾಜ ನಿರ್ಮಿಸುವ ಮಾರ್ಗವಾಗಿತ್ತು. ಅವರ ಬದುಕು ಮತ್ತು ಸಾಮಾಜಿಕ ಕಾರ್ಯಗಳು ಮುಂದಿನ ಪೀಳಿಗೆಗೆ ಅಧ್ಯಯನಯೋಗ್ಯವೂ, ಪ್ರೇರಣಾದಾಯಕವೂ ಆಗಿವೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡು ಹಾಗೂ ಕಾಞಂಗಾಡಿನವರೆಗೆ ಸಹಕಾರದ ಬೀಜ ಬಿತ್ತಿದವರು ಮೊಳಹಳ್ಳಿ ಶಿವರಾಯರು. ರೈತನು ಭೂಮಿಯಲ್ಲಿ ಬೀಜ ಬಿತ್ತಿ ಬೆಳೆಯನ್ನು ಬೆಳೆಸುವಂತೆ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಚಿಂತನೆ ಬಿತ್ತಿ, ಅದರ ಫಲವನ್ನು ಸಮಾಜಕ್ಕೆ ನೀಡಿದರು. ಹಣಕಾಸು, ಕೃಷಿ, ಅಡಮಾನ, ಅಭಿವೃದ್ಧಿ, ಮಹಿಳಾ ಸಬಲೀಕರಣ, ಉತ್ಪಾದನೆ, ಸಂಸ್ಕರಣೆ, ಸರಬರಾಜು, ಮಾರಾಟ, ಜೇನು ಸಾಕಣೆ, ಮೂರ್ತೆದಾರಿಕೆ, ಮೀನುಗಾರಿಕೆ, ವೈದ್ಯಕೀಯ, ವಿದ್ಯಾರ್ಥಿ ಕಲ್ಯಾಣ, ವಸತಿ ನಿಲಯಗಳು, ಮುದ್ರಣ ಮತ್ತು ಇನ್ನಿತರ ಅನೇಕ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಅವರು ಕಾರಣರಾದರು.
ಸಹಕಾರದ ಮೂಲಕ ಇಲ್ಲದವರು–ಉಳ್ಳವರು, ಮಹಿಳೆಯರು–ಪುರುಷರು, ದೀನ–ದಲಿತರು, ರೈತರು–ಕಾರ್ಮಿಕರು ಎಲ್ಲರೂ ಪರಸ್ಪರ ಪೂರಕರಾಗಿ ಬೆಳೆಯಬೇಕು ಎಂಬುದು ಅವರ ನಂಬಿಕೆಯಾಗಿತ್ತು. ಸಮಾಜದ ಎಲ್ಲ ವರ್ಗಗಳ ಸಮಾನ ಪಾಲ್ಗೊಳ್ಳುವಿಕೆಯ ಮೂಲಕ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಅವರು ನಂಬಿದ್ದರು. ಇದೇ ಕಾರಣಕ್ಕೆ ಅವರ ಸಹಕಾರ ಚಿಂತನೆ ಕೇವಲ ಆರ್ಥಿಕ ಅಭಿವೃದ್ಧಿಗೆ ಸೀಮಿತವಾಗದೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಒಳಗೊಂಡಿತ್ತು.
ಸಮಾಜವು ಮೊಳಹಳ್ಳಿ ಶಿವರಾಯರನ್ನು ಸಮರ್ಥ ಹಾಗೂ ಪರಿಪೂರ್ಣ ಸಹಕಾರಿಯಾಗಿ ಗುರುತಿಸಿ ಅವರಿಗೆ “ಸಹಕಾರ ಪಿತಾಮಹ” ಎಂಬ ಗೌರವ ನೀಡಿದೆ. ಆದರೆ ಅವರ ಕಾರ್ಯಕ್ಷೇತ್ರ ಕೇವಲ ಸಹಕಾರಕ್ಕೆ ಸೀಮಿತವಾಗಿರಲಿಲ್ಲ. ರಾಜಕೀಯ, ಶಿಕ್ಷಣ, ಕಲೆ ಮತ್ತು ಸಾಮಾಜಿಕ ಸುಧಾರಣಾ ಕ್ಷೇತ್ರಗಳಲ್ಲಿಯೂ ಅವರು ತಮ್ಮದೇ ಆದ ಛಾಪು ಮೂಡಿಸಿದರು. ಮಧ್ಯಪಾನ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಗಳಂತಹ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿದರು. ಮಕ್ಕಳ ಕೂಟಗಳನ್ನು ಆಯೋಜಿಸಿ, ಅವರಲ್ಲಿ ಸೃಜನಶೀಲತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಪ್ರಯತ್ನಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಮಹಾತ್ಮ ಗಾಂಧಿಯವರ ಚಿಂತನೆಗಳಿಂದ ಪ್ರಭಾವಿತರಾಗಿ ಗಾಂಧೀವಾದಿ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರ ಬದುಕು ಹೋರಾಟಗಾರನದ್ದಾಗಿರಲಿಲ್ಲ; ಬದಲಾಗಿ ಸಮಾಜದ ಸಮಸ್ಯೆಗಳಿಗೆ ಚಿಕಿತ್ಸಕನಂತೆ ಸ್ಪಂದಿಸಿ, ಪರಿಹಾರ ಹುಡುಕುವ ಸಮಾಜ ಸುಧಾರಕನದ್ದಾಗಿತ್ತು.
