ಸಹಕಾರಿ ಸಂಘಗಳ ಮೂಲಕ ವಿತರಿಸಲು ಬಜೆಟ್‌ನಲ್ಲಿ ಘೋಷಣೆ
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ ಬಜೆಟ್‌ನಲ್ಲಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿ 38 ಲಕ್ಷ ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ರೈತರು ತಮ್ಮ ಹತ್ತಿರದ ಸಹಕಾರ ಬ್ಯಾಂಕ್ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘಗಳನ್ನು ಸಂಪರ್ಕಿಸಿ ಅಲ್ಲಿ ಹೊಸದಾಗಿ ಈ ಕೃಷಿ ಸಾಲ ಪಡೆಯಬಹುದು ಅಥವಾ ಹಳೆಯ ಸಾಲವನ್ನು ನವೀಕರಿಸಬಹುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಈ ಸಾಲ ಸೌಲಭ್ಯದಿಂದ ರಾಜ್ಯದ ರೈತಾಪಿ ಸಮುದಾಯಕ್ಕೆ ಸಾಕಷ್ಟು ನೆರವಾಗಲಿದೆ. ಅಲ್ಲದೆ ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿನ ವಿವಿಧ ಸೇವೆಗಳನ್ನು (ಕಾಯ್ದೆಗಳು) ಜನಸಾಮಾನ್ಯರಿಗೆ ಸುಲಭವಾಗಿ ಒದಗಿಸಲು ಅದರ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಬಜೆಟ್‌ನಲ್ಲಿ ನಮೂದಿಸಲಾಗಿದೆ. ಈ ಕ್ರಮ ಹೆಚ್ಚು ಜನ ಸಹಕಾರ ಕ್ಷೇತ್ರದತ್ತ ಬರಲು ಸಹಕಾರಿಯಾಗಲಿದೆ. ಇದರ ಜೊತೆಗೆ ರಾಜ್ಯ ಬಜೆಟ್‌ನಲ್ಲಿ ಪ್ರಸಕ್ತ ಸಾಲಿನಲ್ಲಿ ಮೈಸೂರು (ಬಂಬೂ ಬಜಾರ್) ಮತ್ತು ಹುಬ್ಬಳ್ಳಿ (ಕಾಟನ್ ಮಾರ್ಕೆಟ್) ಕೇಂದ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವುದಕ್ಕೆ ಆಸಕ್ತಿ ವಹಿಸಿದ್ದಾರೆ. ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು 10 ಕೋಟಿ ರೂ. ವೆಚ್ಚದಲ್ಲಿ ERP (Enterprise Resource Planning) ವ್ಯವಸ್ಥೆ ಜಾರಿ ಮಾಡುವುದನ್ನು ಘೋಷಿಸಿದ್ದಾರೆ. ಇವಿಷ್ಟು ಸಹಕಾರ ಕ್ಷೇತ್ರಕ್ಕೆ ಸಿಕ್ಕಿರುವ ಕೊಡುಗೆಗಳಾಗಿದ್ದು, ಹೆಚ್ಚುವರಿಯಾಗಿ ಕೃಷಿ ಕ್ಷೇತ್ರಕ್ಕೂ ಅನೇಕ ಕೊಡುಗೆಗಳನ್ನು ಸಿದ್ದರಾಮಯ್ಯನವರು ಘೋಷಿಸಿದ್ದಾರೆ.
ಕರಾವಳಿ, ಮಲೆನಾಡು ಪ್ರದೇಶದಲ್ಲಿ ಅಡಕೆ ಕೃಷಿಕರನ್ನು ಕಂಗೆಡಿಸಿರುವ ಅಡಕೆಯ ಎಲೆಚುಕ್ಕಿ ರೋಗ ಹಾಗೂ ಕೊಳೆರೋಗಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ವ್ಯಾಪ್ತಕವಾಗಿ ಬೆಳೆಯುವಲ್ಲಿ ಅಡಕೆ ಬೆಳೆಯ ದೊಡ್ಡ ಕೊಡುಗೆ ಇದೆ. ಆದರೆ ಹಲವಾರು ವರ್ಷಗಳಿಂದ ಅಡಕೆಯ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳಿಂದ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಸಮಸ್ಯೆ ನಿಯಂತ್ರಣಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆಧಾರಿತ ರೋಗ -ಕೀಟ ನಿಯಂತ್ರಣ ಕ್ರಮಗಳನ್ನು ಜಾರಿ ಮಾಡಿರುವುದು ಅಡಕೆ ಹಾಗೂ ತೆಂಗು ಬೆಳೆಗಾರರಲ್ಲಿ ಹೊಸ ಆಶಾವಾದ ಮೂಡಿಸಿದೆ. ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆ ಕಿಟ್ ದರ 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಳ ಮಾಡಿರುವುದನ್ನು ಮತ್ತು ಸಮುದ್ರ ಕೃಷಿಯನ್ನು ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮಾಡುವುದನ್ನೂ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

