ನವದೆಹಲಿ: ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ನಿರ್ದೇಶಕರ ಅವಧಿಯ ಕುರಿತ ಆದೇಶ/ಸುತ್ತೋಲೆ ಹೊಸ ಚರ್ಚೆ ಹುಟ್ಟುಹಾಕಿದೆ. ಆಗಸ್ಟ್ 1ರಿಂದ ಜಾರಿಗೊಂಡಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (ತಿದ್ದುಪಡಿ) 2025, ಸೆಕ್ಷನ್ 10ಎ(2)(ಜಿ)ಯ ಪ್ರಕಾರ ರಾಜ್ಯ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ ಆಡಳಿತ ಮಂಡಳಿಗೆ ನಿರಂತರ 10 ವರ್ಷ ಮಾತ್ರ ನಿರ್ದೇಶಕರಾಗಲು ಅವಕಾಶ ಮಾಡಿಕೊಡಲಾಗಿದೆ. ಈ ತಿದ್ದುಪಡಿ ಅನ್ವಯ ಆರ್‌ಬಿಐ ಆದೇಶ/ಸುತ್ತೋಲೆ ಹೊರಡಿಸಿದೆ.
ತಿದ್ದುಪಡಿ ಕಾಯ್ದೆ ಪ್ರಕಾರ 10 ವರ್ಷ ಅವಧಿ ಮೀರಿ ನಿರ್ದೇಶಕರಾದವರು ಅನರ್ಹರಾಗುತ್ತಾರೆ. ಆರ್‌ಬಿಐ ಈಗಾಗಲೇ ದೇಶದ ಎಲ್ಲ ರಾಜ್ಯಗಳಂತೆ ಕರ್ನಾಟಕದ ಅಪೆಕ್ಸ್, ಡಿಸಿಸಿ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ಸುತ್ತೋಲೆ ಕಳುಹಿಸಿ, 2025ರ ಆಗಸ್ಟ್ 1ಕ್ಕೆ ಪರಿಚಯಿಸಿದ ತಿದ್ದುಪಡಿ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸೂಚಿಸಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಕೇಂದ್ರ ಸರ್ಕಾರ ತಂದ ತಿದ್ದುಪಡಿ, ಅರ್‌ಬಿಐ ಸೂಚನೆಯ ಬಾಣದಿಂದ ಬಚಾವಾಗಲು ರಾಜ್ಯ ಸಹಕಾರಿ ಕಾಯ್ದೆಯನ್ನು ಮುನ್ನೆಲೆಗೆ ತಂದಿದ್ದಾರೆ. ಇದರಿಂದ ಈ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದರೆ ಸಹಕಾರಿ ರಂಗದಲ್ಲಿ ಸಂಚಲನವೇ ಆರಂಭವಾಗುವ ಸಾಧ್ಯತೆಗಳಿವೆ.
ತಿದ್ದುಪಡಿ ಜಾರಿಯಾದರೆ ಉಂಟಾಗುವ ಪ್ರಮುಖ ಸಮಸ್ಯೆಗಳು
ಉಭಯ ನಿಯಂತ್ರಣ ವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆ ತಿಕ್ಕಾಟ
ಆರ್‌ಬಿಐನ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ರಾಜ್ಯ ಸಹಕಾರಿ, ಸೌಹಾರ್ದ ಕಾಯ್ದೆಗಳು ಪ್ರತ್ಯೇಕ
ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಂಘರ್ಷ ಏರ್ಪಡುವ ಆತಂಕ
ನಿರ್ದೇಶಕರ 10 ವರ್ಷಗಳ ಅವಧಿಯ ಕಾಲಮಿತಿಯಿಂದ ಹಠಾತ್ ಆಡಳಿತ ವ್ಯತ್ಯಾಸ
ದುಷ್ಪರಿಣಾಮಗಳೇನು?
ಸಹಕಾರ ಬ್ಯಾಂಕ್‌ಗಳು ಮತ್ತು ಆರ್‌ಬಿಐ ಜತೆ ಸಂಘರ್ಷ ಸಾಧ್ಯತೆ
ನಿರ್ದೇಶಕರ ಆಡಳಿತ ಮಂಡಳಿ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ಸಾಧ್ಯತೆ
ಸಹಕಾರ ಬ್ಯಾಂಕ್‌ಗಳಲ್ಲಿನ ಠೇವಣಿದಾರರಿಗೆ ಆತಂಕ
ಗ್ರಾಮೀಣ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳುವ ಸಾಧ್ಯತೆ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ
ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರ್‌ಬಿಐ ನಿಯಂತ್ರಿಸಿದರೆ, ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಗೆ ರಾಜ್ಯ ಸಹಕಾರಿ ಕಾಯ್ದೆ ಪ್ರಕಾರ ಚುನಾವಣೆಗಳಾಗುತ್ತವೆ. ಸಹಕಾರ ಕ್ಷೇತ್ರವು ರಾಜ್ಯಪಟ್ಟಿಗೆ ಸಹಕಾರ ಸೇರಿದ್ದು, ಕೇಂದ್ರ ಸರ್ಕಾರ ಅಥವಾ ಆರ್‌ಬಿಐ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಹೀಗಾದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎನ್ನುವುದು ರಾಜ್ಯ ಸಹಕಾರಿ ವಲಯದ ವಾದ. ಹಠಾತ್ತನೆ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆಗೆ ಹೆಜ್ಜೆ ಇಟ್ಟರೆ ಸಂಘರ್ಷದ ತಿರುವು ಕೂಡ ಪಡೆಯಬಹುದು.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ ಮತ್ತಿತರ ರಾಜ್ಯಗಳ ಸಹಕಾರ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖರು ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಕೇಂದ್ರದ ಸಹಕಾರ ಸಚಿವ ಅಮಿತ್ ಷಾ, ಆರ್‌ಬಿಐ ಡೆಪ್ಯುಟಿ ಗವರ್ನರ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಚೆಕ್ ಲಿಸ್ಟ್‌ನೊಂದಿಗೆ ಪತ್ರ ಬರೆದಿದ್ದಾರೆ. ಏಕಸ್ವಾಮ್ಯ ಕೂಡದು, ಹೊಸರಕ್ತ, ಹೊಸ ಯೋಚನೆ-ಯೋಜನೆ ಹರಿದು ಬರಬೇಕು. ಸಹಕಾರ ಕ್ಷೇತ್ರ ಸಬಲವಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ವೇಳೆ ಸಹಕಾರ ಕ್ಷೇತ್ರವು ಸಂವಿಧಾನಬದ್ಧ ಸ್ವಾಯತ್ತತೆ ಹೊಂದಿದೆ. ರಾಜ್ಯ ವಿಷಯದ ಪಟ್ಟಿಯಲ್ಲಿದೆ ಎಂಬುದನ್ನು ಮರೆಯುವಂತಿಲ್ಲ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