ಪ್ರಪಂಚದ ಸಹಕಾರ ಚಳವಳಿಯ ಇತಿಹಾಸದಲ್ಲಿ ಇಂಗ್ಲೆಂಡ್‌ನ ರಾಕ್ಡೇಲ್ ಪಟ್ಟಣದಲ್ಲಿ 1844ರಲ್ಲಿ ಆರಂಭವಾದ “ರಾಕ್‌ಡೇಲ್ ಸೊಸೈಟಿ ಆಫ್ ಇಕ್ವಿಟೇಬಲ್ ಪಯೋನಿಯರ್ಸ್” ಮಹತ್ವದ ಸ್ಥಾನವನ್ನು ಪಡೆದಿದೆ. ರಾಬರ್ಟ್ ಓವನ್ ಅವರನ್ನು ವಿಶ್ವ ಸಹಕಾರ ಚಳವಳಿಯ ಪಿತಾಮಹ ಎಂದು ಗೌರವಿಸುತ್ತದೆ. ಭಾರತದಲ್ಲಿ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಸ್ಥಾಪಿತವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದೇಶದ ಪ್ರಪ್ರಥಮ ಸಹಕಾರ ಸಂಘವಾಗಿ ಗುರುತಿಸಲ್ಪಟ್ಟಿದೆ. ಆದರೆ ಈ ಎಲ್ಲರ ಮಧ್ಯೆ ಮೊಳಹಳ್ಳಿ ಶಿವರಾಯರ ಸಾಧನೆ ವಿಶಿಷ್ಟವಾಗಿದೆ. ಅವರು ಸಹಕಾರವನ್ನು ಕೇವಲ ಒಂದು ಸಂಘ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸದೆ, ಸಮಾಜದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಬಳಸಿದರು.
“ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆಯಂತೆ ಮೊಳಹಳ್ಳಿ ಶಿವರಾಯರು ಸಮಾಜದ ಎಲ್ಲ ವರ್ಗಗಳ ಮಧ್ಯೆ ಸಹಕಾರದ ತತ್ವವನ್ನು ತಲುಪಿಸಿದರು. ಹಿಂದುಳಿದ ಮತ್ತು ದಮನಿತ ವರ್ಗಗಳಿಗೆ ಸಹಕಾರದ ಮೂಲಕ ಆತ್ಮವಿಶ್ವಾಸ ಮತ್ತು ಆರ್ಥಿಕ ಬಲ ನೀಡಿದರು. ಇದರಿಂದ ಸಹಕಾರ ರಂಗವು ಮತ್ತಷ್ಟು ಶ್ರೀಮಂತ ಮತ್ತು ಸಮೃದ್ಧವಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಜೀವನವನ್ನು ಅರ್ಥಮಾಡಿಕೊಂಡಿದ್ದ ಮೊಳಹಳ್ಳಿ ಶಿವರಾಯರು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರದ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಆ ಕಾಲದಲ್ಲಿ ರೈತರು ಸಾಹುಕಾರರ ಅತಿಯಾದ ಬಡ್ಡಿ ದಂಧೆಗೆ ಸಿಲುಕಿ ಆಸ್ತಿ ಕಳೆದುಕೊಳ್ಳುವುದು ಸಾಮಾನ್ಯವಾಗಿತ್ತು. ಈ ಶೋಷಣೆಯಿಂದ ಅವರನ್ನು ಮುಕ್ತಗೊಳಿಸಲು ಸಹಕಾರಿ ಸಾಲ ವ್ಯವಸ್ಥೆಯನ್ನು ಪರಿಚಯಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಟ್ಟಮೊದಲ ಸಹಕಾರ ಸಂಘ ಸ್ಥಾಪಿಸಿದ ಹಿರಿಮೆ ಅವರದು.
