ಭಾರತದ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಬದಲಾವಣೆಯ ಗಾಳಿ: ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್ ಲಿಮಿಟೆಡ್ ಅಡಿ ಕಾರ್ಯ
ನವದೆಹಲಿ: ಹೊಸ ವರ್ಷ ಸಮೀಪಿಸುತ್ತಿದ್ದಂತೆ, ಟ್ಯಾಕ್ಸಿ ಮಾರುಕಟ್ಟೆ(Marketg) ದೊಡ್ಡ ಬದಲಾವಣೆಯ ಅಂಚಿನಲ್ಲಿ ನಿಂತಿದೆ. ವರ್ಷಗಳಿಂದ ಓಲಾ ಮತ್ತು ಉಬರ್‌ನಂತಹ ಖಾಸಗಿ ಕ್ಯಾಬ್ ಕಂಪನಿಗಳ ಹಿಡಿತದಲ್ಲಿದ್ದ ಟ್ಯಾಕ್ಸಿ(Taxi) ಕ್ಷೇತ್ರಕ್ಕೆ ಈಗ ಹೊಸ ಸ್ಪರ್ಧಿಯ ಆಗಮನವಾಗುತ್ತಿದ್ದು, ಜನವರಿ 1ರಿಂದ ದೆಹಲಿಯಲ್ಲಿ ಸಹಕಾರ ಕ್ಷೇತ್ರದ ಮಹತ್ವಾಕಾಂಕ್ಷೆಯ ಭಾರತ್ ಟ್ಯಾಕ್ಸಿ (Bharat Taxi) ಅಧಿಕೃತ ಓಡಾಟ ನಡೆಸಲಿದೆ. ಸಹಕಾರ ಮಾದರಿಯ ಈ ಭಾರತ್ ಟ್ಯಾಕ್ಸಿ ಚಾಲಕರ ಬದುಕನ್ನೇ ಬದಲಾಯಿಸುವ ಮಾದರಿಯನ್ನು ಮುಂದಿಟ್ಟುಕೊಂಡು ಗಮನ ಸೆಳೆಯುತ್ತಿದೆ. ಇದು ದೇಶಾದ್ಯಂತ ವಿಸ್ತರಿಸಿದರೆ ದೇಶದ ಟ್ಯಾಕ್ಸಿ ವಲಯದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
https://chat.whatsapp.com/FCEnlTkAKCC0MGPhXtX4i4
ಪ್ರಸ್ತುತ ದೇಶದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುತಿರುವ ಓಲಾ, ಉಬರ್‌ನಂಥ ಖಾಸಗಿ ಕಂಪನಿಗಳಿಗೆ ಪರ್ಯಾಯವಾಗಿ ಸರಕಾರವೇ ಭಾರತ್ ಟ್ಯಾಕ್ಸಿ ಎಂಬ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಇದು ಕೇಂದ್ರ ಸರಕಾರದ ಸಹಕಾರ ಸಚಿವಾಲಯ ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗದ ಮಾರ್ಗದರ್ಶನದಲ್ಲಿ ಆರಂಭವಾಗಿರುವ ದೇಶದ ಮೊದಲ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆಯಾಗಿದೆ. ಇದನ್ನು ‘ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ʼ ಸಂಸ್ಥೆಯು ನಿರ್ವಹಿಸಲಿದೆ. ಈ ಟ್ಯಾಕ್ಸಿ ಸೇವೆಯನ್ನು ಮುಖ್ಯವಾಗಿ ಚಾಲಕರ ಹಿತದೃಷ್ಟಿಯಿಂದ ರೂಪಿಸಲಾಗಿದೆ. ಸಹಕಾರಿ ಸಂಸ್ಥೆಯಾಗಿ ಎಲ್ಲ ಚಾಲಕರನ್ನೂ ಪಾಲುದಾರರನ್ನಾಗಿ ಮಾಡಿಕೊಂಡು ಮುಂದೆ ಸಾಗಲಿದೆ.
