ಹತ್ತು ವರ್ಷ: ಶತ ಶಿಬಿರ; ಆರೋಗ್ಯ ರಕ್ಷಣೆಗೆ ಆತ್ಮಶಕ್ತಿ ಸಹಕಾರಿ ಸಂಸ್ಥೆ ಕಾಳಜಿ: ಫೆ.೧ರಂದು ೧೦೦ನೇ ಬೃಹತ್ ಆರೋಗ್ಯ ಶಿಬಿರ -ಆರೋಗ್ಯ ಸೇವಾ ಸಂಗಮ
ಮಂಗಳೂರು: ಜಗತ್ತು ಆಧುನಿಕ ಕಾಲಘಟ್ಟದ ನಾಗಾಲೋಟದಲ್ಲಿ ಓಡುತ್ತಿದೆ. ಆಧುನಿಕ ಸಲಕರಣೆಗಳು, ತಂತ್ರಜ್ಞಾನಗಳ ಉಪಯೋಗಗಳ ಭರಾಟೆಯಲ್ಲಿ ಮನುಷ್ಯ ಸ್ವಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವ ತನಕ ಕಾಲ ಮುಂದುವರಿದಿದೆ. ಯಾವುದೇ ಒಬ್ಬ ವ್ಯಕ್ತಿ ತನಗೆ ಬೇಕಾದಷ್ಟು ಹಣ, ಯಶಸ್ಸು ಅಥವಾ ಭೌತಿಕ ಸೌಕರ್ಯಗಳನ್ನು ಹೊಂದಿದರೂ, ಆತ ಅನಾರೋಗ್ಯಕ್ಕೀಡಾದರೆ ಸಂತೋಷದ ಜೀವನ ನಡೆಸಲು ಸಾಧ್ಯವಿಲ್ಲ. ಆರೋಗ್ಯವು ಉತ್ತಮವಾಗಿದ್ದರಷ್ಟೇ ಮನುಷ್ಯ ಚೆನ್ನಾಗಿ ಅಧ್ಯಯನ ಮಾಡಲು, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಅಥವಾ ಯಾವುದೇ ಸವಾಲುಗಳನ್ನು ವಿಶ್ವಾಸದಿಂದ ಎದುರಿಸಲು ಶಕ್ತನಾಗುತ್ತಾನೆ.
https://chat.whatsapp.com/FCEnlTkAKCC0MGPhXtX4i4
ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವೇನೂ ಅಲ್ಲ. ಪೌಷ್ಟಿಕ ಆಹಾರ ಸೇವನೆ, ನಿಯಮಿತ ದೈಹಿಕ ವ್ಯಾಯಾಮ, ಸರಿಯಾದ ವಿಶ್ರಾಂತಿ, ಸ್ವಚ್ಛ ಪರಿಸರ ಇವೆಲ್ಲವೂ ಸಿಕ್ಕರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ವರ್ತಮಾನದ ತಲ್ಲಣಗಳು ಈ ಮೇಲಿನ ಅಂಶಗಳನ್ನು ನಿಯಮಿತವಾಗಿ ಮಾಡುವುದಕ್ಕೆ ತಡೆಯೊಡ್ಡುತ್ತಲೇ ಬಂದಿವೆ. ಸಾಂಕ್ರಾಮಿಕ ಕಾಯಿಲೆಗಳ ಭೀತಿ, ಮಾನಸಿಕ ಒತ್ತಡಗಳು, ಒತ್ತಡವನ್ನು ನಿಭಾಯಿಸುವುದರಲ್ಲಿ ಸೋಲುವುದು ಇತ್ಯಾದಿ ಕಾರಣಗಳಿಂದ ಉತ್ತಮ ಆರೋಗ್ಯದತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಒಂದು ಐದು ವರ್ಷಗಳ ಬೆಳವಣಿಗೆಗಳಂತೂ ಮನುಷ್ಯನ ಗರ್ಭದಲ್ಲಿ ಹೆದರಿಕೆ ಹುಟ್ಟಿಸುವಷ್ಟರ ಮಟ್ಟಿಗೆ ಬೆಳೆದಿದೆ. ಇಂಥ ಸಂದರ್ಭದಲ್ಲಿ ಮನುಷ್ಯ ತಾನು ಆರೋಗ್ಯವಾಗಿದ್ದೇನೆಯೇ ಇಲ್ಲವೇ ಎಂದು ತಿಳಿಯಲು ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿಬಿಟ್ಟಿದೆ. ಕೆಲವೊಮ್ಮೆ ಈ ಪರೀಕ್ಷೆಗಳು ದುಬಾರಿ ಆಗಿರುವುದರಿಂದ ಆರೋಗ್ಯ ತಪಾಸಣೆಗೆ ಹೋಗಲು ಸಾಧ್ಯವಾಗದೆ ಅನೇಕ ಸಂದರ್ಭಗಳಲ್ಲಿ ರೋಗ ಪತ್ತೆ ಕ್ಲಪ್ತ ಸಮಯದಲ್ಲಿ ಆಗದೆ ಸಮಸ್ಯೆಗಳು ಎದುರಾಗುತ್ತವೆ.