ಜಿಲ್ಲಾಮಟ್ಟದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪಿಸಿ, ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ನೆರವು ದೊರೆಯುವಂತೆ ಮಾಡಿದರು. “ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ” ಎಂಬ ಸಹಕಾರ ಸೂತ್ರವನ್ನು ಜನಪ್ರಿಯಗೊಳಿಸಿ, ರೈತರಲ್ಲಿ ಒಗ್ಗಟ್ಟು ಮತ್ತು ಸ್ವಾವಲಂಬನೆಯ ಭಾವನೆ ಬೆಳೆಸಿದರು.
ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳನ್ನು ಉತ್ತೇಜಿಸಿದರು. ಹಳ್ಳಿಗಳಲ್ಲಿ ಸಾಕ್ಷರತೆ ಹೆಚ್ಚಿಸಲು ವಯಸ್ಕರ ಶಿಕ್ಷಣ ತರಗತಿಗಳು ಮತ್ತು ರಾತ್ರಿ ಶಾಲೆಗಳನ್ನು ಪ್ರಾರಂಭಿಸಿದರು. ರಸ್ತೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ನೈರ್ಮಲ್ಯ ಮತ್ತು ಗ್ರಾಮಾಭಿವೃದ್ಧಿಗೆ ಗ್ರಾಮ ಸುಧಾರಣಾ ಸಮಿತಿಗಳನ್ನು ರಚಿಸಿದರು.
ಗಾಂಧೀಜಿಯವರ “ಗ್ರಾಮ ಸ್ವರಾಜ್ಯ” ಪರಿಕಲ್ಪನೆಯಿಂದ ಪ್ರೇರಿತರಾದ ಅವರು, ಖಾದಿ, ಕೈಮಗ್ಗ ಮತ್ತು ಗ್ರಾಮೋದ್ಯೋಗಗಳಿಗೆ ಉತ್ತೇಜನ ನೀಡಿದರು. ಕೃಷಿಯೇತರ ಅವಧಿಯಲ್ಲಿ ರೈತರಿಗೆ ಉದ್ಯೋಗ ದೊರೆಯುವಂತೆ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಇದರ ಮೂಲಕ ಗ್ರಾಮಸ್ಥರಿಗೆ ತಮ್ಮ ಊರಲ್ಲೇ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಕಲ್ಪಿಸಿದರು.
ಗ್ರಾಮೀಣ ಆರ್ಥಿಕಾಭಿವೃದ್ಧಿ, ರೈತರ ಸ್ವಾವಲಂಬನೆ ಹಾಗೂ ಸಹಕಾರಿ ಸಂಸ್ಥೆಗಳ ಬಲವರ್ಧನೆಗೆ ಮೊಳಹಳ್ಳಿ ಶಿವರಾಯರು ಸಲ್ಲಿಸಿದ ಸೇವೆ ಅಪಾರವಾಗಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ, ಕೃಷಿ ಪರಿಕರಗಳು ಹಾಗೂ ಅಗತ್ಯ ಸೇವೆಗಳು ದೊರೆಯುವಂತೆ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಿದರು. ಸ್ವಸಹಾಯ ಪದ್ಧತಿ, ಪ್ರಜಾಪ್ರಭುತ್ವದ ಆಡಳಿತ, ಪಾರದರ್ಶಕತೆ ಮತ್ತು ಸದಸ್ಯರ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಿದರು.
ಹೊಸ ತಲೆಮಾರಿನ ಸಹಕಾರಿ ನಾಯಕರನ್ನು ರೂಪಿಸುವಲ್ಲಿ ಅವರ ನಾಯಕತ್ವ ಅನೇಕರಿಗೆ ಪ್ರೇರಣೆಯಾಯಿತು. ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದ ಕರ್ನಾಟಕದ ಸಹಕಾರ ಕ್ಷೇತ್ರಕ್ಕೆ ಭದ್ರ ಅಡಿಪಾಯ ನಿರ್ಮಾಣವಾಯಿತು. ಗ್ರಾಮೀಣ ಜನರ ಆರ್ಥಿಕ ಸಬಲೀಕರಣ, ರೈತರ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಗೆ ಅವರು ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿದೆ.
