ಶಂ.ನಾ.ಖಂಡಿಗೆ
1927 ಜೂನ್ 8 ಸಾಮಾನ್ಯ ದಿನವಲ್ಲ. ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ಕೊಡುತ್ತಿರುವ, ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಬಹುಪಾಲು ಕಾರಣವಾಗಿರುವ ಅಡಿಕೆ ಕೃಷಿಕರಿಗೆ ಹೊಸ ಬೆಳಕಾದ ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯನ್ನು ಸ್ಥಾಪಿಸಿದ ಕ್ಯಾಂಪ್ಕೊ ಬ್ರಹ್ಮ, ಯುಗಪುರುಷ, ವಾರಣಾಶಿ ಸುಬ್ರಾಯ ಭಟ್ಟರು ಜನ್ಮ ತಾಳಿದ ದಿನ.
https://chat.whatsapp.com/FCEnlTkAKCC0MGPhXtX4i4
ಸುಬ್ರಾಯ ಭಟ್ಟರು ಹುಟ್ಟಿದ ಊರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲು. ತಂದೆ ವಾರಣಾಶಿ ಕೃಷ್ಣಯ್ಯ, ತಾಯಿ ತಿರುಮಲೇಶ್ವರಿ ಅಮ್ಮ. ಸುಬ್ರಾಯ ಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸ ಮೂಡಂಬೈಲು ಸರಕಾರಿ ಶಾಲೆಯಲ್ಲಿ. 6 ಮತ್ತು 8ನೇ ತರಗತಿ ಕಲಿಕೆ ಅಡ್ಯನಡ್ಕದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಪ್ರೌಢಶಾಲಾ ವಿದ್ಯಾಭ್ಯಾಸ ನೀಲೇಶ್ವರದಲ್ಲಿ ಮಾಡಿದರು. ಹದಿನೈದನೇ ವರ್ಷದಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ಶಿಕ್ಷಣ ಸಂಸ್ಥೆಯ ವಿದ್ಯಾಭ್ಯಾಸ ಅನಿವಾರ್ಯ ಕಾರಣಗಳಿಂದ ಮುಂದುವರಿಸಲಾಗಲಿಲ್ಲ. ಆದರೆ ಸಮಾಜದಲ್ಲಿ ನಿತ್ಯ ನಿರಂತರ ಓಡಾಟ, ಒಡನಾಟ, ಪಡೆದುಕೊಂಡ ಅನುಭವ, ತಂದೆಯವರ ಜೊತೆಗಿನ ಸಾಮೀಪ್ಯ ವಾರಣಾಶಿಯವರು ವ್ಯವಹಾರ ಚತುರರಾಗಿ ಬೆಳೆಯಲು ಕಾರಣವಾಯಿತು. ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ದೀರ್ಘಕಾಲದ ಸೇವೆ ಅವರನ್ನು ಒಬ್ಬ ದಾರ್ಶನಿಕ, ಕತೃತ್ವ ಶಕ್ತಿಯುಳ್ಳ ಅಪ್ರತಿಮ ಸಾಧಕನನ್ನಾಗಿ ರೂಪುಗೊಳಿಸಿತು.