ದೆಹಲಿಯಲ್ಲಿ ಮೊದಲ ಬಾರಿ ಅನುಷ್ಠಾನ
ಭಾರತ್ ಟ್ಯಾಕ್ಸಿ ಸೇವೆಯನ್ನು ಮೊದಲ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದ ಆರಂಭದ ದಿನವೇ ಅಂದರೆ ಜ.1ರಂದು ಆರಂಭಿಸಲು ಕೇಂದ್ರ ಸರಕಾರ ಸಿದ್ದತೆ ನಡೆಸಿದೆ. ಇದರ ಭಾಗವಾಗಿ ಈಗಾಗಲೇ ದಿಲ್ಲಿಯಲ್ಲಿ 56 ಸಾವಿರಕ್ಕೂ ಹೆಚ್ಚು ಚಾಲಕರು ಈ ಭಾರತ್ ಟ್ಯಾಕ್ಸಿ ಸೇವೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ದಿನದ 24 ಗಂಟೆಯೂ ಈ ಟ್ಯಾಕ್ಸಿ ವ್ಯವಸ್ಥೆ ಲಭ್ಯವಿರಲಿದೆ. ಈ ಸೇವೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈ, ಪುಣೆ, ಭೋಪಾಲ್ ಮತ್ತು ಜೈಪುರ ಸೇರಿದಂತೆ 20 ನಗರಗಳಿಗೆ ಹಂತಹಂತವಾಗಿ ವಿಸ್ತರಿಸಲಿದೆ. ಈಗಾಗಲೇ ದೆಹಲಿ ಹಾಗೂ ಗುಜರಾತ್‌ನ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷಾರ್ಥ ಓಡಾಟ ನಡೆಸಲಾಗಿದೆ.
ಜಯೇನ್ ಮೆಹ್ತಾ ಹೊಣೆಗಾರಿಕೆ
ಸಹಕಾರಿ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿರುವ ಗುಜರಾತ್‌ನ ಅಮುಲ್ ಹೇಗೆ ರೈತರಿಂದ ನೇರವಾಗಿ ಹಾಲು ಸಂಗ್ರಹಿಸಿ, ರೈತರನ್ನೇ ಆ ವ್ಯವಸ್ಥೆಯ ಮಾಲಕರನ್ನಾಗಿ ಮಾಡಿ ಮಧ್ಯವರ್ತಿಗಳ ಕಾಟ ತಪ್ಪಿಸಿದೆಯೋ, ಅದೇ ‘ಸಹಕಾರಿ ಮಾದರಿ’ಯನ್ನು ಭಾರತ್ ಟ್ಯಾಕ್ಸಿ ಅನುಸರಿಸುತ್ತಿದೆ. ಪ್ರಮುಖವಾಗಿ ಭಾರತ್ ಟ್ಯಾಕ್ಸಿಯನ್ನು ಮುನ್ನಡೆಸುತ್ತಿರುವ ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ ಅಧ್ಯಕ್ಷರಾಗಿ ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಯೇನ್ ಮೆಹ್ತಾ ಅವರು ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ.
ಚಾಲಕರು ಕಮಿಷನ್ ಕೊಡಬೇಕಾಗಿಲ್ಲ