ಮೊಳಹಳ್ಳಿ ಶಿವರಾಯರು ಕೇವಲ ಒಂದು ಸಂಸ್ಥೆ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಸಹಕಾರ ತತ್ವದ ಮೂಲಕ ದಕ್ಷಿಣ ಕನ್ನಡದ ಬಡ, ಹಿಂದುಳಿದ ಮತ್ತು ಶೋಷಿತ ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸಿದ ಮಹಾನ್ ಸಮಾಜ ಸುಧಾರಕರು. ಅವರ ಜೀವನ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಸಹಕಾರದ ಮೂಲಕ ಸಮಾಜ ಕಟ್ಟಬಹುದು, ಸಮಾಜದ ಮೂಲಕ ರಾಷ್ಟ್ರವನ್ನು ಕಟ್ಟಬಹುದು ಎಂಬ ಮಹತ್ವದ ಸಂದೇಶವನ್ನು ಅವರು ತಮ್ಮ ಬದುಕಿನ ಮೂಲಕ ಸಾರಿದರು.
ಸಮಾಜ ಕಟ್ಟುವುದು ಸುಲಭವಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಟ್ಟಮೊದಲ ಸಹಕಾರಿ ಸಂಘವು 1909ರಲ್ಲಿ ಪುತ್ತೂರಿನಲ್ಲಿ ಮೊಳಹಳ್ಳಿ ಶಿವರಾಯರ ನೇತೃತ್ವದಲ್ಲಿ ಸ್ಥಾಪಿತವಾಯಿತು. “ಪುತ್ತೂರು ಗ್ರಾಮೀಣ ಸಹಕಾರ ಸಂಘ” ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆ ಆರಂಭದಲ್ಲಿ ಬ್ಯಾಂಕ್ ಸ್ವರೂಪದಲ್ಲಿರದೆ, ಸಂಘದ ರೂಪದಲ್ಲಿತ್ತು. ಈ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಚಳವಳಿಗೆ ಭದ್ರ ಅಡಿಪಾಯ ನಿರ್ಮಾಣವಾಯಿತು.
ಒಂದು ಸಂಘ ಕಟ್ಟುವುದು, ಸಮಾಜ ನಿರ್ಮಾಣ ಮಾಡುವುದು ಅಥವಾ ದೇಶ ಕಟ್ಟುವುದು ಸುಲಭದ ಕೆಲಸವಲ್ಲ. ಅದು ಸಾಹಸ, ತಾಳ್ಮೆ, ದೂರದೃಷ್ಟಿ ಮತ್ತು ಜನರ ಮನಸ್ಸನ್ನು ಅರಿಯುವ ಸಾಮರ್ಥ್ಯವನ್ನು ಬೇಡುತ್ತದೆ. ಮೊಳಹಳ್ಳಿ ಶಿವರಾಯರು ಅಂಥ ಸಾಹಸಿಕ ಕಾರ್ಯಕ್ಕೆ ಕೈಹಾಕಿದರು. ಅವರು ಜನರ ಬದುಕನ್ನು ಅಧ್ಯಯನ ಮಾಡಿ, ಅವರ ಅಗತ್ಯಗಳನ್ನು ಅರ್ಥಮಾಡಿಕೊಂಡು, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ರೈತರೇ ದೇಶದ ಬೆನ್ನೆಲುಬು ಎಂಬ ನಂಬಿಕೆಯಿಂದ, ರೈತರ ಆದಾಯ ಹೆಚ್ಚಿಸುವುದು ದೇಶದ ಅಭಿವೃದ್ಧಿಗೆ ಅಗತ್ಯ ಎಂದು ಅವರು ತಿಳಿದುಕೊಂಡಿದ್ದರು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲು ಮಾರ್ಗದರ್ಶನ ನೀಡಿದರು. ರೈತರ ಮಕ್ಕಳಿಗೆ ಶಿಕ್ಷಣ ಅಗತ್ಯ ಎಂಬುದನ್ನು ಮನಗಂಡು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೂ ಮುಂದಾದರು.
ಹೀಗೆ ಮೊಳಹಳ್ಳಿ ಶಿವರಾಯರು ಸಹಕಾರವನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿರಿಸದೆ, ಸಮಾಜ ನಿರ್ಮಾಣದ ಶಕ್ತಿಯಾಗಿ ರೂಪಿಸಿದರು. ಅವರ ಬದುಕು ನಮಗೆ ನೀಡುವ ಸಂದೇಶ ಸ್ಪಷ್ಟ — ಸಹಕಾರ ಎಂದರೆ ಕೇವಲ ಸಂಘವಲ್ಲ; ಅದು ಸಮಾನತೆ, ಸ್ವಾವಲಂಬನೆ ಮತ್ತು ಸಮಗ್ರ ಸಮಾಜ ನಿರ್ಮಾಣದ ಮಹಾನ್ ಚಳವಳಿಯಾಗಿದೆ.

ಡಾ.ಎಸ್. ಆರ್. ಹರೀಶ್ ಆಚಾರ್ಯ
ಅಧ್ಯಕ್ಷರು, ಸಹಕಾರ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮಂಗಳೂರು

