ಮಂಗಳೂರು: ರಾಜ್ಯದ ಮುಂಚೂಣಿಯ ಕ್ರೆಡಿಟ್ ಸಹಕಾರ ಸಂಘವಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪಡೀಲ್ ಶಾಖೆಯನ್ನು ದ.ಕ. ಜಿಲ್ಲಾಧಿಕಾರಿ ಕಾರ್ಯಾಲಯ ಪ್ರಜಾಸೌಧಕ್ಕೆ ಬುಧವಾರ ಸ್ಥಳಾಂತರ ಮಾಡಲಾಯಿತು.
https://chat.whatsapp.com/FCEnlTkAKCC0MGPhXtX4i4
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಕಚೇರಿ ಸಂಕೀರ್ಣದಲ್ಲಿ ಬ್ಯಾಂಕುಗಳ ಹಾಗೆಯೇ ಜನಸಾಮಾನ್ಯರಿಗೆ ಆರ್ಥಿಕ ಸವಲತ್ತುಗಳನ್ನು ನೀಡಿ ಜನರ ಆರ್ಥಿಕ ಅಭ್ಯುದಯಕ್ಕೆ ಕೊಡುಗೆ ನೀಡುತ್ತಿರುವ ಸಹಕಾರ ಸಂಘಗಳಿಗೆ ಅವಕಾಶ ನೀಡಬೇಕು ಎಂಬ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶ್ರೀ ರಾಮಕೃಷ್ಣ ಸೊಸೈಟಿಗೆ ಅವಕಾಶ ಕಲ್ಪಿಸಲಾಗಿದೆ. ಶ್ರೀ ರಾಮಕೃಷ್ಣ ಸೊಸೈಟಿಯು ಹೆಚ್ಚು ಹೆಚ್ಚು ವಹಿವಾಟು ಮಾಡಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ, ರಾಜ್ಯದಲ್ಲಿ ಸಹಕಾರ ಚಳವಳಿಯು ಗದಗದಲ್ಲಿ ಆರಂಭವಾಗಿದ್ದರೂ, ಅದು ಅತ್ಯುತ್ತಮವಾಗಿ ಪ್ರಗತಿ ಹೊಂದಿ ಜನರ ವಿಶ್ವಾಸಕ್ಕೆ ಪಾತ್ರವಾಗಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲೆಗಳಲ್ಲಿ. ಇದಕ್ಕೆ ಪೂರಕವಾಗಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಒಳ್ಳೆಯ ಕೆಲಸ ಮಾಡುತ್ತಿದ್ದು, ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ಪಡೀಲ್ ಶಾಖೆಯು ಸ್ಥಾಪನೆಯ ಕಿರು ಅವಧಿಯಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದೆ. ಪ್ರತಿಷ್ಠಿತ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ವ್ಯವಹಾರವನ್ನು ಇನ್ನಷ್ಟು ವೃದ್ಧಿಪಡಿಸಲಿ ಎಂದು ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಕೆ.ಜೈರಾಜ್ ಬಿ. ರೈ ಸಂಘದ ಕಾರ್ಯವೈಖರಿಯನ್ನು ವಿವರಿಸಿ ಸಂಘದ ಪಡೀಲ್ ಶಾಖೆಗೆ ಸ್ಥಳಾವಕಾಶ ಒದಗಿಸಿಕೊಟ್ಟು ಸಹಕರಿಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಲಕ್ಷ್ಮೀ ಜಯಪಾಲ ಶೆಟ್ಟಿಯವರ ಸಂದೇಶವನ್ನು ವಾಚಿಸಲಾಯಿತು. ಸಂಘದ ನಿರ್ದೇಶಕರಾದ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ಪಿ.ಶಿವರಾಮ ಅಡ್ಯಂತಾಯ, ವಿಠಲ ಪಿ. ಶೆಟ್ಟಿ, ಪಿ.ಬಿ. ದಿವಾಕರ ರೈ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಯಕ್ ಹಾಗೂ ಡಾ| ಬಿ. ಸಂಜೀವ ರೈ ಮತ್ತು ಮಹಾಪ್ರಬಂಧಕರಾದ ಗಣೇಶ್ ಜಿ.ಕೆ. ಉಪಸ್ಥಿತರಿದ್ದರು. ಪಡೀಲ್ ಶಾಖಾ ಉಸ್ತುವಾರಿ ನಿರ್ದೇಶಕರಾದ ಎಂ.ರಾಮಯ ಶೆಟ್ಟಿ ವಂದನಾರ್ಪಣೆ ನೀಡಿದರು. ಶಾಖಾಧಿಕಾರಿ ಅಶ್ವಿನಿ ಎಸ್.ಶೆಟ್ಟಿ ಪ್ರಾರ್ಥಿಸಿದರು, ಕೇಂದ್ರ ಕಚೇರಿ ವ್ಯವಸ್ಥಾಪಕ ಶಮಂತ್ ಟಿ. ರೈ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