ಇಂಥ ಸಂದರ್ಭಗಳಲ್ಲಿ ಅನೇಕ ಸಂಘ ಸಂಸ್ಥೆಗಳು ಉಚಿತವಾಗಿ ನಡೆಸುವ ಆರೋಗ್ಯ ತಪಾಸಣಾ ಶಿಬಿರಗಳು ಅನೇಕ ಜನರಿಗೆ ಸಂಜೀವಿನಿಗಳಂತೆ ಕಂಡುಬರುತ್ತವೆ. ದುಬಾರಿ ಹಣ ತೆತ್ತು ಆಸ್ಪತ್ರೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಲು ಸಾಧ್ಯವಾಗದವರು ತಮ್ಮ ತಮ್ಮ ಊರುಗಳಲ್ಲಿ ನಡೆಯುವ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಜೀವನ ಸಾಗಿಸುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂಥ ಆರೋಗ್ಯ ಶಿಬಿರಗಳಲ್ಲಿ ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ಸಂಘ ಸಂಸ್ಥೆಗಳು ಬೆರಳೆಣಿಕೆಯಷ್ಟು ಸಿಗಬಹುದು. ಈ ಪೈಕಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಜನಸಾಮಾನ್ಯರ, ತಮ್ಮ ಸದಸ್ಯರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಉಚಿತವಾಗಿ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ನೇತ್ರ-ದಂತ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತ ಬರುತ್ತಿದ್ದು ಅದೀಗ ಶತಕ ಅಂದರೆ 100ನೇ ಉಚಿತ ಶಿಬಿರದತ್ತ ಮುನ್ನಡೆಯುತ್ತಿದೆ. ಇದೇ ಭಾನುವಾರ ಫೆಬ್ರವರಿ 1ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ 100ನೇ ಉಚಿತ ಆರೋಗ್ಯ ಶಿಬಿರವು ಸಂಘದ ಪ್ರಧಾನ ಕಚೇರಿ ಪಡೀಲು ಬೈರಾಡಿಕೆರೆಯ ಬಳಿಯಲ್ಲಿರುವ ಆತ್ಮಶಕ್ತಿ ಸೌಧದಲ್ಲಿ ಆಯೋಜಿಸಲಾಗುತ್ತಿದೆ.
100ನೇ ಶಿಬಿರದಲ್ಲಿ ಏನು ವಿಶೇಷ…?
ಪಡೀಲು ಬೈರಾಡಿಕೆರೆ ಸಮೀಪ ಇರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಫೆಬ್ರವರಿ 1ರಂದು ನಡೆಯುವ ೧೦೦ನೇ ಬೃಹತ್ ಉಚಿತ ವೈದ್ಯಕೀಯ, ನೇತ್ರ, ದಂತ ಹಾಗೂ ರಕ್ತದಾನ ಶಿಬಿರದಲ್ಲಿ ಹಲವಾರು ವಿಶೇಷ ಚಿಕಿತ್ಸೆಗಳನ್ನೂ ಉಚಿತವಾಗಿ ಮಾಡಲಾಗುತ್ತಿದೆ. ಇದರ ಜೊತೆಗೆ ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮವೂ ನಡೆಯಲಿದೆ.
ವಿಶೇಷವಾಗಿ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ತನ ಪರೀಕ್ಷೆ(Mammography), ಗರ್ಭಕಂಠದ ತಪಾಸಣೆ (Pap Smear test), 21 ವರ್ಷದ ಮೇಲ್ಪಟ್ಟ ಮದುವೆಯಾದ ಮಹಿಳೆಯರಿಗೆ ಮಾತ್ರ, ಯುರೋಪ್ಲೆಮೆಂಟ್ರಿ PSA ಶಿಬಿರ 50 ವರ್ಷದ ಮೇಲ್ಪಟ್ಟ ಪುರುಷರಿಗೆ ಮಾತ್ರ ಇವುಗಳನ್ನು ಜೋಡಿಸಲಾಗಿದೆ. ಕಲರ್ ಥೆರಪಿ ಕೂಡ ಈ ಶಿಬಿರದ ವಿಶೇಷವಾಗಿದ್ದು, ಕಲರ್ ಥೆರಪಿ, ಸೀಡ್ ತೆರಪಿ ಮತ್ತು ಆಕ್ಯು ಪ್ರೆಷರ್ ಮೂಲಕ ಚಿಕಿತ್ಸೆ ನೀಡಲಾಗುವುದು. ಇದರ ಜೊತೆಗೆ ಸ್ವಯಂಪ್ರೇರಿತ ರಕ್ತದಾನ, ಸಾಮಾನ್ಯ ವೈದ್ಯಕೀಯ ತಪಾಸಣೆ, ರಕ್ತದೊತ್ತಡ, ಮಧುಮೇಹ ತಪಾಸನೆ ಕೀಲು ಮತ್ತು ಗಂಟುನೋವು ತಪಾಸಣೆ, ಆಯುರ್ವೇದ ಶಿಬಿರ –ವೈದ್ಯಕೀಯ ಸಮಾಲೋಚನೆ ಮತ್ತು ಉಚಿತ ಔಷಧ ವಿತರಣೆ, ದಂತ ಚಿಕಿತ್ಸಾ ಶಿಬಿರ –ದಂತ ತಪಾಸಣಾ, ಶುಚೀಕರಣ, ಭರ್ತಿಗೊಳಿಸುವಿಕೆ (Filling), ಚಿಕಿತ್ಸೆಗೆ ಒಳಪಡದ ಹಲ್ಲುಗಳನ್ನು ಕೀಳುವುದು, ನೇತ್ರ ತಪಾಸಣಾ ಶಿಬಿರ –ಕಣ್ಣಿನ ತಪಾಸಣೆ ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಇತ್ಯಾದಿಗಳನ್ನು ಮಾಡಲಾಗುವುದು.

2025ರಲ್ಲಿ ಮೊದಲ ಶಿಬಿರ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಕ್ರಿಯಾಶೀಲ ಆಡಳಿತ ಮಂಡಳಿಯನ್ನು ಹೊಂದಿದ್ದು ಸ್ಥಾಪನೆಯಾದ 12 ವರ್ಷಗಳಲ್ಲೇ 33 ಶಾಖೆಗಳನ್ನು ಹೊಂದಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಪ್ರತಿ ಶಾಖೆಗಳ ವಾರ್ಷಿಕೋತ್ಸವದಂದು ಗ್ರಾಹಕರ ಸಭೆಗಳ ಆಯೋಜನೆಯೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನೂ ನಡೆಸಿಕೊಂಡು ಬರುತ್ತಿದೆ. 2015ರ ಫೆಬ್ರವರಿ 7ರಂದು ಬೆಂದೂರ್‌ವೆಲ್ ಶಾಖೆಯಲ್ಲಿ ಮೊದಲ ಸಲ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದು ಆ ಬಳಿಕ ನಿರಂತರವಾಗಿ ಸಾಗಿ ಬಂದ ಈ ಸೇವಾಕಾರ್ಯ 2026ರ ಫೆಬ್ರವರಿ 1ಕ್ಕೆ ಶತಕ ಪೂರೈಸಲಿದೆ. 11 ವರ್ಷಗಳಲ್ಲಿ 100ನೇ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಿರುವುದು ಅಸಾಮಾನ್ಯ ಸಾಧನೆಯೇ ಹೌದು. ಕೊರೊನಾ ಎಂಬ ಸಾಂಕ್ರಾಮಿಕ ಮಹಾಮಾರಿ ಇಡೀ ಜಗತ್ತಿಗೇ ಆವರಿಸಿದ್ದ ಕಾಲದಲ್ಲೂ ಜನರ ಆರೋಗ್ಯದ ದೃಷ್ಟಿಯಿಂದ ಈ ಸೇವಾಕಾರ್ಯವನ್ನು ಆತ್ಮಶಕ್ತಿ ಸಹಕಾರಿ ಸಂಘವು ನಡೆಸಿತ್ತು. ಕೊರೊನಾದ ಆತಂಕದ ಸಂದರ್ಭದಲ್ಲಿ ಆರೋಗ್ಯದ ಶಿಬಿರಗಳ ಆಯೋಜನೆಯ ಜೊತೆಗೆ ಕೊರೊನಾ ಬೂಸ್ಟರ್, ಕಿಟ್‌ಗಳನ್ನೂ ನೀಡಲಾಗಿದೆ.
