Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರದಿಂದ ಸಮೃದ್ಧಿ: ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರ ಬಲವರ್ಧನೆ
    News

    ಸಹಕಾರದಿಂದ ಸಮೃದ್ಧಿ: ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರ ಬಲವರ್ಧನೆ

    adminBy adminJanuary 11, 2026

    ✍️ ಸಾಣೂರು ನರಸಿಂಹ ಕಾಮತ್

    ಪ್ರಾಚೀನ ಭಾರತದಲ್ಲಿ ವೇದಗಳ ಕಾಲದಿಂದಲೂ ಸಹಕಾರ ತತ್ವವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಋಗ್ವೇದವು //ಸಂಘ ಛಧ್ವಂ ಸಂವದಧ್ವಂ ಸಂವೋ ಮನಾಂಸಿ ಜಾನತಾಂ// ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕೋಣ. ಒಳ್ಳೆಯ ಮಾತುಗಳೊಂದಿಗೆ ಅರಿತು ಕಲಿತು ಬಾಳೋಣ ಎಂಬುದಾಗಿ ಹೇಳಿದೆ.

    https://chat.whatsapp.com/FCEnlTkAKCC0MGPhXtX4i4
    ನಮ್ಮ ದೇಶದ ಸಹಕಾರಿ ಚಳವಳಿಗೆ 121 ವರ್ಷಗಳ ಸುಧೀರ್ಘ ಇತಿಹಾಸವಿದ್ದು ಸಹಕಾರ ರಂಗವು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. “ಆಡು ಮುಟ್ಟದ ಸೊಪ್ಪಿಲ್ಲ; ಸಹಕಾರಿ ಕ್ಷೇತ್ರ ಮುಟ್ಟದ ಜಾಗವಿಲ್ಲ ” ಎಂಬಂತೆ ಹುಟ್ಟಿನಿಂದ ಚಟ್ಟದವರೆಗೆ ಮನುಷ್ಯನ ಜೀವನದ ಎಲ್ಲಾ ಹಂತಗಳಲ್ಲೂ ಎಲ್ಲಾ ಅವಶ್ಯಕತೆಗಳನ್ನು ಸಹಕಾರ ಕ್ಷೇತ್ರ ತನ್ನದೇ ಆದ ರೀತಿಯಲ್ಲಿ ಪೂರೈಸುತ್ತಿದೆ.
    ಸಹಕಾರಿ ದತ್ತಾಂಶದ ಪ್ರಕಾರ ಪ್ರಸ್ತುತ ನಮ್ಮ ದೇಶದಲ್ಲಿ 55 ವಿಧದ 8.4 ಲಕ್ಷ ಸಹಕಾರಿ ಸಂಘಗಳು ಸ್ಥಾಪನೆಯಾಗಿದ್ದು ದೇಶದ ಸುಮಾರು 30 ಕೋಟಿ ಜನ ಸಹಕಾರಿ ಸಂಘದ ಸದಸ್ಯರಾಗಿದ್ದಾರೆ. ವಿಶೇಷವಾಗಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಉದ್ದಿಮೆಗಳ ಕ್ಷೇತ್ರಗಳಿಗೂ ಸಹಕಾರಿ ಸಂಘ ವ್ಯಾಪಿಸಿದ್ದು ಗ್ರಾಮೀಣಾಭಿವೃದ್ಧಿ ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.

    ಸಹಕಾರದಿಂದ ಸಮೃದ್ಧಿ
    2021ರಲ್ಲಿ “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನವನ್ನು ಅನುಷ್ಠಾನ ಮಾಡಿ ದೇಶಾದ್ಯಂತ ಸಹಕಾರಿ ಸಂಘಗಳನ್ನು ಬಲಪಡಿಸಲು ಕೇಂದ್ರ ಸರಕಾರ ಪ್ರತ್ಯೇಕವಾದ ಸಹಕಾರಿ ಸಚಿವಾಲಯದ ಮೂಲಕ ವಿಸ್ತೃತವಾದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸುತ್ತಿದೆ. ಸಹಕಾರಿ ಕ್ಷೇತ್ರದ ಕೃಷಿ ಪತ್ತಿನ ವಲಯ 80% ಮಿಕ್ಕಿದ ಸಣ್ಣ ಮತ್ತು ಅತಿ ಸಣ್ಣ ರೈತರ ಹಣಕಾಸು ಅವಶ್ಯಕತೆಗಳನ್ನು ಪೂರೈಸುತ್ತಿದೆ. ದೇಶದ ಹೈನುಗಾರಿಕೆಯಲ್ಲಿ ಸಹಕಾರಿ ವಲಯ 35 % ತನ್ನ ಪಾಲು ಹೊಂದಿದ್ದು ಗುಜರಾತಿನ “ಅಮುಲ್” ಮತ್ತು ಕರ್ನಾಟಕದ “ನಂದಿನಿ” ಹಾಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ಹೊಂದಿದೆ. ದೇಶ-ವಿದೇಶಗಳಲ್ಲಿ ಅತ್ಯುತ್ತಮ ಬ್ರಾಂಡ್ ಆಗಿ ಪ್ರಖ್ಯಾತಿ ಗಳಿಸುತ್ತಿದೆ. ದೇಶದ ಕೃಷಿ ವಲಯಕ್ಕೆ ರಸಗೊಬ್ಬರ ಜೈವಿಕ ಪೌಷ್ಟಿಕಾಂಶಗಳು ಮತ್ತು ಕೀಟನಾಶಕಗಳನ್ನು ಪೂರೈಸುತ್ತಿರುವ ಇಪ್ಕೋ ಮತ್ತು ಕ್ರಿಭ್ಕೋ ಎಂಬ ಎರಡು ಸಹಕಾರಿ ಸಂಸ್ಥೆಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಉನ್ನತ ಸ್ಥಾನವನ್ನು ಗಳಿಸಿವೆ.