ತಾನು ಸ್ವತಃ ಅಡಿಕೆ ಕೃಷಿಕ. ಊರೆಲ್ಲಾ ಕೃಷಿಕರು ಕಡಿಮೆ ಬೆಲೆಗೆ ಹಣ್ಣಡಿಕೆ ಮಾರಾಟ ಮಾಡಿ ಬದುಕುವ ಕಷ್ಟಗಳನ್ನು ಕಣ್ಣಾರೆ ಕಂಡ ವಾರಣಾಶಿ ಸುಬ್ರಾಯ ಭಟ್ಟರು ಏನಾದರೂ ಮಾಡಬೇಕೆಂದು ಯೋಚಿಸಿದರು. ಕೆಂಪಡಿಕೆ ಬಿಸಿಲಿಗೆ ಒಣಗಿಸಿ ಚಾಲಿ ಅಡಿಕೆ ಮಾಡಿ ಅದಕ್ಕೆ ಮಂಗಳೂರಿನ ಮಾರುಕಟ್ಟೆ ಪರಿಚಯಿಸಿದರು. ಮುಂದೆ 1973 ಜುಲೈ 11ರಂದು ಅಡಿಕೆ ಬೆಳೆಗಾರರ ಕಣ್ಮಣಿ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಸ್ಥಾಪಿಸಿದರು. ಸುಬ್ರಾಯ ಭಟ್ಟರ ನೇತೃತ್ವದಲ್ಲಿ ಅನೇಕ ಹಿರಿಯ ಕೃಷಿಕರು, ಸಹಕಾರಿಗಳು ಅವರಿಗೆ ಈ ಮಹಾನ್ ಕಾರ್ಯದಲ್ಲಿ ಹೆಗಲಾಗಿದ್ದರು. ಕ್ಯಾಂಪ್ಕೊ ಸಂಸ್ಥೆಯಿಂದ ವಿರಮಿಸಿದ ನಂತರ ಕಾಫಿ ಬೆಳೆಗಾರರ ಸಮಸ್ಯೆಗೆ ಓಗೊಟ್ಟು 1992ರಲ್ಲಿ ಕಾಫಿ ಬೆಳೆಗಾರರಿಗಾಗಿ ‘ಕೋಮಾರ್ಕ್’ ಸಂಸ್ಥೆ ಸ್ಥಾಪಿಸಿದರು.
1986ರಲ್ಲಿ ಪುತ್ತೂರಿನಲ್ಲಿ ಸ್ಥಾಪಿತವಾದ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ ಸಹಕಾರಿ ಕ್ಷೇತ್ರದ ದೇವ ಮಂದಿರ. ಆರೋಗ್ಯ ಕೈಗೊಡುತ್ತಿದ್ದರೂ ಲೆಕ್ಕಿಸದೆ ಅಂತಾರಾಷ್ಟ್ರೀಯ ದೈತ್ಯ ಕಂಪನಿಗಳ ಅಸಹಕಾರಕ್ಕೆ ಸಡ್ಡು ಹೊಡೆದು ವಿದೇಶಕ್ಕೆ ಹೋಗಿ ಅಗತ್ಯ ಯಂತ್ರಗಳನ್ನು ಖರೀದಿಸಿ ತಂದು ಫ್ಯಾಕ್ಟರಿಯನ್ನು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರಿಂದ ಉದ್ಘಾಟನೆಗೊಳ್ಳುವಂತೆ ಮಾಡಿದ ಅಪ್ರತಿಮ ಸಾಧಕ ಕ್ಯಾಂಪ್ಕೊ ಪಿತಾಮಹ ವಾರಣಾಶಿಯವರು. ಅಂತಾರಾಷ್ಟ್ರೀಯ ಗುಣಮಟ್ಟದ ಚಾಕೊಲೇಟ್‌ಗಳನ್ನು ಮತ್ತು ಕೊಕ್ಕೊ ಉತ್ಪನ್ನಗಳನ್ನು ಉತ್ಪಾದಿಸಿ ಹೆಸರುವಾಸಿಯಾದ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ ಕೊಕ್ಕೊ ಬೆಳೆಗಾರರ ಆಶಾಕಿರಣ. ಮೂರು ಶಿಫ್ಟ್‌ಗಳಲ್ಲಿ ಕೆಲಸ ನಿರ್ವಹಿಸಿ ಸಾವಿರಾರು ಕುಟುಂಬಗಳ ಜೀವನಕ್ಕೆ ಉಸಿರಾದ ಇದು ವಾರಣಾಶಿಯವರ ಛಲ, ಸಾಧನೆ, ಅವಿರತ ಪರಿಶ್ರಮಕ್ಕೆ ದ್ಯೋತಕ.