ಖಾಸಗಿ ಕಂಪನಿಗಳು ಸಾಮಾನ್ಯವಾಗಿ ಈ ರೈಡ್ ಸೇವೆಯಲ್ಲಿ ಕಮಿಷನ್ ಬಯಸುತ್ತವೆ. ಅದರ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತವೆ. ಆದರೆ ಈ ಭಾರತ್ ಟ್ಯಾಕ್ಸಿ ಶೂನ್ಯ ಕಮಿಷನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಪ್ರಮುಖವಾಗಿ ಪ್ರಯಾಣಿಕರು ಪಾವತಿಸುವ ಸುಪೂರ್ಣ ಶುಲ್ಕದಲ್ಲಿ ಶೇ.80ರಷ್ಟು ಹಣವನ್ನು ಚಾಲಕರಿಗೆ ನೇರವಾಗಿ ನೀಡಲಾಗುತ್ತದೆ. ಇವರಿಗೆ ಮಾಸಿಕ ಸಂಬಳದ ರೂಪದಲ್ಲಿ ಹಣ ನೀಡುವುದರಿಂದ ಚಾಲಕರಿಗೆ ಹೆಚ್ಚು ಅನುಕೂಲವಾಗಲಿದೆ. ಸಹಕಾರಿ ಸಂಘದಿಂದ ಬರುವ ಹೆಚ್ಚುವರಿ ಲಾಭವನ್ನು ಅದರ ಸದಸ್ಯರಿಗೆ ಹಂಚಲಾಗುತ್ತದೆ. ಭಾರತ್ ಟ್ಯಾಕ್ಸಿ ಸೇವೆಯಲ್ಲಿ ಯಾವುದೇ ಸ್ಜರ್ ಪ್ರೈಸಿಂಗ್ ಇಲ್ಲದೆ ಸ್ಥಿರ ದರಗಳನ್ನು ಪರಿಚಯಿಸಲಿದೆ. ಅಂದರೆ ಜನಸಂದಣಿ ಇರುವ ಸಮಯ, ರಜಾ ದಿನಗಳು ಅಥವಾ ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲೂ ದರಗಳು ಬದಲಾಗುವುದಿಲ್ಲ. ಇದು ಬಳಕೆದಾರರಿಗೆ ದರಗಳ ಬಗ್ಗೆ ಹೆಚ್ಚಿನ ಖಚಿತತೆ ನೀಡಲಿದೆ. ಟ್ರಾಫಿಕ್, ಜನಸಂದಣಿ ಕಾರಣಗಳಿಂದ ದರ ಹೆಚ್ಚಿಸುವಂಥ ಕಿರಿಕಿರಿ ಪ್ರಸಂಗಗಳು ಇದರಲ್ಲಿ ಎದುರಾಗುವುದಿಲ್ಲ. ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ.





ಭಾರತ್ ಟ್ಯಾಕ್ಸಿ ಅಪ್ಲಿಕೇಷನ್
ಭಾರತ್ ಟ್ಯಾಕ್ಸಿ ಹೆಸರಿನ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲೂ ಭಾರತ್ ಟ್ಯಾಕ್ಸಿ ಆಪ್ ಲಭ್ಯವಿರಲಿದೆ. ಗ್ರಾಹಕರು ತನ್ನ ಮೊಬೈಲ್ ನಂಬರ್‌ನಿಂದ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಅಪ್ಲಿಕೇಷನ್‌ನಲ್ಲಿ ತಾವು ಇರುವ ಜಾಗ ಹಾಗೂ ತಲುಪಬೇಕಾಗಿರುವ ಜಾಗವನ್ನು ನೋಂದಾಯಿಸಿದರೆ ಚಾಲಕರೇ ಪ್ರಯಾಣಿಕರು ಇರುವ ಜಾಗಕ್ಕೆ ಬಂದು ಕರೆದುಕೊಂಡು ಹೋಗುತ್ತಾರೆ. ಸರಳವಾದ ಬುಕಿಂಗ್ಸ್ ಪ್ರಕ್ರಿಯೆ, ದರದ ಬಗ್ಗೆ ಸ್ಪಷ್ಟ ಮಾಹಿತಿ, ವಾಹನದ ಲೈಟ್ ಟ್ಯಾಕಿಂಗ್ ಜತೆಗೆ ಬಹುಭಾಷಾ ಬೆಂಬಲವನ್ನು ಒಳಗೊಂಡಿರುತ್ತದೆ. ಇದರಲ್ಲಿ ಬೈಕ್, ಆಟೋ, ಕಾರು ಸೇವೆಗಳು ಲಭ್ಯವಿವೆ.