    ನಾಗರಿಕ ಜೀವನದ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಪರಸ್ಪರ ಸಹಕಾರದ ಅವಶ್ಯಕತೆ ಇದೆ. ದೇಶದ ಸಹಕಾರಿ ರಂಗಕ್ಕೆ ಹೊಸ ದಿಕ್ಕನ್ನು ನೀಡುವ ಮಹತ್ತರ ಉದ್ದೇಶದಿಂದ “ಬಿನಾ ಸಂಸ್ಕಾರ್ ನಹೀ ಸಹಕಾರ್… ಬಿನಾ ಸಹಕಾರ್ ನಹಿ ಉದ್ದಾರ್” ಎನ್ನುವ ಧ್ಯೇಯವಾಕ್ಯದೊಂದಿಗೆ 1978ರ ಸಪ್ಟಂಬರ್ 15 “ಅನಂತ ಚತುರ್ದಶಿಯ ಶುಭದಿನ”ದಂದು ಸಹಕಾರ ಭಾರತಿ ಸಹಕಾರಿ ಕ್ಷೇತ್ರದ ಏಕೈಕ ಸರಕಾರೇತರ, ರಾಜಕೀಯ ರಹಿತ ಸ್ವಯಂಸೇವಾ ರಾಷ್ಟ್ರೀಯ ಸಂಘಟನೆಯಾಗಿ ಜನ್ಮತಾಳಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ದಿ.ಲಕ್ಷ್ಮಣರಾವ್ ಇನಾಂದಾರ್ ಮಾರ್ಗದರ್ಶನ ಹಾಗೂ ದಿ.ಮಾಧವರಾವ್ ಗೋಡ್‌ಬೋಲೆಯವರ ನೇತೃತ್ವದಲ್ಲಿ ಸಹಕಾರಿ ರಂಗದ ಏಕೈಕ ಸ್ವಯಂಸೇವಾ ಸಂಘಟನೆ ಸಹಕಾರ ಭಾರತಿ -“ಸಂಪರ್ಕ, ಸೇವೆ, ಸಮರ್ಪಣೆʼʼ ಎಂಬ ಮೂರು ಪ್ರಧಾನ ಸೂತ್ರಗಳ ಆಧಾರದಲ್ಲಿ ಮಹಾರಾಷ್ಟ್ರದ ಪೂನಾದಲ್ಲಿ ಆರಂಭವಾಗಿ ಸಹಕಾರ ಚಳವಳಿ ಮೂಲಕ ಸಮಾಜದ ಅರ್ಥ ವ್ಯವಸ್ಥೆ ಹಾಗೂ ಸಾಮಾಜಿಕ ಸಬಲೀಕರಣವನ್ನು ಬಲಿಷ್ಠಗೊಳಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತ ಬರುತ್ತಿದೆ. 1979 ಜನವರಿ 11ರಂದು ರಾಷ್ಟ್ರಮಟ್ಟದಲ್ಲಿ ನೋಂದಾವಣೆಗೊಂಡ ಸಹಕಾರ ಭಾರತಿ ಸಂಘಟನೆಯು ಈ ದಿನವನ್ನು ಪ್ರತಿವರ್ಷ ತನ್ನ “ಸಂಸ್ಥಾಪನಾ ದಿನವಾಗಿ ದೇಶಾದ್ಯಂತ ಆಚರಿಸಿಕೊಂಡು ಬರುತ್ತಿದೆ.