ಇಡೀ ದೇಶವೇ ಮೆಚ್ಚುವಂತೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಮಾತ್ರ ಸುಬ್ರಾಯ ಭಟ್ಟರ ಸಾಧನೆಯಲ್ಲ, ಮಂಗಳೂರಿನಿಂದ ಹಿಡಿದು ದೆಹಲಿಯ ತನಕ ಹತ್ತು ಹಲವಾರು ಕಡೆ ಸಂಸ್ಥೆಗೆ ನಿವೇಶನ ಖರೀದಿಸಿ ಕಟ್ಟಡ ನಿರ್ಮಿಸಿ ವ್ಯವಹಾರ ಹೆಚ್ಚಲು ಮತ್ತು ಸಂಸ್ಥೆ ಗಟ್ಟಿಯಾಗಿ ನೆಲೆಯೂರಲು ಕಾರಣರಾಗಿದ್ದಾರೆ. ಕೇರಳ ಮತ್ತು ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಖರೀದಿ, ವ್ಯವಹಾರ ಹೊಂದಿದ ಕ್ಯಾಂಪ್ಕೊ ದೇಶಾದ್ಯಂತ ತನ್ನ ಮಾರಾಟ ಕೇಂದ್ರಗಳನ್ನು ಹೊಂದಿ ವ್ಯವಹಾರ ನಡೆಸುವುದರ ಹಿಂದೆ ವಾರಣಾಶಿಯವರ ಅದ್ಭುತ ದೂರದರ್ಶಿತ್ವ, ಕರ್ತವ್ಯ ಪ್ರಜ್ಞೆ, ಕೆಚ್ಚು, ದಿಟ್ಟತನಗಳು ಅವಿರತ ಕೆಲಸ ಮಾಡಿವೆ. 1973ರಿಂದ 1990ರ ತನಕ ಅಂದರೆ ಸುಮಾರು 18 ವರ್ಷಕಾಲ ಕ್ಯಾಂಪ್ಕೊ ಅಧ್ಯಕ್ಷರಾಗಿ ಆಡಳಿತ ನಡೆಸಿ ಸಂಸ್ಥೆಯನ್ನು ಸಮಗ್ರ ಪಥದಲ್ಲಿ ನಡೆಯಲು ಸಕಲ ಸನ್ನದ್ಧಗೊಳಿಸಿ ವಿರಮಿಸಿದರು.
ತನ್ನ ಕುಟುಂಬ, ಆರೋಗ್ಯ ಯಾವುದನ್ನೂ ಲೆಕ್ಕಿಸದೆ ಸರಳವಾಗಿ ಬದುಕುವುದರ ಜೊತೆಗೆ ದಿನದ 18ರಿಂದ 20 ಘಂಟೆಯವರೆಗೆ ಅವಿಶ್ರಾಂತ ದುಡಿಮೆ ಸಂಸ್ಥೆಯು ಉನ್ನತಿಯ ಮೆಟ್ಟಿಲುಗಳನ್ನೇರಿಕೊಂಡು ಮೇಲೇರಲು ಕಾರಣವಾಯಿತು. ವಾರಣಾಶಿಯವರು ಪ್ರಾಮಾಣಿಕತೆ, ಸತ್ಯಸಂಧತೆ, ದೂರದೃಷ್ಠಿ, ಸಮಯಪ್ರಜ್ಞೆ, ಶಿಸ್ತುಗಳ ಪ್ರತಿರೂಪ. ಅವರ ಸಾಧನೆ ಪರಿಶ್ರಮಕ್ಕೆ ಅವರಿಗೆ ಹತ್ತಾರು ಪ್ರಶಸ್ತಿಗಳು ಬಂದಿವೆ. 2005ರಲ್ಲಿ ರಾಷ್ಟ್ರಮಟ್ಟದ ‘ಸಹಕಾರಿತಾ ರತ್ನ’ ಪ್ರಶಸಿ ಅವರ ಮುಡಿಗೇರಿತು. 2017 ಡಿಸೆಂಬರ್ 27ರಂದು ತನ್ನ 87ನೇ ವಯಸ್ಸಿನಲ್ಲಿ ವಾರಣಾಶಿ ಸುಬ್ರಾಯ ಭಟ್ಟರು ಅಸ್ತಂಗತರಾದರು.
