ಕಚ್ಚೂರು ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಯ
ಬ್ರಹ್ಮಾವರ: ಸಹಕಾರಿ ಸಂಸ್ಥೆಗಳು ಸಮುದಾಯದ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕು. ಆ ಮೂಲಕ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಶ್ರೀಕ್ಷೇತ್ರ ಕಚ್ಚೂರಿನಲ್ಲಿ ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಸಮುದಾಯವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲವಾಗಲು ಸಹಕಾರಿ ಸಂಸ್ಥೆಗಳು ಪೂರಕವಾಗಲಿ. ಕೇಂದ್ರದ ಹೊಸ ಸಹಕಾರಿ ಕಾಯ್ದೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ದೇಶದ ಶೇ.30ರಷ್ಟು ಜನರು ಸಹಕಾರಿ ಕ್ಷೇತ್ರಕ್ಕೆ ಒಳಪಟ್ಟಿದ್ದು, ಇದು ಶೇ.60ರಷ್ಟು ವ್ಯಾಪಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರು ಮಾತನಾಡಿ, ಕಚ್ಚೂರು ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸುತ್ತಿದ್ದಾರೆ. ತಂಡ ಪ್ರಯತ್ನದ ಫಲವಾಗಿ ಸಹಕಾರಿ ಸಂಸ್ಥೆಯೂ ಪ್ರಾರಂಭವಾಗಿದೆ. ಪ್ರತಿ ರೂಪಾಯಿಗೂ ಭದ್ರತೆ ಒದಗಿಸುವುದು ಮತ್ತು ಜನರ ನಂಬಿಕೆ, ಆಶಯಕ್ಕೆ ಕುಂದು ಬಾರದಂತೆ ಚಟುವಟಿಕೆ ನಡೆಸುವುದು ನಮ್ಮ ಕರ್ತವ್ಯ. ಪ್ರತಿ ತಾಲೂಕಿನಲ್ಲಿ ಸಮುದಾಯ ಭವನ ನಿರ್ಮಾಣವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಕಚ್ಚೂರಿನ ಅಧ್ಯಕ್ಷ ಶಿವಪ್ಪ ನಂತೂರು ದೀಪ ಪ್ರಜ್ವಲಿಸಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಚೇರಿ ಉದ್ಘಾಟಿಸಿದರು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಠೇವಣಿ ಪತ್ರ ಬಿಡುಗಡೆಗೊಳಿಸಿದರು, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಲಾಂಛನ ಅನಾವರಣಗೊಳಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ಕ್ಷೇತ್ರ ಕಚ್ಚೂರಿನ ಗುರಿಕಾರ ಕಮಲಾಕ್ಷ ಎಚ್., ಉದ್ಯಮಿ ಕುತ್ಯಾರು ನವೀನ್ ಶೆಟ್ಟಿ ಉಡುಪಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬಾರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ ಎಸ್‌ಸಿಡಿಸಿಸಿ ಬ್ಯಾಂಕ್ ಬಾರ್ಕೂರು ಶಾಖೆಯ ಮ್ಯಾನೇಜರ್ ರೂಪರಾಣಿ ವಿ. ಶೆಟ್ಟಿ ಸೊಸೈಟಿ ಉಪಾಧ್ಯಕ್ಷರು, ನಿರ್ದೇಶಕರು ಮತ್ತಿತರರು ಹಾಜರಿದ್ದರು. ಪ್ರಭಾಕರ ಮಣೂರು, ಪ್ರಸನ್ನ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿ, ಸಿಇಒ ರಾಹುಲ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com



