ಕಟಪಾಡಿಯಲ್ಲಿ ಎಂಸಿಸಿ ಬ್ಯಾಂಕ್ನ 23ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಅಭಿಮತ
ಮಂಗಳೂರು: ಸಹಕಾರ ಬ್ಯಾಂಕಿಂಗ್, ಗ್ರಾಹಕ ಕೇಂದ್ರಿತ ಸೇವೆ ಹಾಗೂ ಸುಸ್ಥಿರ ಬೆಳವಣಿಗೆಯತ್ತ ಎಂಸಿಸಿ ಬ್ಯಾಂಕ್ ಅಚಲ ಬದ್ಧತೆ ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್ ಸಾಧಿಸಿರುವ ಅಭೂತಪೂರ್ವ ಪರಿವರ್ತನೆ ಮತ್ತು ಪ್ರಗತಿಯೇ ಇದಕ್ಕೆ ಸಾಕ್ಷಿ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಕಟಪಾಡಿಯ ಮೂಡುಬೆಟ್ಟು, ಹಳೆಯ ಅಂಚೆ ಕಚೇರಿ ರಸ್ತೆಯಲ್ಲಿರುವ ಗ್ಲೋಬಲ್ ರೆಸಿಡೆನ್ಸಿ ಕಟ್ಟಡದ ನೆಲ ಮಹಡಿಯಲ್ಲಿ ಭಾನುವಾರ ಎಂಸಿಸಿ ಬ್ಯಾಂಕ್ನ 23ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಟಪಾಡಿ ಭಾಗದ ಜನ ಎಂಸಿಸಿ ಬ್ಯಾಂಕ್ ಮೇಲೆ ಇರಿಸಿರುವ ವಿಶ್ವಾಸವೇ ನೂತನ ಕಟಪಾಡಿ ಶಾಖೆಯನ್ನು ಮತ್ತೊಂದು ಯಶೋಗಾಥೆಯನ್ನಾಗಿ ರೂಪಿಸಲಿದೆ. ಕೇವಲ ಆರು ತಿಂಗಳ ಅವಧಿಯಲ್ಲಿ ಈ ಶಾಖೆ ₹10 ಕೋಟಿ ವ್ಯವಹಾರದ ಗುರಿ ತಲುಪಲಿದೆ ಎಂಬ ದೃಢ ವಿಶ್ವಾಸವಿದೆ ಎಂದು ಹೇಳಿದರು.
ಪ್ರಸ್ತುತ ಎಂಸಿಸಿ ಬ್ಯಾಂಕ್ ವಿಸ್ತರಣೆಯ ಪರ್ವದಲ್ಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನ ಎಂಸಿಸಿ ಬ್ಯಾಂಕ್ ಅನ್ನು ತಮ್ಮದೇ ಸಂಸ್ಥೆಯಾಗಿ ಆತ್ಮೀಯವಾಗಿ ಸ್ವೀಕರಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಪಾರದರ್ಶಕ ಆಡಳಿತ ಹಾಗೂ ಗ್ರಾಹಕರ ತೃಪ್ತಿಗೆ ಮೊದಲ ಆದ್ಯತೆ ನೀಡಿರುವುದೇ ಬ್ಯಾಂಕ್ನ ಯಶಸ್ಸಿನ ಮೂಲ ಕಾರಣಗಳಾಗಿವೆ. ಕಳೆದ ಎಂಟು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್ ತನ್ನ ಒಟ್ಟು ವ್ಯವಹಾರವನ್ನು ₹500 ಕೋಟಿಯಿಂದ ₹1,600 ಕೋಟಿಗೂ ಅಧಿಕ ಮಟ್ಟಕ್ಕೆ ಏರಿಸಿದ್ದು, ಸುಮಾರು ಮೂರು ಪಟ್ಟು ಬೆಳವಣಿಗೆ ದಾಖಲಿಸಿದೆ. “ಮಾನವೀಯ ಸ್ಪರ್ಶದೊಂದಿಗೆ ನಗುಮೊಗದ ಸೇವೆ” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಿರುವುದೇ ಈ ಸಾಧನೆಗೆ ಕಾರಣವಾಗಿದ್ದು, ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಂಸಿಸಿ ಬ್ಯಾಂಕ್ಗೆ ವಿಶಿಷ್ಟ ಗುರುತನ್ನು ತಂದುಕೊಟ್ಟಿದೆ ಎಂದು ಅನಿಲ್ ಲೋಬೊ ಹೇಳಿದರು.