    ಸಹಕಾರ ಭಾರತಿ ಸಂಸ್ಥಾಪಕ ಲಕ್ಷ್ಮಣ್ ರಾವ್ ಇನಾಮ್ದಾರ್ (1917-1984):
    ಲಕ್ಷ್ಮಣ ರಾವ್ ಇನಾಮ್ದಾರ್ 1917ರ ಸೆಪ್ಟೆಂಬರ್ 14ರ ಋಷಿ ಪಂಚಮಿಯ ಪುಣ್ಯ ದಿನದಂದು ಜನಿಸಿದರು. ಏಳು ಜನ ಸಹೋದರರಲ್ಲಿ ಲಕ್ಷ್ಮಣ್ ರಾವ್ ಮೂರನೇಯವರಾಗಿದ್ದು
    ಮೂರು ಜನ ಸಹೋದರಿಯರನ್ನು ಹೊಂದಿದ್ದರು. ಮೂಲತಃ ಮಹಾರಾಷ್ಟ್ರದ ಸತಾರ ಜಿಲ್ಲೆಯವರಾಗಿದ್ದ ಇನಾಮ್ದಾರ್ ವಕೀಲರಾಗಿ ವೃತ್ತಿಜೀವನ ಆರಂಭಿಸಿದ್ದರು. ಉನ್ನತ ಮೌಲ್ಯಗಳಿಂದ ಕೂಡಿದ ಸಹಕಾರ ಚಳವಳಿಯಿಂದ ಜನಸಾಮಾನ್ಯರ ಜೀವನ ಮಟ್ಟದಲ್ಲಿ ಸುಧಾರಣೆ ತರಬಹುದಲ್ಲದೆ, ತನ್ಮೂಲಕ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುವುದು ಅವರ ದೃಷ್ಟಿಕೋನವಾಗಿತ್ತು. 1978ರಲ್ಲಿ ಸಹಕಾರ ಭಾರತಿ ಉದಯವಾದಾಗ ಅದರ ಪ್ರೇರಕ ಶಕ್ತಿಯಾಗಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು ಅದರ ಸಂಸ್ಥಾಪಕರಾದ ಲಕ್ಷ್ಮಣ್ ರಾವ್ ಇನಾಮ್ದಾರ್‌ರವರು.
    ಸ್ವಾತಂತ್ರ್ಯ ಪೂರ್ವದ ಆಗಿನ ಕಾಲದಲ್ಲಿ ಕಾನೂನು ಶಿಕ್ಷಣ ಪಡೆದು ವಕೀಲಿ ವೃತ್ತಿ ನಡೆಸುವುದು ಒಂದು ಗೌರವದ ವಿಚಾರವಾಗಿತ್ತು. ವಕೀಲಿ ವೃತ್ತಿಯನ್ನು ನಡೆಸುತ್ತಿದ್ದ ಕಾರಣಕ್ಕೆ ಎಲ್ಲರ ಬಾಯಲ್ಲಿ “ವಕೀಲ ಸಾಬ್ ” ಎಂದೇ ಕರೆಸಿಕೊಳ್ಳುತ್ತಿದ್ದರು. ವಕೀಲಿ ವೃತ್ತಿಯ ಜೊತೆಗೆ ತನ್ನ ಸಾಮಾಜಿಕ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಗುಜರಾತ್ ರಾಜ್ಯದಲ್ಲಿ ಸಂಘ ಕಾರ್ಯದೊಂದಿಗೆ ತನ್ನನ್ನು ತೊಡಗಿಸಿಕೊಂಡಿದ್ದರು. ಅಂದಿನ ದಿನದಲ್ಲಿ ಬಾಲ ಸ್ವಯಂಸೇವಕರಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಾಲ್ಯದಲ್ಲಿಯೇ ಸಂಘದ ಸಂಸ್ಕಾರ ಮತ್ತು ರಾಷ್ಟ್ರೀಯ ಚಿಂತನೆಯನ್ನು ತುಂಬುವ ಕೆಲಸ ಮಾಡಿದ್ದರು. 1984ರಲ್ಲಿ ತನ್ನ 67ನೇ ವಯಸ್ಸಿನಲ್ಲಿ ಲಕ್ಷ್ಮಣ್ ರಾವ್ ಇನಾಂದಾರ್ ಮಹಾರಾಷ್ಟ್ರದ ಪುಣೆಯಲ್ಲಿ ನಿಧನ ಹೊಂದಿದರು. ಅವರ ನಿಧನ ಪೂರ್ವದ ಐದು ವರ್ಷಗಳಲ್ಲಿ ಸಹಕಾರ ಭಾರತಿ ಕೆಲಸ ಕಾರ್ಯದ ವಿಸ್ತರಣೆಗಾಗಿ ದೇಶಾದ್ಯಂತ ನಿರಂತರ ಪ್ರವಾಸ ಮಾಡಿದ್ದರು. ಇದರಿಂದಾಗಿ ಸಹಕಾರ ಭಾರತಿಗೆ ದೇಶಾದ್ಯಂತ ಸಂಘಟನಾತ್ಮಕವಾಗಿ ತನ್ನ ನೆಲೆಯನ್ನು ವಿಸ್ತರಿಸಲು ಸಾಧ್ಯವಾಯಿತು. ಪ್ರಸ್ತುತ ಸಹಕಾರ ಭಾರತಿ ದೇಶದ 28 ರಾಜ್ಯಗಳಲ್ಲಿ ಸುಮಾರು 650 ಜಿಲ್ಲೆಗಳಲ್ಲಿ ಸಕ್ರಿಯವಾದ ಜಿಲ್ಲಾ ಸಮಿತಿಯ ಜೊತೆಗೆ ಸಂಘಟನಾತ್ಮಕವಾಗಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ.

    ಸಹಕಾರ ಭಾರತಿ ಪ್ರಧಾನ ತಾತ್ವಿಕ ನೆಲೆಗಳು
    ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರದ ಪುನರ್‌ ನಿರ್ಮಾಣದ ಕಾರ್ಯದ ಸಂದರ್ಭದಲ್ಲಿ ಸಹಕಾರಿ ಪರಿವಾರದಲ್ಲಿ ನಂಬಿಕೆ ಇರಿಸಿ ಪಕ್ಷ ರಾಜಕಾರಣದಿಂದ ಮೇಲೆದ್ದು ರಾಷ್ಟ್ರೀಯ ದೃಷ್ಟಿಕೋನದಿಂದ ಕೂಡಿದ ರಚನಾತ್ಮಕ ಕಾರ್ಯಗಳ ಮುಖಾಂತರ ಸಮರ್ಥ ಸಹಕಾರಿ ಚಳವಳಿಯನ್ನು ರೂಪಿಸುವುದು ಸಹಕಾರ ಭಾರತಿಯ ಉದ್ದೇಶವಾಗಿದೆ.
    ಈ ಉದ್ದೇಶದ ಸಾಕಾರದಲ್ಲಿ ಸಹಕಾರಿಯಾಗುವಂತಹ ಮೂರು ತಾತ್ವಿಕ ವಿಚಾರಗಳನ್ನು ಸಹಕಾರ ಭಾರತಿ ಅಳವಡಿಸಿಕೊಂಡಿದೆ.

    1. ಸಹಕಾರಿ ಪರಿವಾರ ಕಲ್ಪನೆಯಲ್ಲಿ ನಂಬಿಕೆ:
    ಸಹಕಾರ ಭಾರತಿಯ ಕಾರ್ಯಕ್ಷೇತ್ರವು ಇಡೀ ಸಹಕಾರ ರಂಗವೇ ಆಗಿರುವುದರಿಂದ ಸಮಗ್ರವಾಗಿ ಸಹಕಾರಿ ಸಮುದಾಯವನ್ನು ಸಂಘಟಿಸಿ ಪೋಣಿಸುವುದು ಇದರ ಪರಮ ಉದ್ದೇಶವಾಗಿದೆ. ಸಹಕಾರ ರಂಗದ ಬೇರೆ ಬೇರೆ ಘಟಕಗಳಾದ ಸಹಕಾರ ಸಂಘಗಳು ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗ ಸಹಕಾರ ಇಲಾಖೆ ಇವರೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಕ್ಷೇತ್ರದ ಯಶಸ್ಸು ಸಾಧ್ಯ. ಸಹಕಾರ ಕ್ಷೇತ್ರದ ಪ್ರತಿಯೊಂದು ಘಟಕವು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸಿ ಸಮಗ್ರ ಸಹಕಾರಿ ರಂಗದ ಹಿತವನ್ನು ಬಯಸುವುದೇ ಸಹಕಾರ ಭಾರತಿಯ ಕಾರ್ಯಯೋಜನೆಯಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವಾಲಯ ಮತ್ತು ಸಚಿವರು ಗಳ ಜೊತೆಗೆ ನಿರಂತರ ಸಂಪರ್ಕ, ಸಹಕಾರಿ ಇಲಾಖೆಗಳ ಮೂಲಕ ನಿಕಟ ಬಾಂಧವ್ಯ ಮತ್ತು ಸಂವಾದಗಳ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣದ ಕೆಲಸವನ್ನು ಸಹಕಾರ ಭಾರತಿ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ.