75ಕ್ಕೂ ಅಧಿಕ ಸಂಘಸಂಸ್ಥೆಗಳ ಜೋಡಣೆ
ಇದುವರೆಗಿನ 99 ಆರೋಗ್ಯ ಶಿಬಿರಗಳ ಆಯೋಜನೆಯಲ್ಲಿ 75ಕ್ಕೂ ಅಧಿಕ ಸಂಘ ಸಂಸ್ಥೆಗಳು ಆತ್ಮಶಕ್ತಿ ಸಹಕಾರಿ ಸಂಘದ ಜೊತೆ ಸೇರಿಕೊಂಡಿವೆ. ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಯುವಕ –ಯುವತಿ ಮಂಡಲಗಳು, ಮಹಿಳಾ ಸಂಘಗಳು, ರೆಡ್ ರಿಬ್ಬನ್ ಕ್ಲಬ್‌ಗಳು, ಜೇಸಿಐ ಇತ್ಯಾದಿ ವಿವಿಧ ರೀತಿಯ ಸಹಕಾರ ಸಂಘಗಳು ಈ ಸೇವಾಕಾರ್ಯದಲ್ಲಿ ಸಹಯೋಗ ನೀಡಿವೆ.
ಆಸ್ಪತ್ರೆಗಳ ಅಮೂಲ್ಯ ಸೇವೆ
ಆತ್ಮಶಕ್ತಿ ಸಹಕಾರಿ ಸಂಘದ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಹಲವಾರು ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಅಮೂಲ್ಯ ಸೇವೆ ಸಲ್ಲಿಸಿವೆ. ಮಾತಾ ಅಮೃತಾನಂದಮಯೀ ಮಠ, ದೇರಳಕಟ್ಟೆಯ ಯೇನೆಪೋಯ, ಕೆ.ಎಸ್ ಹೆಗ್ಡೆ ಆಸ್ಪತ್ರೆ, ಕಣಚೂರು ಆಯುರ್ವೇದ ಆಸ್ಪತ್ರೆ ನಾಟೇಕಲ್, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಕೆ.ಎಂ.ಸಿ ಆಸ್ಪತ್ರೆ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸನ್ ಮಂಗಳೂರು, ಶ್ರೀನಿವಾಸ ಆಸ್ಪತ್ರೆ, ಮಂಗಳಾ ಕಿಡ್ನಿ ಫೌಂಡೇಶನ್‌ಮತ್ತು ಆಸ್ಪತ್ರೆ ಇಲ್ಲಿನ ನುರಿತ ವೈದ್ಯರುಗಳು, ಸಿಬ್ಬಂದಿಗಳು ಜನರ ಆರೋಗ್ಯ ತಪಾಸಣೆ ಮಾಡಲು ಸಹಕರಿಸಿವೆ. ಇದರ ಜೊತೆಗೆ ಹಲವು ಕಡೆ ರಕ್ತದಾನ ಶೀಬಿರಗಳನ್ನೂ ಏರ್ಪಡಿಸಿದ್ದು ಇದಕ್ಕೂ ಈ ಮೇಲಿನ ಆಸ್ಪತ್ರೆಗಳ ಸಿಬ್ಬಂದಿಗಳ ಜೊತೆಗೆ ವೆನ್‌ಲಾಕ್‌ಆಸ್ಪತ್ರೆಯ ಸಿಬ್ಬಂದಿಗಳೂ ನೆರವಾಗಿದ್ದಾರೆ.
