ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅಭಿಪ್ರಾಯ
ಬೆಳಗಾವಿ: ಸಹಕಾರಿ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯವಾಗಿದ್ದು, ಠೇವಣಿದಾರರ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸಬಹುದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೆಳಗಾವಿ ಉಪವಿಭಾಗದ ಪತ್ತಿನ (ಕ್ರೆಡಿಟ್) ಸಹಕಾರಿ ಸಂಘಗಳು ಹಾಗೂ ನೌಕರರ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸರ್ವತೋಮುಖ ಬೆಳವಣಿಗೆ ಕುರಿತ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಕಾಪಾಡಿ, ಅಗತ್ಯ ಸಂದರ್ಭಗಳಲ್ಲಿ ಮರಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವಂತಹ ವಿಶ್ವಾಸವನ್ನು ನಿರ್ಮಿಸಬೇಕು. ಸಹಕಾರಿ ಯೂನಿಯನ್ಗಳು ಮತ್ತಷ್ಟು ಗಟ್ಟಿಯಾಗಿ ಬೆಳೆಯಬೇಕಿದ್ದು, ಸಹಕಾರಿ ಕ್ಷೇತ್ರ ಮತ್ತು ಬ್ಯಾಂಕುಗಳ ಪ್ರಗತಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ. ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು, ತರಬೇತಿ ಕಾರ್ಯಕ್ರಮಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ವಿಭಾಗದ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕರಾದ ಕಲ್ಲಪ್ಪ ಓಬಣ್ಣಗೋಳ ಮಾತನಾಡಿ, ತರಬೇತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿ ಸಂಸ್ಥೆಗಳ ಸಿಬ್ಬಂದಿ ಭಾಗವಹಿಸಿರುವುದು ಸಂತಸದ ಸಂಗತಿ. ಬ್ಯಾಂಕಿಂಗ್ ವ್ಯವಹಾರ, ರೈತರಿಗೆ ಸಾಲ ವಿತರಣೆ, ಬಡ್ಡಿದರ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳನ್ನು ಸುಸೂತ್ರವಾಗಿ ನಿರ್ವಹಿಸಲು ತರಬೇತಿ ಅತ್ಯಗತ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಸಂಘಗಳ ಮಹಾಮಂಡಳದ ನಿರ್ದೇಶಕ ಸಂಜಯ ಹೊಸಮಠ ಮಾತನಾಡಿ, ದಾಖಲಾತಿಗಳಿಲ್ಲದೆ ಯಾವುದೇ ವ್ಯಕ್ತಿಗೆ ಬ್ಯಾಂಕಿನಿಂದ ಹಣ ನೀಡಬಾರದು. ಸಹಕಾರಿ ಬ್ಯಾಂಕುಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೆ ಹೂಡಿಕೆದಾರರ ಹಣಕ್ಕೆ ಸಕಾಲದಲ್ಲಿ ಹಾಗೂ ಜವಾಬ್ದಾರಿಯುತವಾಗಿ ಸ್ಪಂದಿಸಬೇಕು. ಸಹಕಾರ ಮನೋಭಾವ ಇರುವವರೆಗೂ ಸಹಕಾರಿ ಕ್ಷೇತ್ರ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರಲಿದೆ ಎಂದು ಹೇಳಿದರು.
ತರಬೇತಿ ಕಾರ್ಯಕ್ರಮದಲ್ಲಿ ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಡಾ.ಗುರುಸ್ವಾಮಿ ಹಾಗೂ ಬೆಳಗಾವಿ ವಿಭಾಗದ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕ ಕಲ್ಲಪ್ಪ ಓಬಣ್ಣಗೋಳ ಸಹಕಾರಿ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆ ಕುರಿತು ಉಪನ್ಯಾಸ ನೀಡಿ ತರಬೇತಿ ನಡೆಸಿಕೊಟ್ಟರು. ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ, ನಿಂಗಪ್ಪ ಚಿಂಚಲಿ, ಜಿಲ್ಲಾ ಯೂನಿಯನ್ ಸಿಇಒ ಹಾಲಪ್ಪ ಜಗ್ಗಿನವರ, ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಸಂಘಗಳ ಮಹಾಮಂಡಳದ ನಿರ್ದೇಶಕರಾದ ಉಮೇಶ ಬಾಳಿ, ತಮ್ಮಣ್ಣ ಕೆಂಚರೆಡ್ಡಿ, ವರ್ಧಮಾನ ಭೋಳಿ, ಜಬಿಉಲ್ಲಾ ಖಾಜಿ, ಡಿಸಿಸಿ ಬ್ಯಾಂಕ್ ಸಿಇಒ ಎನ್.ಬಿ. ಕಲಾವಂತ, ಬಸಪ್ಪ ಗುರುಪಾದಪ್ಪ ಸಾಂತಿ, ಬಸವರಾಜ ಸಿದ್ದಪ್ಪ ಸುಲ್ತಾನಪುರಿ, ಶಿವಪ್ಪ ವೈ. ಮರ್ದಿ ಉಪಸ್ಥಿತರಿದ್ದರು.