    2. ಪಕ್ಷ ರಾಜಕಾರಣದಿಂದ ದೂರ; ರಾಷ್ಟ್ರ ರಾಜಕಾರಣದ ಮೇಲೆ ನಂಬಿಕೆ:
    ಸಹಕಾರ ಭಾರತಿಯು ರಾಜಕೀಯ ಪಕ್ಷಗಳ ಹಿಡಿತದಿಂದ ಮುಕ್ತವಾಗಿರುವ ಸಂಘಟನೆಯಾಗಿದೆ. ರಾಜಕೀಯ ಪಕ್ಷಗಳ ಸಾಮಾನ್ಯ ಕಾರ್ಯಸೂಚಿಯಲ್ಲಿ ಅಧಿಕಾರ ಗ್ರಹಣ ಹೆಚ್ಚು ಮಹತ್ವವನ್ನು ಪಡೆಯುತ್ತದೆ. ಆದರೆ ಸಹಕಾರ ಕ್ಷೇತ್ರದ ಸಂಘಟನೆಗಾಗಿ ಸಂಸ್ಕಾರ ಮತ್ತು ಸೇವೆಯಿಂದ ಸಹಕಾರ ಸಂಘಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎನ್ನುವ ನಂಬಿಕೆ ಸಹಕಾರ ಭಾರತಿಯದ್ದಾಗಿದೆ. ಅದಕ್ಕಾಗಿ ರಾಜಕೀಯೇತರ ಅಸ್ತಿತ್ವದ ಅಗತ್ಯವನ್ನು ಮನಗಂಡಿರುತ್ತದೆ.

    3. ರಚನಾತ್ಮಕ ದೃಷ್ಟಿಕೋನ:
    ರಾಷ್ಟ್ರಹಿತದ ಯಾವುದೇ ವಿಷಯಗಳಿಗೆ ತಕ್ಷಣವೇ ಸ್ಪಂದಿಸುವ ಮನೋಭಾವ ಕರ್ತವ್ಯ ಭಾವನೆ ಮತ್ತು ಸಕಾರಾತ್ಮಕ ವಿಚಾರವೇ ರಚನಾತ್ಮಕ ದೃಷ್ಟಿಕೋನ. ಸಹಕಾರ ಭಾರತಿಯ ಸದಸ್ಯರಿಗೆ ಉತ್ತಮ ಸಂಸ್ಕಾರ ದೊರೆತು ಅವರಲ್ಲಿ ಗುಣವಿಕಾಸವಾಗಿ ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯ ಚಾರಿತ್ರ್ಯದ ನಿರ್ಮಾಣದ ಮೂಲಕ ಸಮೃದ್ಧ ಹಾಗೂ ಸಂಪತ್ಭರಿತ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬ ನಂಬಿಕೆ ಈ ವಿಚಾರದಲ್ಲಿದೆ. ಪಕ್ಷ ರಾಜಕಾರಣದಿಂದ ದೂರವಾಗಿದ್ದರೂ ರಾಷ್ಟ್ರ ರಾಜಕಾರಣ ದೊಂದಿಗೆ ಸ್ವಾರ್ಥ ರಹಿತವಾದ ಕಾರ್ಯ ಶೈಲಿಯನ್ನು ಅಳವಡಿಸಿಕೊಂಡಿರುತ್ತದೆ.

    * ನಾಗಪುರದ ವಸಂತ್ ರಾವ್ ದೇವ್ ಪೂಜಾರ್ ಇವರು ಸಹಕಾರ ಭಾರತಿಯ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    * ಸಹಕಾರ ಭಾರತಿಯ ಪ್ರಥಮ ರಾಷ್ಟ್ರೀಯ ಅಧಿವೇಶನ ಮುಂಬೈಯಲ್ಲಿ ಜರುಗಿತ್ತು.
    * ಪ್ರತಿ ಮೂರು ವರ್ಷಕ್ಕೊಮ್ಮೆ ದೇಶದ ನಾನಾ ರಾಜ್ಯಗಳಲ್ಲಿ ಸಹಕಾರ ಭಾರತಿಯ ರಾಷ್ಟ್ರೀಯ ಸಮ್ಮೇಳನ ಆಯೋಜನೆಗೊಳ್ಳುತ್ತಿದೆ.
    * ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಅಧಿವೇಶನದಲ್ಲಿ ಹೊಸ ರಾಷ್ಟ್ರೀಯ ಅಧ್ಯಕ್ಷರ ಸಹಿತ ನೂತನ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಆಯ್ಕೆಗೊಳ್ಳುತ್ತಿದ್ದು, ಅದಕ್ಕೆ ಮುಂಚಿತವಾಗಿ ರಾಜ್ಯ ಮತ್ತು ಜಿಲ್ಲೆಯಲ್ಲಿ ನೂತನ ಸಮಿತಿಗಳು ರಚನೆಯಾಗುತ್ತವೆ.
    ಕಳೆದ ವರ್ಷ ಡಿಸೆಂಬರ್‌ನಲ್ಲಿ ಜರುಗಿದ ಸಹಕಾರ ಭಾರತಿಯ ಎಂಟನೇ ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಸ್ತುತ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂಬೈ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರದ ನಿವೃತ್ತ ಪ್ರೊಫೆಸರ್ ಉದಯ ವಾಸುದೇವ ಜೋಶಿಯವರು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಬಿಹಾರದ ಸಹಕಾರಿ ಮುಖಂಡರಾದ ದೀಪಕ್ ಚೌರಾಸಿಯ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಪೂರ್ಣಾವಧಿ ಕಾರ್ಯಕರ್ತರಾದ ಮುಂಬೈನ ಸಂಜಯ್ ಪಾಚ್ಪೋರೆಯವರು ಕಾರ್ಯನಿರ್ವಹಿಸುತ್ತಿದ್ದಾರೆ.

    ಕರ್ನಾಟಕಕ್ಕೆ ಸಹಕಾರ ಭಾರತಿ ಪ್ರವೇಶ
    ಕರ್ನಾಟಕಕ್ಕೆ 1989ರಲ್ಲಿ ಹೆಜ್ಜೆಯಿಟ್ಟ ಸಹಕಾರ ಭಾರತಿ ಸಂಘಟನೆ ಕಳೆದ 35 ವರ್ಷಗಳಲ್ಲಿ ಹಂತಹಂತವಾಗಿ ವಿಸ್ತರಿಸಲ್ಪಟ್ಟು ಪ್ರಸ್ತುತ ರಾಜ್ಯದ 32 ಜಿಲ್ಲೆ ಮತ್ತು 3 ಮಹಾನಗರಗಳಲ್ಲಿ ಮತ್ತು ಸುಮಾರು 195 ತಾಲೂಕುಗಳಲ್ಲಿ ಸಕ್ರಿಯವಾದ ಜಿಲ್ಲೆ , ಮಹಾನಗರ ಮತ್ತು ತಾಲೂಕು ಸಮಿತಿಗಳ ಮೂಲಕ ಸಕ್ರಿಯವಾದ ಸಂಘಟನಾತ್ಮಕ ಚಟುವಟಿಕೆಗಳ ಜೊತೆಗೆ ಸಮಾಜಕ್ಕೆ ಬಹಳಷ್ಟು ಸೇವೆಯನ್ನು ಕೊಡಲು ಸಾಧ್ಯವಾಗಿರುವುದನ್ನು ಗುರುತಿಸಬಹುದು.
    ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ನ.ಕೃಷ್ಣಪ್ಪ ಇವರ ನಿರ್ದೇಶನದಂತೆ 1989ರಲ್ಲಿ ಮಹಾರಾಷ್ಟ್ರದ ದೊಂಬಿವಿಲಿಯಲ್ಲಿ ಜರಗಿದ ಅಖಿಲ ಭಾರತ ಸಹಕಾರ ಭಾರತಿಯ ಮಹತ್ತರವಾದ ಸಭೆಯಲ್ಲಿ ಅಂದಿನ ಹಿರಿಯ ಸಹಕಾರಿಗಳಾದ ಮಂಗಳೂರು ಜನತಾ ಬಜಾರ್‌ನ ಮಾಜಿ ಅಧ್ಯಕ್ಷ ಪುರಂದರ ಭಟ್, ಕ್ಯಾಂಪ್ಕೊದ ನಿರ್ದೇಶಕ ಟಿ.ವಿ.ಭಟ್ ಹಾಗೂ ಅಂದಿನ ಯುವ ಸಹಕಾರಿ ಕೋಂಕೋಡಿ ಪದ್ಮನಾಭ ಇವರು ಕರ್ನಾಟಕದಿಂದ ಪ್ರತಿನಿಧಿಸುವ ಮೂಲಕ ಕರ್ನಾಟಕ ಸಹಕಾರ ಭಾರತಿ ಆರಂಭಕ್ಕೆ ನಾಂದಿ ಹಾಡಿದರು. ಅಖಿಲ ಭಾರತ ಸಹಕಾರ ಭಾರತಿ ಸ್ಥಾಪನೆಯ ಮಾರ್ಗದರ್ಶಕ ಲಕ್ಷ್ಮಣರಾವ್ ಇನಾಂದಾರ್‌ರವರ ಸಹೋದರ ಸಂಘದ ಪ್ರಚಾರಕ ತಾತ್ಯಾರಾವ್ ಇನಾಂದಾರ್ ಸಭೆಯಲ್ಲಿ ಉಪಸ್ಥಿತರಿದ್ದು ಕರ್ನಾಟಕ ಸಹಕಾರ ಭಾರತಿಯ ಆರಂಭಕ್ಕೆ ಶುಭ ನುಡಿದರು.
    ಅಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬಲವಾಗಿ ಬೇರೂರಿದ್ದು ಹಾಗೂ ಸಂಘ ಪರಿವಾರದ ಚಟುವಟಿಕೆಗಳು ಈ ಭಾಗದಲ್ಲಿ ವಿಶೇಷವಾಗಿ ಪಸರಿಸಿದ ಕಾರಣಕ್ಕಾಗಿ ಮಂಗಳೂರು ಮುಖ್ಯ ಕೇಂದ್ರವಾಗಿ ಸಹಕಾರ ಭಾರತಿಯ ರಾಜ್ಯದ ಚಟುವಟಿಕೆಗಳು ಆರಂಭವಾಯಿತು. ಮಹಾರಾಷ್ಟ್ರ ಮತ್ತುˌ ಗುಜರಾತಿನ ನಂತರ ಕರ್ನಾಟಕ ಸಹಕಾರ ಭಾರತಿಯ ಹೆಜ್ಜೆಗುರುತಿಗೆ ಮೂರನೇ ರಾಜ್ಯವಾಯಿತು. 1991ರಲ್ಲಿ ಗುಜರಾತ್‌ನ ರಾಜಕೋಟದಲ್ಲಿ ರಾಷ್ಟ್ರೀಯ ಪ್ರಮುಖರ ಸಂಘಟನಾ ಸಭೆ ಜರಗಿತು. ಈ ಸಭೆಯಲ್ಲಿ ಕರ್ನಾಟಕದಿಂದ ಕೋಂಕೋಡಿ ಪದ್ಮನಾಭ ಭಟ್, ಪುರಂದರ ಭಟ್ˌ ಟಿ.ವಿ. ಭಟ್, ರಾಧಾಕೃಷ್ಣ ಕೋಟೆ, ಪ್ರಮೋದಕುಮಾರ ರೈ, ಕೃಷ್ಣ ನಾಯ್ಕ ಪಾಲ್ಗೊಂಡು ಸಂಘಟನೆಯ ಬಗ್ಗೆ ವಿಶೇಷ ಮಾಹಿತಿ ಕಲೆ