ಉಬರ್ ಅಥವಾ ಓಲಾದಂತೆಯೇ ಭಾರತ್ ಟ್ಯಾಕ್ಸಿ ಆರಂಭದಲ್ಲಿ ಹೆಚ್ಚು ಲಾಭ ಗಳಿಸದೇ ಇರಬಹುದು. ಆದರೆ ಇದರಲ್ಲಿ ಶೂನ್ಯ ಕಮಿಷನ್ ಇರುವುದರಿಂದ ಚಾಲಕರಿಗೆ ದಿನಕ್ಕೆ 400ರಿಂದ 500 ರೂ. ಲಾಭ ಬಂದರೆ, ಅವರು ಅಪ್ಲಿಕೇಷನ್‌ನಲ್ಲಿ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ದಿನಕ್ಕೆ ಯಾವುದೇ ಲಾಭವಿಲ್ಲದೆ 200ರಿಂದ 250 ರೂ. ಉಳಿಸಿದರೂ ಚಾಲಕನು ಅಪ್ಲಿಕೇಷನ್ ಅನ್ನು ಬಳಸುತ್ತಾರೆ. ಇತರರಿಗೂ ಅದನ್ನು ಬಳಸುವಂತೆ ಶಿಫಾರಸು ಮಾಡಿದರೆ ಹೆಚ್ಚು ಉಪಯುಕ್ತವಾಗುತ್ತದೆ. ಜನರೂ ಸಹ ಇದೇ ಅಪ್ಲಿಕೇಷನ್ ಬಳಸುವುದರಿಂದ ಚಾಲಕರಿಗೆ ದಿನಕ್ಕೆ ಕನಿಷ್ಠ 350 ರೂ. ಲಾಭ ಗಳಿಸುವ ಸಾಧ್ಯತೆ ಇರುತ್ತದೆ.
ಹೆಚ್ಚಿನ ಕಮಿಷನ್, ಹಠಾತ್ ನೀತಿ ಬದಲಾವಣೆ, ಟ್ರಿಪ್ ಹಂಚಿಕೆ, ದಂಡಗಳು ಮತ್ತು ಅನಿಶ್ಚಿತ ಆದಾಯದಂಥ ಸಮಸಯೆಗಳನ್ನು ಇದುವರೆಗೆ ಟ್ಯಾಕ್ಸಿ ಮಾರುಕಟ್ಟೆಯ ಚಾಲಕರು ಎದುತಿಸುತ್ತಿದ್ದರು. ಒಂದು ಕಾಲದಲ್ಲಿ ಚಾಲಕರು ದುಡಿದ ಹಣದ 30ರಿಂದ 40 ಶೇಕಡಾವರೆಗೂ ಕಂಪನಿಗಳ ಪಾಲಾಗುತ್ತಿತ್ತು. ಈ ಅಸಮಾಧಾನವೇ ಹೊಸ ಪರ್ಯಾಯದ ಬೇಡಿಕೆಗೆ ಕಾರಣವಾಯಿತು. ಕೆಲವು ವರ್ಷಗಳ ಹಿಂದೆ ಓಲಾ ಪ್ರತಿ ರೈಡ್‌ಗೆ ಭಾರೀ ಕಮಿಷನ್ ವಿಧಿಸುತ್ತಿತ್ತು. ಆದರೆ 2025ರ ಹೊತ್ತಿಗೆ ಕಂಪನಿಯ ನೀತಿ ಸಂಪೂರ್ಣ ಬದಲಾಯಿತು. ಆಟೋ, ಬೈಕ್ ಮತ್ತು ಕ್ಯಾಬ್‌ಗಳಿಗೆ ಶೂನ್ಯ ಕಮಿಷನ್ ಚಂದಾದಾರಿಕೆ ಆಧಾರಿತ ಮಾದರಿ ಜಾರಿಗೆ ತಂದಿತು. ಈ ಮಾದರಿಯಡಿಯಲ್ಲಿ ಚಾಲಕರು ದಿನಕ್ಕೆ ಸುಮಾರು ₹67 ಅಥವಾ ತಿಂಗಳಿಗೆ ₹2,010 ನಿಗದಿತ ಶುಲ್ಕ ಪಾವತಿಸಬೇಕು. ಇದರ ನಂತರ ಅವರು ರೈಡ್‌ನಿಂದ ಬಂದ ಸಂಪೂರ್ಣ ಹಣವನ್ನು ತಮ್ಮಲ್ಲೇ ಇಟ್ಟುಕೊಳ್ಳಬಹುದು. ಕಮಿಷನ್ ಕಟ್ ಸಮಸ್ಯೆ ಕಡಿಮೆಯಾದರೂ, ಚಾಲಕರು ಇನ್ನೂ ನಿಯಮಗಳ ಗೊಂದಲದಿಂದ ಮುಕ್ತರಾಗಿಲ್ಲ. ಆದರೆ ಭಾರತ್ ಟ್ಯಾಕ್ಸಿ ಖಾಸಗಿ ಲಾಭೋದ್ದೇಶದ ಕಂಪನಿಯಲ್ಲ. ಇದು ಸರ್ಕಾರಿ ಬೆಂಬಲಿತ, ಚಾಲಕ-ಮಾಲೀಕತ್ವದ ಸಹಕಾರಿ ಮಾದರಿ. ಅಂದರೆ, ಇಲ್ಲಿ ಕಾರ್ಪೊರೇಟ್ ಲಾಭಕ್ಕಿಂತ ಚಾಲಕರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ. ಈ ಮಾದರಿಯಡಿಯಲ್ಲಿ ದೆಹಲಿಯಲ್ಲಿ ಚಾಲಕರು ತಮ್ಮ ಸವಾರಿಯಿಂದ 80ರಿಂದ 100% ದರವರೆಗೆ ನೇರವಾಗಿ ಪಡೆಯುವ ನಿರೀಕ್ಷೆ ಹೊಂದಲಾಗಿದೆ. ಯಾವುದೇ ಕಂಪನಿ ಪ್ರತಿ ರೈಡ್‌ನಿಂದ ಲಾಭ ಕಿತ್ತುಕೊಳ್ಳುವುದಿಲ್ಲ. ಓಲಾ–ಉಬರ್‌ನಲ್ಲಿ ಲಾಭ ಕಾರ್ಪೊರೇಟ್ ಸಂಸ್ಥೆಗಳಿಗೆ ಹೋಗುತ್ತಿದ್ದರೆ, ಭಾರತ್ ಟ್ಯಾಕ್ಸಿಯಲ್ಲಿ ಹೆಚ್ಚುವರಿ ಆದಾಯ ಕೊನೆಗೆ ಚಾಲಕ ಸದಸ್ಯರಲ್ಲೇ ಹಂಚಿಕೆಯಾಗುತ್ತದೆ.
ಭಾರತ್ ಟ್ಯಾಕ್ಸಿ ಪ್ರತಿ ರೈಡ್‌ಗೆ ಕಮಿಷನ್ ವಿಧಿಸುವುದೇ ಇಲ್ಲ. ಅಪ್ಲಿಕೇಶನ್ ಬಳಕೆಗೆ ಮಾತ್ರ ಒಂದು ಸಣ್ಣ ಕಾರ್ಯಾಚರಣಾ ಶುಲ್ಕ ವಿಧಿಸುತ್ತದೆ. ಆಟೋರಿಕ್ಷಾಗಳಿಗೆ ದಿನಕ್ಕೆ ಸುಮಾರು ₹18, ಟ್ಯಾಕ್ಸಿಗಳಿಗೆ ದಿನಕ್ಕೆ ಸುಮಾರು ₹30 ಇದು ಖಾಸಗಿ ಅಪ್ಲಿಕೇಶನ್‌ಗಳ ಸಾವಿರಾರು ರೂಪಾಯಿ ಮಾಸಿಕ ಚಂದಾದಾರಿಕೆಗಳ ಎದುರು ಬಹಳ ಕಡಿಮೆ ಎನ್ನಲಾಗಿದೆ. ಇದಲ್ಲದೇ ಭಾರತ್ ಟ್ಯಾಕ್ಸಿ ಯಶಸ್ವಿಯಾದರೆ, ಚಾಲಕರಿಗೆ ಆರ್ಥಿಕ ಸ್ವಾತಂತ್ರ್ಯ ತರುವ ಮಾದರಿಯಾಗಬಹುದು. ದೆಹಲಿ ಬಳಿಕ ಈ ಮಾದರಿ ದೇಶದ ಇತರೆ ನಗರಗಳಿಗೆ ವಿಸ್ತರಿಸಿದರೆ, ಟ್ಯಾಕ್ಸಿ ಕ್ಷೇತ್ರದಲ್ಲೇ ದೊಡ್ಡ ಪರಿವರ್ತನೆ ಸಂಭವಿಸುವ ಸಾಧ್ಯತೆ ಇದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