22 ಸಾವಿರಕ್ಕೂ ಅಧಿಕ ಕನ್ನಡಕ ವಿತರಣೆ
ವಿಶೇಷವಾಗಿ ನೇತ್ರ ತಪಾಸಣಾ ಶಿಬಿರವನ್ನೂ ಆತ್ಮಶಕ್ತಿ ಸಹಕಾರಿ ಸಂಘದಿಂದ ಮಾಡಲಾಗಿದ್ದು ಇದರಲ್ಲಿ ಸಾವಿರಾರು ಜನರು ಉಪಯೋಗ ಪಡೆದುಕೊಂಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆತ್ಮಶಕ್ತಿ ಸಹಕಾರಿ ಸಂಘವು 22 ಸಾವಿರಕ್ಕೂ ಅಧಿಕ ಕನ್ನಡಕಗಳನ್ನು ಉಚಿತವಾಗಿ ವಿತರಿಸಿದೆ. 1000ಕ್ಕೂ ಅಧಿಕ ಕ್ಯಾಟರ್ಯಾಕ್ಟ್‌ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗಿದೆ. ಸಹಕಾರಿ ಸಂಘಗಳ ವಲಯದಲ್ಲೇ ಇದೊಂದು ವಿನೂತನ ದಾಖಲೆಯೇ ಹೌದು. ಇನ್ನೂ ಒಂದು ವಿಶೇಷವೆಂದರೆ ಕರ್ನಾಟಕ ಒನ್ ಸಹಯೋಗದಲ್ಲಿ ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಿಕೊಡಲಾಗಿದೆ.
ಒಂದೊಂದು ಶಿಬಿರದಲ್ಲಿ 250-300 ಜನ
ಆತ್ಮಶಕ್ತಿ ಸಹಕಾರಿ ಸಂಘದಿಂದ ಆಯೋಜಿಸಲ್ಪಡುವ ಆರೋಗ್ಯ ಶಿಬಿರಗಳಲ್ಲಿ ಒಂದೊಂದು ಶಿಬಿರದಲ್ಲಿ ಸುಮಾರು 250-300 ಜನ ಸೇರಿ ಆರೋಗ್ಯ ತಪಾಸಣೆ ಮಾಡುತ್ತಾರೆ ಎಂದರೆ ಆತ್ಮಶಕ್ತಿ ಸಹಕಾರಿ ಸಂಘದಿಂದ ಆಯೋಜಿಸುವ ಶಿಬಿರದ ಯಶಸ್ಸು ಎಷ್ಟರ ಮಟ್ಟಿನದು ಎಂದು ಅಂದಾಜಿಸಬಹುದು. 250-300 ಜನ ಪ್ರತಿಯೊಂದು ಶಿಬಿರದಲ್ಲಿ ಭಾಗವಹಿಸಿ ಉಚಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ.
100ನೇ ಶಿಬಿರದಲ್ಲಿ ವೈದ್ಯರಿಗೆ ಗೌರವ
ಆತ್ಮಶಕ್ತಿ ಸೌಧದಲ್ಲಿ ಫೆ.1ರಂದು ನಡೆಯುವ 100ನೇ ಶಿಬಿರದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಆರೋಗ್ಯ ಶಿಬಿರದಲ್ಲಿ ಸೇವಾಕಾರ್ಯ ನಡೆಸಿದಂತ 25 ವೈದ್ಯರುಗಳಿಗೆ ಸನ್ಮಾನ, 75 ಸಂಘ –ಸಂಸ್ಥೆಗಳಿಗೆ ಗೌರವಾರ್ಪಣೆ ಮಾಡಲಾಗುವುದು.
ಸಹಯೋಗ ವಹಿಸುವ ಸಂಸ್ಥೆಗಳು
ಈ ಶಿಬಿರದಲ್ಲಿ ಯೇನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸಮುದಾಯ ದಂತ ಆರೋಗ್ಯ ವಿಭಾಗ ದೇರಳಕಟ್ಟೆ, ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ನಾಟೆಕಲ್, ಪ್ರಾದೇಶಿಕ ರಕ್ತಪೂರಣ ಕೇಂದ್ರ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮಂಗಳೂರು, ಬಸವ ಅಕ್ಯೂ ಅಕಾಡೆಮಿ ಬೆಂಗಳೂರು ಇವರು ಚಿಕಿತ್ಸೆಯಲ್ಲಿ ಸಹಕರಿಸಲಿದ್ದಾರೆ. ಲಯನ್ಸ್ ಕ್ಲಬ್ ಆದಿತ್ಯ ಮಂಗಳೂರು, ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಮಡಿಲು ಸೇವಾ ತಂಡ ಪಡೀಲು ಈ ಸಂಸ್ಥೆಗಳು ಸಹಯೋಗ ವಹಿಸಲಿವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