    ಹಾಕಿದರು.
    1990ರ ದಶಕದ ಆರಂಭದಲ್ಲಿ ದ.ಕ. ಜಿಲ್ಲೆ ಮೂಲಕ ರಾಜ್ಯದಲ್ಲಿ ಸಂಘಟನೆಯತ್ತ ತೊಡಗಿದ ಸಹಕಾರ ಭಾರತಿ ದ.ಕ. ಜಿಲ್ಲಾ ಸಂಚಾಲಕರಾಗಿ ಕೋಂಕೋಡಿ ಪದ್ಮನಾಭ ಆಯ್ಕೆಯಾದರು. ಮಂಗಳೂರು ಜನತಾ ಬಜಾರ್‌ ಅಂದಿನ ದಿನಗಳಲ್ಲಿ ಪರಿವಾರ ಸಂಘಟನೆ ಕಾರ್ಯಕರ್ತರ ವಿಶೇಷವಾಗಿ ಕೋಂಕೋಡಿ ಪದ್ಮನಾಭರ ನೇತೃತ್ವದಲ್ಲಿ ಆಧುನೀಕೃತ ದಿನಸಿ ಮಳಿಗೆಯಾಗಿ ರೂಪುಗೊಂಡು ವಿಶೇಷ ಪ್ರಚಾರ ಪಡೆದಿತ್ತು. 90ರ ದಶಕದ ಮಧ್ಯಭಾಗದಲ್ಲಿ ಮಣಿಪಾಲ ಸಮೀಪದ ಪರೀಕದಲ್ಲಿ ರಾಷ್ಟ್ರೀಯ ಮಟ್ಟದ ಸಮಾವೇಶ ಜರುಗಿ ರಾಷ್ಟ್ರದಲ್ಲಿ ಸಂಘಟನೆ ಬಲಪಡಿಸುವ ಯೋಜನೆಗಳು ರೂಪುಗೊಂಡಿತು. ಕರ್ನಾಟಕ ರಾಜ್ಯ ಸಹಕಾರ ಭಾರತಿಯ ಪ್ರಥಮ ಅಧ್ಯಕ್ಷರಾಗಿ ಮಾಜಿ ಶಾಸಕ, ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಉರಿಮಜಲು ರಾಮ ಭಟ್ ಕಾರ್ಯನಿರ್ವಹಿಸಿ ಸಹಕಾರ ಭಾರತಿ ಬೆಳವಣಿಗೆಗೆ ನಾಂದಿ ಹಾಡಿದರು. ಆ ಬಳಿಕ ಕೋಂಕೋಡಿಯವರು ರಾಜ್ಯ ಸಂಚಾಲಕರಾಗುವ ಮೂಲಕ ರಾಜ್ಯದಲ್ಲಿ ಸಂಘಟನೆಗೆ ಸಂಚಲನ ಮೂಡಿಸಿದರು. ಜೊತೆಗೆ ಸುಧೀರ್ಘಾವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಹಕಾರ ಭಾರತಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
    ಕರ್ನಾಟಕದ ಕೊಪ್ಪಳದ ರಮೇಶ್ ವೈದ್ಯರವರು ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾಲಘಟ್ಟದಲ್ಲಿ 2017ರಲ್ಲಿ ಸಂಸ್ಥಾಪಕರಾದ ಲಕ್ಷ್ಮಣ್ ರಾವ್ ಇನಾಂದಾರ್ ಜನ್ಮ ಶತಮಾನೋತ್ಸವ ಸಮಾರಂಭ ನವದೆಹಲಿಯಲ್ಲಿ ಜರುಗಿದಾಗ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಸಹಕಾರ ಭಾರತೀಯ ಸಂಸ್ಥಾಪಕರಾದ ಲಕ್ಷ್ಮಣ್ ರಾವ್ ಇನಾಂದಾರ್ ಆಗ ಗುಜರಾತಿನ ಸಂಘದ ಪ್ರಚಾರಕರಾಗಿದ್ದು ಬಾಲಸ್ವಯಂಸೇವಕನಾಗಿದ್ದ ತಮ್ಮನ್ನು ಸಂಘದ ಶಾಖೆಗೆ ಕರೆದುಕೊಂಡು ಹೋಗಿ ಸಂಸ್ಕಾರದ ಪಾಠ ಕಲಿಸಿದ್ದನ್ನು ಸ್ಮರಿಸಿದ್ದರು.

