ರೂ. 308.58 ಲಕ್ಷ ನಿವ್ವಳ ಲಾಭ: ಆತ್ಮಶಕ್ತಿಯ ನಿರಂತರ ಸಾಧನೆಗೆ ಸದಸ್ಯರ ಶ್ಲಾಘನೆ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2025-26ನೇ ಸಾಲಿನ 15ನೇ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಪಡೀಲಿನ ಬೈರಾಡಿಕೆರೆ ಹತ್ತಿರದ ಸಂಘದ ಪ್ರಧಾನ ಕಚೇರಿ “ಆತ್ಮಶಕ್ತಿ ಸೌಧ”ದ ಸಭಾಂಗಣದಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಸಂಘದ 2025-26ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮಂಡಿಸಿದರು. ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘವು ಪ್ರಸ್ತುತ ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 35 ಶಾಖೆಗಳನ್ನು ಹೊಂದಿದ್ದು, 2026-27ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಹೊಸ ಶಾಖೆಗಳನ್ನು ತೆರೆದು, ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಿ ಪಾಲು ಬಂಡವಾಳವನ್ನು ರೂ. 3 ಕೋಟಿಗೆ ಹೆಚ್ಚಿಸಿ, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ.375 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ. 325 ಕೋಟಿಗೂ ಮಿಕ್ಕಿ ಸಾಲ ನೀಡುವ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಸದಸ್ಯರಿಗೆ ಉಚಿತ ವಿಮಾ ಸೌಲಭ್ಯ ಒದಗಿಸಲಾಗುವುದು ಎಂದರು. ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಮುಂದಕ್ಕೆ ಸಂಘವು ಹಾಕಿಕೊಂಡಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸದಸ್ಯರ ಸಹಕಾರ ಕೋರಿದರು. ಸಂಘವು ವರದಿ ಸಾಲಿನಲ್ಲಿ ಸದಸ್ಯರಿಂದ ಒಟ್ಟು ರೂ. 179.28 ಲಕ್ಷ ಷೇರು ಬಂಡವಾಳ, ರೂ. 30,531.54 ಲಕ್ಷ ಠೇವಣಿ ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ. 27884.33 ಲಕ್ಷ ಸಾಲ ನೀಡಲಾಗಿದೆ. ಸಂಘದ ದುಡಿಯುವ ಬಂಡವಾಳ ರೂ. 32,317.19 ಲಕ್ಷ ಹೊಂದಿದೆ. ಸಂಘದ ಸದಸ್ಯರಿಗೆ ವರದಿ ಸಾಲಿನಲ್ಲಿ ಶೇ.15 ಡಿವಿಡೆಂಡ್ ಘೋಷಿಸಲಾಯಿತು.
ಸಂಘವು 72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ “ಉತ್ತಮ ಆಡಳಿತಾತ್ಮಕ ಸಹಕಾರಿ ಸಂಘ” ಪ್ರಶಸ್ತಿ ಹಾಗೂ ಸದಸ್ಯರ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವುದರ ಜೊತೆಗೆ ಸಂಘದ ಕಾರ್ಯವೈಖರಿಯನ್ನು ಗುರುತಿಸಿ ಸತತ 10 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ, ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ ಸದಸ್ಯರ ಆರೋಗ್ಯದ ಕಾಳಜಿಯಿಂದ ಸತತವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುಕ್ಕೆ ಹಾಗೂ ಸಿಬ್ಬಂದಿಗಳ ನಗುಮೊಗದ ಗುಣಮಟ್ಟದ ಸೇವೆಗಳಿಗೆ ಸಭೆಯಲ್ಲಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಪ್ರತಿಭಾ ಪುರಸ್ಕಾರ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಗೌರವಾನ್ವಿತ ಸ್ಥಾನ ಅಲಂಕರಿಸಿದ ಸಂಘದ ಸದಸ್ಯರಾದ ಜಯಶೀಲ ಅಡ್ಯಂತಾಯ, ಆನಂದ ಕೆ ಅಸೈಗೋಳಿ, ಸೇಸಪ್ಪ ಪೂಜಾರಿ, ಅಶೋಕ್, ರಕ್ಷಿತ್ ಕುಮಾರ್, ಸುಚಿತ್ರ, ಸುಂದರ ಹೆಗ್ಡೆ, ಟೀಪೇಶ್ ಎಸ್.ಅಮೀನ್, ಸುಧೀರ್, ಸದಾನಂದ ಆಚಾರ್ಯ, ರೇವತಿ, ವೆಂಕಟೇಶ್ ಎಸ್ ಪೂಜಾರಿ, ಮನೋಜ್ ಎಸ್ ಸಾಲ್ಯಾನ್ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹುಮುಖ ಪ್ರತಿಭೆಯಾಗಿರುವ ಸಂಘದ ಸದಸ್ಯರ ಮಕ್ಕಳನ್ನು, ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘದ ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ್ ಎಸ್ ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಬಿ.ಪಿ. ದಿವಾಕರ್, ಗೋಪಾಲ್ ಎಮ್., ಚಂದ್ರಾವತಿ, ಉಮಾವತಿ ಉಪಸ್ಥಿತರಿದ್ದರು. ಚಿತ್ತರಂಜನ್ ಬೋಳಾರ್ ಸ್ವಾಗತಿಸಿ, ಉಪಾಧ್ಯಕ್ಷರಾದ ನೇಮಿರಾಜ್ ಪಿ. ವಂದಿಸಿದರು. ಅಭಿನಂದನಾ ಪುರಸ್ಕಾರ ಕಾರ್ಯಕ್ರಮವನ್ನು ಸಹಾಯಕ ಪ್ರಬಂಧಕರಾದ ವಿಶ್ವನಾಥ ಹಾಗೂ ಶಾಖಾಧಿಕಾರಿ ಧನಲಕ್ಷಿ ಕಾರ್ಯಕ್ರಮ ನಿರೂಪಿಸಿದರು.