ದಾರ್ಶನಿಕ ವಾರಣಾಶಿಯವರು ಅಡಿಕೆಗೆ ಒಂದು ಸ್ಥಾನಮಾನ ತಂದು ಕೊಟ್ಟವರು. ಅಡಿಕೆ ಕೃಷಿಕರಿಗೆ ನೆಮ್ಮದಿಯ ಬದುಕನ್ನು ಕಟ್ಟಿ ಕೊಟ್ಟವರು. ಸಾವಿರಾರು ಸಿಬ್ಬಂದಿಗಳ, ಕಾರ್ಮಿಕರ ಕುಟುಂಬದವರ ಪಾಲಿಗೆ ಅಕ್ಷರಶಃ ಬೆಳಕಾದವರು. ಅಂದು ಬಡತನದ ಬೇಗೆಯಲ್ಲಿದ್ದುಕೊಂಡು ಬದುಕುತ್ತಿದ್ದ ಕುಟುಂಬಗಳು ಇಂದು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಟ್ಟದ್ದು ಸುಬ್ರಾಯ ಭಟ್ಟರು ಭದ್ರ ಬುನಾದಿ ಹಾಕಿಕೊಟ್ಟ ಕ್ಯಾಂಪ್ಕೊ. 2016ರಲ್ಲಿ ಕ್ಯಾಂಪ್ಕೊ ಸಂಸ್ಥೆಯ ಹಿರಿಯ ಅಧಿಕಾರಿಯೋರ್ವರ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ನನಗೆ ಒದಗಿ ಬಂದಿತ್ತು. ವಿದಾಯ ಕೂಟದಲ್ಲಿ ಮಾತನಾಡಿದ ಆ ಅಧಿಕಾರಿ ಸಂಸ್ಥೆ ಆರಂಭ ಕಾಲದಲ್ಲಿ ಅನುಭವಿಸಿದ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. “ಕ್ಯಾಂಪ್ಕೊ ಬ್ರಹ್ಮ ವಾರಣಾಶಿಯವರು ಸಂಸ್ಥೆಯನ್ನು ಕಟ್ಟಿಬೆಳೆಸದೆ ಇರುತ್ತಿದ್ದರೆ ನನ್ನಂತವರ ನೂರಾರು ಕುಟುಂಬಗಳು ಕಣ್ಣೀರಲ್ಲೇ ಕೈತೊಳೆಯಬೇಕಾಗುತ್ತಿತ್ತು. ನಿಜವಾಗಿ ವಾರಣಾಶಿಯವರು ಪ್ರಾತಃಸ್ಮರಣೀಯರು. ನಿತ್ಯ ಒಂದು ತುತ್ತು ಅನ್ನ ಬಾಯಿಗಿಡಬೇಕಾದರೆ ವಾರಣಾಶಿಯವರ ನೆನಪು ಬಂದೇ ಬರುತ್ತಿತ್ತು.” ಹೀಗೆ ಮಾತನಾಡುತ್ತ ಆ ಅಧಿಕಾರಿ ಭಾವುಕರಾದರು. ಇಂತಹ ಅನೇಕರ ಪಾಲಿಗೆ ಆಪದ್ಭಾಂದವರಾದವರು ಕೀರ್ತಿಶೇಷ ವಾರಣಾಶಿಯವರು.
ಇಂದು 2026 ಜೂನ್ 8. ವಾರಣಾಶಿಯವರು ಜನಿಸಿ 99 ವರ್ಷ ಪೂರೈಸಿದ ದಿನ. ಅಂದರೆ ಇದು ಅವರ ಜನ್ಮ ಶತಮಾನೋತ್ಸವ ವರ್ಷ. ಕ್ಯಾಂಪ್ಕೊ ಸಂಸ್ಥೆ ಈ ವರ್ಷವನ್ನು ಅಭಿಮಾನ ಮತ್ತು ಕೃತಜ್ಞತಾ ಪೂರ್ವಕ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಿದೆ. ಕ್ಯಾಂಪ್ಕೊ ಕುಟುಂಬಕ್ಕೆ ಇದು ಹೆಮ್ಮೆಯ ವರ್ಷ. ಸ್ವಾಭಿಮಾನದ ಬದುಕಿಗೆ ಪಥ ತೋರಿದ ದಾರ್ಶನಿಕನಿಗೆ ಅನಂತ ಕೃತಜ್ಞತೆಗಳನ್ನು ಅರ್ಪಿಸುವ ಸುಸಮಯ.
(ಲೇಖಕರು ಕ್ಯಾಂಪ್ಕೊ ಮಾಜಿ ಉಪಾಧ್ಯಕ್ಷರು)
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com