    ಸಹಕಾರ ಭಾರತಿ ಸಂಘಟನಾತ್ಮಕವಾಗಿ, ರಚನಾತ್ಮಕವಾಗಿ ,ಆಂದೋಲನಾತ್ಮಕವಾಗಿ ಮತ್ತು ಪ್ರಾತಿನಿಧ್ಯಾತ್ಮಕವಾಗಿ ನಾಲ್ಕು ಆಯಾಮಗಳಲ್ಲಿ ಕ್ರಿಯಾಶೀಲವಾಗಿ ದೇಶದ ಸಹಕಾರ ರಂಗದ ಸುಧಾರಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ.
    ಸಹಕಾರ ಭಾರತಿ ದೇಶದ ಸಹಕಾರಿ ಕ್ಷೇತ್ರದ ಸುಧಾರಣೆಗಾಗಿ ಪ್ರಜಾಸತ್ತಾತ್ಮಕವಾಗಿ ಕೈಗೊಂಡಿರುವ ಯಶಸ್ವಿ ಆಂದೋಲನಾತ್ಮಕ ಕಾರ್ಯಗಳು :

    1. ನ್ಯಾಯಾಂಗದ ಹೋರಾಟದ ಮೂಲಕ ಸಹಕಾರಿ ಸಂಸ್ಥೆಗಳ ಮೇಲೆ ಹೇರಲಾಗಿದ್ದ 5% ಕಲ್ಯಾಣ ನಿಧಿ ರದ್ಧತಿ : 1959ರ ಸಹಕಾರಿ ಕಾಯ್ದೆಗೆ ತಿದ್ದುಪಡಿ.

    2. ನಷ್ಟದಲ್ಲಿದ್ದ ಹೈನುಗಾರಿಕೆಗೆ ಚೈತನ್ಯ ನೀಡಲು ರೈತರು ಹಾಲು ಸೊಸೈಟಿಗಳಿಗೆ ಪೂರೈಸುವ ಹಾಲಿಗೆ ಪ್ರತಿ ಲೀಟರ್ ಗೆ ₹2/-ಪ್ರಪ್ರಥಮವಾಗಿ ಸಹಕಾರ ಭಾರತಿಯಿಂದ ಆಗ್ರಹ.. ರಾಜ್ಯ ಸರಕಾರದ ಸ್ಪಂದನೆ.ಪ್ರೋತ್ಸಾಹ ಧನ.. ಇದೀಗ ₹5/-ಕ್ಕೆ ಏರಿಕೆಯಾಗಿದೆ.

    3.ಸಿಬಂದಿ ನೇಮಕಾತಿಯ ನಿಯಮ 17ರಲ್ಲಿದ್ದ ತೊಡಕಿನ ಅಂಶಗಳ ತಿದ್ದುಪಡಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ.. ನಿಯಮಕ್ಕೆ ತಿದ್ದುಪಡಿ ತರಲು ಯಶಸ್ವಿ.

    4. ಕೃಷಿಪತ್ತಿನ ಸಹಕಾರಿ ಸಂಘಗಳ ಪುನಶ್ಚೇತನಕ್ಕಾಗಿ ಪ್ರೊ. ವೈದ್ಯನಾಥನ್ ಸಮಿತಿ ವರದಿ ಜಾರಿಗೆ ಒತ್ತಾಯ. ಅಂಶಿಕ ಯಶಸ್ಸು.

    5. ಮೂರನೇ ವ್ಯಕ್ತಿ (Third Party Cheque) ಚೆಕ್ ನಗದೀಕರಣಕ್ಕಾಗಿ ಸಹಕಾರ ಸಂಸ್ಥೆಗಳಿಗೆ ಆರ್‌ಬಿಐ ಅನುಮತಿ ಕೋರಿ ಆಗ್ರಹಪೂರ್ವಕ ಮನವಿ ಸಲ್ಲಿಕೆ. ₹50,000/- ದ ವರಗೆ ಚೆಕ್ ನಗರೀಕರಣಕ್ಕೆ ಅನುಮತಿ.

    6. ಸಹಕಾರಿ ಸಂಸ್ಥೆಗಳ ಮೂಲಕ ಇ_ಸ್ಟ್ಯಾಂಪಿಂಗ್ ವ್ಯವಸ್ಥೆ ಕಲ್ಪಿಸಲು ಸರಕಾರಕ್ಕೆ ಮನವಿ. ಸಂಪೂರ್ಣ ಯಶಸ್ಸು.

    7. ಸಹಕಾರಿ ಸಂಘಗಳ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ನಿರಂತರ ಹೋರಾಟ ಅಂಶಿಕ ಯಶಸ್ಸು.

    8. ಡಿಪೋಸಿಟ್ ಇನ್ಸೂರೆನ್ಸ್ ಸ್ಕೀಮ್ (DIGC) ₹1 ಲಕ್ಷದಿಂದ ₹5 ಲಕ್ಷ ಕ್ಕೆ ಹೆಚ್ಚಿಸಲು ಹೋರಾಟ ಯಶಸ್ವಿಯಾಗಿರುತ್ತದೆ.

    9. ಕೃಷಿ ಇಲಾಖೆಯ ಜೊತೆಗಿದ್ದ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕವಾದ ಸಹಕಾರಿ ಇಲಾಖೆ ರಚನೆಗೆ ಆಗ್ರಹ.
    2021 ರಲ್ಲಿ ಕೇಂದ್ರ ಸರಕಾರ ಪ್ರತ್ಯೇಕ ಸಹಕಾರಿ ಸಚಿವಾಲಯವನ್ನು ರಚಿಸಿರುತ್ತದೆ.

    10. ದೇಶದಲ್ಲಿ ಸಹಕಾರಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ದಶಕಗಳಿಂದ ನಿರಂತರ ಆಗ್ರಹಿಸುತ್ತಿದ್ದ ಸಹಕಾರ ಭಾರತಿಯ ಬೇಡಿಕೆಗೆ ತ್ರಿಭುವನ್ ಸಹಕಾರ ವಿಶ್ವವಿದ್ಯಾನಿಲಯ ಸ್ಥಾಪನೆಯ ಮೂಲಕ ಮಹತ್ವದ ಯಶಸ್ಸು ಲಭಿಸಿದೆ.

    11. ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ಜಾರಿಗೆ ಒತ್ತಾಯ. ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯದಲ್ಲಿಯಶಸ್ವಿ ಕರ್ನಾಟಕ ಸೌಹಾರ್ದ ಸಹಕಾರಿ ಸಂಸ್ಥೆಗಳ ಉದಯ.

    12. ನೂತನ ಸಹಕಾರ ನೀತಿಗೆ ಒತ್ತಾಯ. ಇದೀಗ ದೇಶದ ಸಹಕಾರಿ ಸಚಿವರಾದ ಶ್ರೀ ಅಮಿತ್ ಶಾ ರವರ ನೇತೃತ್ವದಲ್ಲಿ ನೂತನ ಸಹಕಾರ ನೀತಿಯ ರಚನೆಯ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆಗಳಿಗೆ ನಾಂದಿಯಾಗಿದೆ.

    ಸಹಕಾರ ಭಾರತಿ ನಿರಂತರವಾಗಿ ಸಹಕಾರಿ ಕಾಯಿದೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸರಕಾರದ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಕೆಲವೊಮ್ಮೆ ನ್ಯಾಯಾಂಗ ಹೋರಾಟದ ಮೂಲಕವೂ ಕೂಡ ಯಶಸ್ಸನ್ನು ಪಡೆದಿರುತ್ತದೆ.

    ಸಹಕಾರ ಭಾರತಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳು.

    1. ಕರ್ನಾಟಕ ರಾಜ್ಯ ಸಹಕಾರಿ ಕಾಯ್ದೆ _1959 ಸಮಗ್ರ ಬದಲಾವಣೆಗೆ ಅಗ್ರಹ.

    2. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಜಿಲ್ಲಾ ಸಹಕಾರಿ ನ್ಯಾಯಾಲಯಗಳ ಸ್ಥಾಪನೆ.

    3. ವಿಧಾನ ಪರಿಷತ್ ಮತ್ತು ರಾಜ್ಯಸಭೆಗಳಲ್ಲಿ ಸಹಕಾರಿ ಕ್ಷೇತ್ರದಿಂದ ಪ್ರಾತಿನಿಧ್ಯ.

    4. ಪಠ್ಯಪುಸ್ತಕಗಳಲ್ಲಿ ಸಹಕಾರಿ ಕ್ಷೇತ್ರದ ಇತಿಹಾಸ, ಮಹತ್ವ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಅಳವಡಿಕೆಗೆ ಒತ್ತಾಯ.

    5. ಯುವಜನರನ್ನು ಮತ್ತು ಮಹಿಳೆಯರನ್ನು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳ ಅನುಷ್ಠಾನ.

    6. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಗೆ ಅನುಮತಿಸಿರುವ ಸಿಬಿಲ್ ಮತ್ತು ಶೀಘ್ರ ಸಾಲ ವಸೂಲಾತಿಗಾಗಿ ಸೆಕ್ಯೂರಿಟೈಸೇಷನ್ ಕಾಯ್ದೆಯನ್ನು ಸಹಕಾರಿ ಸಂಸ್ಥೆಗಳಿಗೂ ಅಳವಡಿಕೆ ಮಾಡಿಕೊಳ್ಳಲು ಅವಕಾಶ ನೀಡುವುದು.

    7. ಸಹಕಾರಿ ಸಂಘಗಳ ತೆರಿಗೆ ನೀತಿಯಲ್ಲಿ ಸ್ಪಷ್ಟತೆ ತರುವುದು.

    ಸಹಕಾರ ಭಾರತಿ ಪ್ರತಿ 3 ವರ್ಷಗಳಿಗೊಮ್ಮೆ ರಾಜ್ಯ ಸಮಾವೇಶ ಮತ್ತು ರಾಷ್ಟ್ರೀಯ ಸಮಾವೇಶಗಳನ್ನು ಆಯೋಜಿಸಿ, ಸಹಕಾರಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಚರ್ಚಿಸಿ, ಹಲವಾರು ನಿರ್ಣಯಗಳನ್ನು ಕೈಗೊಂಡು ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿಕೊಂಡು ಬರುತ್ತಿದೆ.

    ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ದಾವಣಗೆರೆಯಲ್ಲಿ ಜರುಗಿದ ಸಹಕಾರ ಭಾರತಿಯ ರಾಜ್ಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ದಾವಣಗೆರೆಯ ಪ್ರಭುದೇವ. ಆರ್. ಮಾಗನೂರ್ , ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಣೂರು ನರಸಿಂಹ ಕಾಮತ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ತುಮಕೂರಿನ ಮಂಜುನಾಥ ಬಿ. ಆರ್. ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 46 ವರ್ಷಗಳಲ್ಲಿ ಸಹಕಾರ ಭಾರತಿ ಸಹಕಾರಿ ಕ್ಷೇತ್ರದ ಸುಧಾರಣೆ ಮತ್ತು ಅಭಿವೃದ್ಧಿಯಾಗಿ ನಿರಂತರವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ರಾಷ್ಟ್ರೀಯ ಚಿಂತನೆಗಳ ಮೂಲಕ ಸಹಕಾರಿ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನು ತುಂಬಲು ನಿರಂತರವಾಗಿ ಶ್ರಮಿಸುತ್ತಿದೆ.

    ಲೇಖಕರು: ಸಾಣೂರು ನರಸಿಂಹ ಕಾಮತ್,
    ರಾಜ್ಯ ಪ್ರಧಾನ ಕಾರ್ಯದರ್ಶಿ,
    ಸಹಕಾರ ಭಾರತಿ ,ಕರ್ನಾಟಕ.

    Founders Day Lakshman Rao Inaamdaar Saanooru Nsrasimha Kamath Sahakara Bharathi
    Previous Articleಉಡುಪಿ ಗೋಲ್ಡ್‌ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಶುಭಾರಂಭ
    Next Article ವಿಶ್ವಕರ್ಮ ಸಹಕಾರ ಬ್ಯಾಂಕ್ ವತಿಯಿಂದ ಸ್ವಚ್ಛತಾ ಹೀ ಸೇವಾ 17ನೇ ಶ್ರಮದಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.