ರಾಜ್ಯಸಭೆಯಲ್ಲಿ ಸಹಕಾರ ಸಚಿವ ಅಮಿತ್ ಷಾ ಮಾಹಿತಿ
ನವದೆಹಲಿ: ದೇಶದಲ್ಲಿ ಒಟ್ಟು 8.53 ಲಕ್ಷ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಈ ಪೈಕಿ 6.63 ಲಕ್ಷ ಸಂಘಗಳು ಕಾರ್ಯನಿರ್ವಹಿಸುತ್ತಿವೆ, 1.41 ಲಕ್ಷ ಸಂಘಗಳು ನಿಷ್ಕ್ರಿಯವಾಗಿವೆ ಹಾಗೂ 49,177 ಸಂಘಗಳು ವಿಲೇವಾರಿ (Liquidation) ಪ್ರಕ್ರಿಯೆಯಲ್ಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
https://chat.whatsapp.com/FCEnlTkAKCC0MGPhXtX4i4
2026ರ ಜುಲೈ 15ರ ರಾಷ್ಟ್ರೀಯ ಸಹಕಾರ ಡೇಟಾಬೇಸ್ (NCD) ಮಾಹಿತಿಯನ್ನು ಆಧರಿಸಿ ಸಚಿವರು ಈ ಅಂಕಿ-ಅಂಶಗಳನ್ನು ನೀಡಿದ್ದಾರೆ. ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಪೈಕಿ 3.56 ಲಕ್ಷ ಸಂಘಗಳು ಲಾಭದಲ್ಲಿ ನಡೆಯುತ್ತಿದ್ದರೆ, 2.50 ಲಕ್ಷ ಸಂಘಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮತ್ತೊಂದೆಡೆ, 56,689 ಸಹಕಾರ ಸಂಘಗಳ ಹಣಕಾಸು ಸ್ಥಿತಿಗೆ ಸಂಬಂಧಿಸಿದ ಮಾಹಿತಿ ಲಭ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಸಹಕಾರ ಸಂಘಗಳ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸಹಕಾರ ಸಚಿವಾಲಯ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳು (PACS), ಹೈನುಗಾರಿಕೆ ಹಾಗೂ ಮೀನುಗಾರಿಕೆ ಸಹಕಾರ ಸಂಘಗಳನ್ನು ಬಹುಉದ್ದೇಶದ ಸಹಕಾರ ಸಂಘಗಳಾಗಿ ಪರಿವರ್ತಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಬಹುಉದ್ದೇಶದ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಸಹಕಾರ ಸಂಘಗಳ ಆದಾಯದ ಮೂಲಗಳನ್ನು ವಿಸ್ತರಿಸಿ, ಆರ್ಥಿಕವಾಗಿ ಸದೃಢಗೊಳಿಸುವುದು ಹಾಗೂ ಅವುಗಳು ನಿಷ್ಕ್ರಿಯವಾಗುವ ಅಥವಾ ಮುಚ್ಚುವ ಅಪಾಯವನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಷ್ಟ್ರೀಯ ಸಹಕಾರ ಡೇಟಾಬೇಸ್ ಬಳಕೆ
ದೇಶದ ವಿವಿಧ ಪ್ರದೇಶಗಳಲ್ಲಿ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿರುವ ಕೊರತೆಗಳನ್ನು ಗುರುತಿಸಲು ರಾಷ್ಟ್ರೀಯ ಸಹಕಾರ ಡೇಟಾಬೇಸ್ (NCD) ಅನ್ನು ಬಳಸಲಾಗುತ್ತಿದೆ. ಇದರ ಆಧಾರದ ಮೇಲೆ ಅಗತ್ಯವಿರುವ ಪ್ರದೇಶಗಳಲ್ಲಿ ಹೊಸ ಬಹುಉದ್ದೇಶದ ಸಹಕಾರ ಸಂಘಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಮಿತ್ ಷಾ ಹೇಳಿದ್ದಾರೆ. ಇದರ ಜೊತೆಗೆ, ಸಹಕಾರ ಸಂಘಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಹಕಾರ ಸಂಘಗಳ ರ‍್ಯಾಂಕಿಂಗ್ ವ್ಯವಸ್ಥೆ (Cooperative Ranking Framework) ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಬಹು-ರಾಜ್ಯ ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಹಕಾರ ಪುನರ್ವಸತಿ, ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ನಿಧಿ (Co-operative Rehabilitation, Reconstruction and Development Fund) ಸ್ಥಾಪಿಸಿದೆ. 2023ರ ತಿದ್ದುಪಡಿ ಮಾಡಲಾದ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ ಅಡಿಯಲ್ಲಿ ಈ ನಿಧಿಯನ್ನು ಸ್ಥಾಪಿಸಲಾಗಿದ್ದು, ಸಂಕಷ್ಟದಲ್ಲಿರುವ ಸಹಕಾರ ಸಂಘಗಳ ಪುನರುಜ್ಜೀವನದ ಜೊತೆಗೆ ಅವುಗಳ ಮೂಲಸೌಕರ್ಯವನ್ನು ಬಲಪಡಿಸಲು ಇದು ನೆರವಾಗಲಿದೆ ಎಂದು ಅಮಿತ್ ಷಾ ಮಾಹಿತಿ ನೀಡಿದ್ದಾರೆ.


