ನವೆಂಬರ್ 2ರಂದು ಮಂಗಳೂರು ಪುರಭವನದಲ್ಲಿ ಕಾರ್ಯಕ್ರಮ, ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ
ಮಂಗಳೂರು: ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನವೆಂಬರ್ 2ರಂದು ಭಾನುವಾರ ನಡೆಯಲಿದೆ. ಸಂಜೆ 4 ಗಂಟೆಗೆ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ನಡೆಯಲಿದ್ದು, ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ ಕಾರ್ಯಕ್ರಮ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವೂ ನಡೆಯಲಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಸಂಜೆ 4 ಗಂಟೆಗೆ ಸಂಘದ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಧರ್ಮಪ್ರಾಂತದ ಬಿಷಪ್ ಅತಿವಂದನೀಯ ಫಾ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಸ್ಮರಣಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್ ರಮೇಶ್ ಗೌರವ ಉಪಸ್ಥಿತರಿರಲಿದ್ದಾರೆ. ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ೫೦ ವರ್ಷದ ಅವಧಿಯಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷ, ಉಪಾಧ್ಯಕ್ಷರಾದವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ರೋಹನ್ ಕಾರ್ಪೊರೇಷನ್‌ನ ಚೇರ್‌ಮನ್ ರೋಹನ್ ಮೊಂತೇರೊ ಸಾಧಕರನ್ನು ಸನ್ಮಾನಿಸಲಿದ್ದಾರೆ. ಹೆಚ್.ಪಿ.ಸಿ.ಎಲ್ ಮಂಗಳೂರು ಇದರ ಡೆಪ್ಯುಟಿ ಜನರಲ್ ಮ್ಯಾನೇಜರ್ ನವೀನ್ ಕುಮಾರ್ ಎಂ.ಜಿ ಕನ್ನಡಕ ವಿತರಣೆ ಮಾಡಲಿದ್ದಾರೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಉತ್ತಮ ಗ್ರಾಹಕರಿಗೆ ಸನ್ಮಾನ ಮಾಡಲಿದ್ದಾರೆ.
ಸಂಘದ ಉಪಾಧ್ಯಕ್ಷರಾದ ಸಿರಿಲ್ ಡಿಸೋಜ, ಕಾರ್ಯದರ್ಶಿ ಪ್ರಮೋದ್ ವಾಸ್, ನಿರ್ದೇಶಕರಾದ ಎಂ.ಚಂದ್ರಶೇಖರ್, ಅನಿಲ್ ಡಿಸೋಜ, ಜೇಮ್ಸ್ ಜೆ ಮಾಡ್ತ, ಆಲ್ವಿನ್ ಗೋಡ್ವಿನ್ ಪಿಂಟೋ, ಬಬಿತಾ ಡಿಸೋಜ, ವಿದ್ಯಾ ವಿನಯ ತೋರಸ್, ರಾಜೇಶ್, ಶವಾದ್, ಪಿ.ಪಿ ವರ್ಗೀಸ್, ಚಂದ್ರಶೇಖರ್ ಕೆ, ಜಮಾಲುದ್ದಿನ್ ಕದಿಕೆ, ವಿಶ್ವನಾಥ್, ವಸಂತ್ ಶೆಟ್ಟಿ, ಭಾಸ್ಕರ್ ರಾವ್ ಹಾಗೂ ಎಡ್ವರ್ಡ್ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಐತಿಹಾಸಿಕ ಕಾರ್ಯಕ್ರಮ: ಐವನ್ ಡಿಸೋಜ
ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಶುಕ್ರವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಅಧ್ಯಕ್ಷರಾದ ಐವನ್ ಡಿಸೋಜ ತಿಳಿಸಿದರು.