ತಮ್ಮನ್ನು “ಎಂಸಿಸಿ ಬ್ಯಾಂಕ್ನ ಜೀರ್ಣೋದ್ಧಾರಕ” ಎಂದು ಜನರು ಪ್ರೀತಿಯಿಂದ ಕರೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ಪರಿವರ್ತನೆ ತಮ್ಮೊಬ್ಬರ ಸಾಧನೆಯಲ್ಲ, ನಿರ್ದೇಶಕರ ಮಂಡಳಿ, ಆಡಳಿತ ವರ್ಗ ಹಾಗೂ ಸಿಬ್ಬಂದಿಯ ಸಮೂಹ ಪ್ರಯತ್ನದ ಫಲ ಎಂದು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕ್ನ ವಿವಿಧ ಶಾಖೆಗಳನ್ನು ನವೀಕರಿಸುವುದು, ಗ್ರಾಹಕ ಸೇವೆಯನ್ನು ಆಧುನೀಕರಿಸುವುದು, ಸಂಸ್ಥಾಪಕರ ದೂರದೃಷ್ಟಿಯನ್ನು ಪುನರುಜ್ಜೀವನಗೊಳಿಸುವುದು, ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದು, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವುದು ಹಾಗೂ ಎನ್ಆರ್ಐ ಬ್ಯಾಂಕಿಂಗ್ ಸೌಲಭ್ಯವನ್ನು ಮರುಪ್ರಾರಂಭಿಸುವ ಮೂಲಕ ಬ್ಯಾಂಕ್ ನ್ನು ಕಾಲಾನುಸಾರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ಆರು ಹೊಸ ಶಾಖೆಗಳನ್ನು ಆರಂಭಿಸಲಾಗಿದ್ದು, ಇತ್ತೀಚಿಗೆ ಸ್ಥಾಪನೆಯಾದ ದೇರಳಕಟ್ಟೆ ಶಾಖೆಯನ್ನು ಬಿಟ್ಟು ಉಳಿದ ಐದು ಶಾಖೆಗಳು ಕಾರ್ಯಾರಂಭದ ಮೊದಲ ವರ್ಷದಲ್ಲೇ ₹10 ಕೋಟಿ ವ್ಯವಹಾರ ಸಾಧಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಬ್ಯಾಂಕ್ನ ಸದೃಢ ವ್ಯವಹಾರ ಮಾದರಿ, ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ಹಾಗೂ ಗ್ರಾಹಕರ ವಿಶ್ವಾಸವೇ ಈ ಸಾಧನೆಯ ಹಿಂದಿನ ಪ್ರಮುಖ ಶಕ್ತಿಗಳಾಗಿವೆ ಎಂದು ಅವರು ಹೇಳಿದರು. ಕಟಪಾಡಿ ಭಾಗದ ಜನರು ಹೊಸ ಶಾಖೆಯನ್ನು ತಮ್ಮ ಪ್ರಥಮ ಆಯ್ಕೆಯ ಬ್ಯಾಂಕ್ ಆಗಿ ಬಳಸುವಂತೆ ಮನವಿ ಮಾಡಿದ ಅವರು, ಎಂಸಿಸಿ ಬ್ಯಾಂಕ್ ಇನ್ನಷ್ಟು ಎತ್ತರದ ಸಾಧನೆಗಳನ್ನು ತಲುಪಲು ತಮ್ಮ ಸಹಕಾರ ಮತ್ತು ಆಶೀರ್ವಾದವನ್ನು ಮುಂದುವರಿಸುವಂತೆ ಕೋರಿ, ಬ್ಯಾಂಕ್ನ ಪ್ರಗತಿಗೆ ನಿರಂತರ ಬೆಂಬಲ ನೀಡಿದ ನಿರ್ದೇಶಕರ ಮಂಡಳಿಯ ಸದಸ್ಯರಿಗೆ ಹಾಗೂ ಸೇವಾಭಾವದಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅವರು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎ. ಗಫೂರ್ ಸೇಫ್ ರೂಂ ಉದ್ಘಾಟಿಸಿದರು. ಕಟಪಾಡಿಯ ಸಂತ ವಿನ್ಸೆಂಟ್ ಡಿ ಪಾಲ್ ಚರ್ಚ್ ಧರ್ಮಗುರು ವಂ. ಫಾ| ರಾಜೇಶ್ ಪ್ರಸನ್ನ ದೀಪ ಪ್ರಜ್ವಲಿಸಿ ನೂತನ ಶಾಖೆಯನ್ನು ಆಶಿರ್ವಚಿಸಿದರು. ಸಿಎಸ್ಐ ಕ್ರೈಸ್ಟ್ ಚರ್ಚ್, ಕಟಪಾಡಿಯ ಪ್ರೆಸ್ಬಿಟರ್ ವಂ. ಅಕ್ಷಯ್ ಡಿ.ಅಮ್ಮಣ್ಣ, ಕರ್ನಾಟಕ ಕ್ರಿಶ್ಚಿಯನ್ ಸಹಕಾರ ಸಾಲ ಅಭಿವೃದ್ಧಿ ನಿಗಮ (ಕೆಸಿಸಿಡಿಸಿ), ಕರ್ನಾಟಕ ಸರ್ಕಾರದ ನಿರ್ದೇಶಕರಾದ ಪ್ರಶಾಂತ್ ಜತ್ತಣ್ಣ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ಎಸ್ವಿಎಸ್ ವಿದ್ಯಾವರ್ಧಕ ಸಂಘ ಕಟಪಾಡಿಯ ಕಾರ್ಯದರ್ಶಿ ಕೆ.ಸತ್ಯೇಂದ್ರ ಪೈ, ಚಾರ್ಟರ್ಡ್ ಅಕೌಂಟೆಂಟ್ ಸಿಎ ಪ್ರೀತೇಶ್ ಬರ್ಟನ್ ಡೇಸಾ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವ ಹಾಗೂ ಮಹಾಪ್ರಬಂಧಕರಾದ ಸುನೀಲ್ ಮಿನೇಜಸ್ ವೇದಿಕೆಯಲ್ಲಿದ್ದರು. ಸಿಎ ಪ್ರೀತೇಶ್ ಡೇಸಾ ಅವರನ್ನು ವಿಶೇಷ ನಾಯಕತ್ವಕ್ಕಾಗಿ ಸನ್ಮಾನಿಸಲಾಯಿತು. ಗೌರವ ಅತಿಥಿ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಟಪಾಡಿಯಲ್ಲಿ ಎಂಸಿಸಿ ಬ್ಯಾಂಕ್ನ ನೂತನ ಶಾಖೆ ಆರಂಭಗೊಂಡಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಡೇವಿಡ್ ಡಿಸೋಜ, ಜೆ.ಪಿ. ರೋಡ್ರಿಗಸ್, ಹೆರಾಲ್ಡ್ ಮೊಂತೇರೊ, ಎಲ್ರೊಯ್ ಕಿರಣ್ ಕ್ರಾಸ್ತೊ, ಐರಿನ್ ರೆಬೆಲ್ಲೊ, ವಿನ್ಸೆಂಟ್ ಲಸ್ರಾದೊ, ಆಂಡ್ರೂ ಡಿಸೋಜ, ರೋಶನ್ ಡಿಸೋಜ, ಫೆಲಿಕ್ಸ್ ಡಿ’ಕ್ರೂಜ್ ಹಾಗೂ ಸುಶಾಂತ್ ಸಲ್ಡಾನ್ಹಾ ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.


