ವಿಶ್ವಕರ್ಮ ಕಲಾ ಪರಿಷತ್ ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಚಾರ್ಯ ಹರೀಶ್ ಶೆಟ್ಟಿ ಅಭಿಪ್ರಾಯ
ಮಂಗಳೂರು: ಇಂದು ಕಲಾವಿದರು, ಕುಶಲಕರ್ಮಿಗಳು, ಶಿಲ್ಪಿಗಳು ಎಐ ಇತ್ಯಾದಿ ವಿನೂತನ ತಂತ್ರಜ್ಞಾನಗಳ ಆಗಮನದಿಂದ ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಆದರೆ ನಿಜವಾದ ಪ್ರತಿಭೆ ಹಾಗೂ ಕೌಶಲ್ಯವುಳ್ಳವರು ಈ ಬಗ್ಗೆ ಆತಂಕ ಪಡಬೇಕಿಲ್ಲ. ಎಐ ಇತ್ಯಾದಿ ಡಿಜಿಟಲ್ ಟೂಲ್‌ಗಳನ್ನು ಬಳಸಿ ಸಮಯ ಹಾಗೂ ಪರಿಕರಗಳ ಬಳಕೆ ಕಡಿಮೆ ಮಾಡಿಕೊಂಡು ಇನ್ನೂ ವ್ಯಾಪಕವಾದ ಮಾರುಕಟ್ಟೆಗೆ ತಮ್ಮ ಕಲಾಕೃತಿಗಳು ತಲುಪುವಂತೆ ಮಾಡಿ ತಮ್ಮಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬಹುದು ಎಂದು ಖ್ಯಾತ ಸಾಫ್ಟ್‌ವೇರ್ ವಿಕಾಸಕ, ಕೆಪಿಟಿ ಮಂಗಳೂರು ಇದರ ನಿವೃತ್ತ ಪ್ರಾಚಾರ್ಯ ಹರೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
https://chat.whatsapp.com/FCEnlTkAKCC0MGPhXtX4i4
ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು, ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಆಶ್ರಯದಲ್ಲಿ ಕಲಾವಿದರು ಹಾಗೂ ಕುಶಲಕರ್ಮಿಗಳಿಗಾಗಿ ಪಾಲ್ಕೆ ಬಾಬುರಾಯ ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಇಂಪ್ಯಾಕ್ಟ್’ – ಹಸ್ತಕೌಶಲದಿಂದ ಹ್ಯಾಶ್‌ಟ್ಯಾಗ್‌ವರೆಗೆ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಚಿತ್ರ ಕಲಾವಿದ, ರುದ್ರ ಹನುಮಾನ್ ಖ್ಯಾತಿಯ ಕರಣ್ ಆಚಾರ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಮಾಧ್ಯಮವನ್ನು ಕೌಶಲ್ಯಯುಕ್ತವಾಗಿ ಜಾಣ್ಮೆಯಿಂದ ಬಳಸಿಕೊಂಡರೆ ಕಲಾವಿದರು ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಿ.ಉಪೇಂದ್ರ ಆಚಾರ್ಯ ಮಾತನಾಡಿ, ಇಂತಹ ಕಾರ್ಯಾಗಾರಗಳು, ಕಲಾವಿದರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಬಹಳ ಅಗತ್ಯ ಎಂದರು.
ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಸ್ ಪಿ ಗುರುದಾಸ್ ಸ್ವಾಗತಿಸಿದರು. ಭಜನೆ, ಸುಗಮ ಸಂಗೀತ ಹಾಗೂ ಮದರಂಗಿ ತರಬೇತಿ ತರಗತಿಗಳಿಗೆ ಚಾಲನೆಯ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರದ ಬಗ್ಗೆ ಪೂಜಾ ಆಚಾರ್ಯ ಮಾಹಿತಿ ನೀಡಿದರು. ಭರತ್ ರಾಜ್ ಬೈಕಾಡಿ ಮತ್ತು ಜೀವನ್ ಆಚಾರ್ಯ ಸಹಕರಿಸಿದರು. ಸಂಗೀತ ನಿರ್ದೇಶಕ ಕೆ.ರವಿಶಂಕರ್ ಹಾಗೂ ಸಂಗೀತ ಶಿಕ್ಷಕರಾದ ರತ್ನಾವತಿ ಜೆ. ಬೈಕಾಡಿ, ಮದರಂಗಿ ಕಲಾ ತರಬೇತಿದಾರರಾದ ಆದ್ವಿಕಾ ಆಚಾರ್ಯರು ಉಪಸ್ಥಿತರಿದ್ದರು. ಕಲಾ ಪರಿಷತ್ ನ ಕಾರ್ಯದರ್ಶಿ ರಮ್ಯಾ ಲಕ್ಷ್ಮೀಶ್ ಪ್ರಾರ್ಥನೆಗೈದರು ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com