ಮಂಗಳೂರು ಮಹಾನಗರದಲ್ಲಿ ಆಟೋರಿಕ್ಷಾ ಮತ್ತು ಕಾರು ಚಾಲಕರ ಹಳೆ ವಾಹನಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸಿಗದ ಸಂದರ್ಭದಲ್ಲಿ ರೊಸಾರಿಯೋ ಚರ್ಚ್‌ನ ಫಾದರ್ ಫ್ರೆಡ್ ವಿ ಪಿರೇರಾ ಅವರು ಈ ಸಂಘವನ್ನು ಸ್ಥಾಪಿಸಿದರು. ಬ್ಲೇಸಿಯಸ್ ಡಿಸೋಜ ಈ ಸಂಸ್ಥೆಯ ಮೊದಲ ಅಧ್ಯಕ್ಷರಾಗಿದ್ದರು. ಸಂಸ್ಥೆಯ ಮೂಲಕ ಮಂಗಳೂರು ನಗರದ 50%ರಷ್ಟು ರಿಕ್ಷಾ ಮತ್ತು ಕಾರು ಚಾಲಕರಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರ ಅಭ್ಯುದಯಕ್ಕಾಗಿ ಸತತವಾಗಿ ಕೆಲಸ ಮಾಡಿಕೊಂಡು ಬಂದಿದೆ. ಕಾರು ಮತ್ತು ರಿಕ್ಷಾ ಚಾಲಕರ ಸಂಘವನ್ನು ಸ್ಥಾಪನೆ ಮಾಡಿ 50 ವರ್ಷವನ್ನು ಪೂರ್ಣಗೊಳಿಸಿರುವುದು ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ. 50 ವರ್ಷಗಳಲ್ಲಿ ರಿಕ್ಷಾ ಚಾಲಕರಿಗೆ ಮತ್ತು ಅವರ ಕುಟುಂಬದ ಸದಸ್ಯರ ಅಭ್ಯುದಯಕ್ಕೆ ಸತತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಮಹಾಸಭೆಯ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ, ಸದಸ್ಯರಿಗೆ ಆರೋಗ್ಯ ತಪಾಸಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಐವನ್ ಡಿಸೋಜ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪ್ರಮೋದ್ ವಾಸ್, ಉಪಾಧ್ಯಕ್ಷರಾದ ಸಿರಿಲ್ ಡಿಸೋಜ, ನಿರ್ದೇಶಕರಾದ ವಿದ್ಯಾ ವಿನಯ ತೋರಸ್, ಬಬಿತಾ ಡಿಸೋಜ, ಭಾಸ್ಕರ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಸ್ವ ಉದ್ಯೋಗಕ್ಕೆ ನೆರವು
ಸಂಸ್ಥೆಯು ಸಾವಿರಾರು ಸದಸ್ಯರಿಗೆ ಸಾಲ ನೀಡುವ ಮೂಲಕ ಸ್ವ ಉದ್ಯೋಗಕ್ಕೆ ತಮ್ಮದೇ ಆದ ದೊಡ್ಡ ಕೊಡುಗೆ ನೀಡಿದೆ. ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘವು 50 ವರ್ಷದ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಪೆಟ್ರೋಲ್ ಪಂಪ್ ಮತ್ತು ಬ್ಯಾಂಕ್‌ನ ವ್ಯವಸ್ಥೆಯನ್ನು ಪರಿಚಯಿಸಿದೆ ಎಂದೂ ಐವನ್ ಡಿಸೋಜ ಹೇಳಿದರು. ಸಂಘದ ಕೇಂದ್ರ ಕಚೇರಿಯು ಬಲ್ಮಠದಲ್ಲಿ ಇದ್ದು, ಇದರ ಶಾಖೆಯು ತೊಕ್ಕೊಟ್ಟು ಪೆರ್ಮನ್ನೂರು ಚರ್ಚ್ ಬಿಲ್ಡಿಂಗ್‌ನಲ್ಲಿ ತೆರೆಯಲಾಗಿದೆ, ಬ್ಯಾಂಕಿನ ವ್ಯವಹಾರವನ್ನು ಮಂಗಳೂರು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ವಿಸ್ತರಿಸಲಾಗಿದೆ. ಸಂಸ್ಥೆಯು ಸುಳ್ಯದಿಂದ ಮೂಲ್ಕಿಯವರೆಗೆ ಸದಸ್ಯರನ್ನು ಹೊಂದಿದ್ದು, 17 ನಿರ್ದೇಶಕರು ಆಡಳಿತ ಮಂಡಳಿಯಲ್ಲಿದ್ದಾರೆ. ಪ್ರತಿಯೊಂದು ಸಮುದಾಯದವರಿಗೆ ಅವಕಾಶ ನೀಡುವ ಮೂಲಕ ಈ ಸಂಸ್ಥೆಯು ಎಲ್ಲರ ಮೆಚ್ಚುಗೆ ಗಳಿಸಿದೆ. ಸಂಘದ ಸದಸ್ಯರು ರಿಕ್ಷಾ ಮತ್ತು ಕಾರು ಚಾಲಕರು ಮಾತವಲ್ಲದೆ ಸ್ವಂತ ಉದ್ಯಮ ಮಾಡಿಕೊಂಡು ಬಂದಿದ್ದಾರೆ. ಸದಸ್ಯರ ಪೈಕಿ ಶೇಕಡಾ 80ರಷ್ಟು ಸದಸ್ಯರ ಮಕ್ಕಳು ಅಂಗ್ಲಮಾಧ್ಯಮ ಶಾಲೆಯಲ್ಲಿ ಓದುವ ಮೂಲಕ ವೈದ್ಯಕೀಯ, ಇಂಜಿನಿಯರಿಂಗ್ ಇತ್ಯಾದಿ ಪ್ರೊಫೆಶನಲ್ ಕೋರ್ಸ್ ಮಾಡಿ ಉನ್ನತಿ ಸಾಧಿಸಿದ್ದಾರೆ ಎಂದು ತಿಳಿಸಿದರು.
50ನೇ ವರ್ಷದ ಲಾಂಛನ ಬಿಡುಗಡೆ
50 ವರ್ಷದ ಸವಿನೆನೆಪಿಗಾಗಿ ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘಕ್ಕೆ ಸಹಕಾರ ನೀಡಿದ ಮತ್ತು ನಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸುಮಾರು 50 ಜನ ಮಹನೀಯರಿಗೆ ಸನ್ಮಾನ ಮಾಡಲು ತೀರ್ಮಾನಿಸಿದ್ದು “ಸುವರ್ಣ ಮಹೋತ್ಸವ” ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ. ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸ್ಥಾಪಕ ಸದಸ್ಯರುಗಳು, ಕಾನೂನು ಸಲಹೆಗಾರರು, ಸಂಘದ ಪ್ರಗತಿಗಾಗಿ ಶ್ರಮಿಸಿದ ಸಿಬ್ಬಂದಿಗಳಿಗೆ, ಠೇವಣಿದಾರರು, ಪಿಗ್ಮಿ ಕಲೆಕ್ಟರ್ಸ್, ಅತ್ಯುತ್ತಮ ಸೇವೆ ಸಲ್ಲಿಸಿದ ಗ್ರಾಹಕರು, ಮಹಿಳಾ ಆಟೋ ರಿಕ್ಷಾ ಚಾಲಕರು, ಅಪಘಾತ ರಹಿತ ಚಾಲಕರು, ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ ಐವನ್ ಡಿಸೋಜ, ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಬೆಳಿಗ್ಗೆ 9.30ರಿಂದ ಸಂಘದ ಸದಸ್ಯರುಗಳಿಗೆ ಮತ್ತು ಸಾರ್ವಜನಿಕರಿಗೆ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುವುದು. ಕ್ರೀಡಾಕೂಟದ ಉದ್ಘಾಟನೆಯನ್ನು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ರಾಕೇಶ್ ಮಲ್ಲಿ ನೆರವೇರಿಸಲಿದ್ದು, ಟೌನ್ ಹಾಲ್ ಆವರಣದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗಜಗ್ಗಾಟ ಮತ್ತು ಅನೇಕ ಕ್ರೀಡಾ ಪಂದ್ಯಾಟಗಳು ನಡೆಯಲಿದೆ.ಮಧ್ಯಾಹ್ನ 1 ಗಂಟೆಗೆ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಸಂಘದ ಸುವರ್ಣ ಸಂಭ್ರಮದ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





