ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯ
ಕಾರ್ಕಳ: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ವರ್ತಮಾನದ ಅಗತ್ಯಕ್ಕೆ ತಕ್ಕಂತಿಲ್ಲ, ಈ ಕಾಯ್ದೆಯನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸುವುದು ಅಗತ್ಯ ಎಂದು ರಾಜ್ಯ ಹೈಕೋರ್ಟ್ ಹೇಳಿರುವುದು ಸ್ವಾಗತಾರ್ಹ ಮತ್ತು ಸಕಾಲಿಕ ಎಂದು ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿದ್ದ ಏಕಸದಸ್ಯ ನ್ಯಾಯಪೀಠವು ಇತ್ತೀಚೆಗೆ ರಿಟ್ ಅರ್ಜಿಯೊಂದರ ವಿಚಾರಣೆಯ ಸಂದರ್ಭ ಕರ್ನಾಟಕ ಸಹಕಾರ ಸಂಘಗಳ (ಕೆಪಿಎಸ್) ಕಾಯ್ದೆ_1959 ಈವರೆಗೆ ಆಡಳಿತ ನಡೆಸಿರುವ ಸರಕಾರಗಳು ಹಲವು ತಿದ್ದುಪಡಿಗಳನ್ನು ತಂದಿದ್ದರೂ, ಅಸ್ಪಷ್ಟತೆಗಳು ಇನ್ನೂ ಉಳಿದಿರುವುದನ್ನು ಗಮನಿಸಿದೆ. ಕಾಯ್ದೆಯ ಅಡಿಯಲ್ಲಿ ಬರುವ ಸದಸ್ಯತ್ವದ ಹಕ್ಕುಗಳು, ಅನರ್ಹತೆ, ಮತದಾರರ ಪಟ್ಟಿ ಸಿದ್ದಪಡಿಸುವುದು, ಕಾಲಕಾಲಕ್ಕೆ ಚುನಾವಣೆ ನಡೆಸುವುದು, ಲೆಕ್ಕಪರಿಶೋಧನೆ ಮತ್ತು ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ. ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಪಿಎಸ್ ಕಾಯಿದೆಗೆ ತಾರ್ಕಿಕವಾಗಿ ಸಮಗ್ರ ತಿದ್ದುಪಡಿ ಮಾಡಬೇಕಾಗಿದೆ ಎಂದು ಕೋರ್ಟ್ ಹೇಳಿದೆ.



ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಹಣಕಾಸು ,ನೇಕಾರಿಕೆ, ಸಕ್ಕರೆ, ವಸತಿ ವಲಯಗಳಲ್ಲಿನ ಸಹಕಾರ ಸಂಘಗಳು ಸಮಾಜದಲ್ಲಿ ಹಾಸುಹೊಕ್ಕಾಗಿ ಅವುಗಳು ಬೀರುತ್ತಿರುವ ಪರಿಣಾಮವನ್ನು ಗಮನಿಸಿದಾಗ ಕೋರ್ಟ್‌ನ ಕಳಕಳಿ ಅರ್ಥವಾಗುತ್ತದೆ. ಯಾವುದೇ ಕಾಯ್ದೆ ಇರಲಿ, ಕಾಲದ ಅವಶ್ಯಕತೆಗಳಿಗೆ ಸ್ಪಂದಿಸದೆ ಹೋದರೆ ಅದು ತನ್ನ ಮೌಲ್ಯ ಕಳೆದುಕೊಳ್ಳುತ್ತದೆ ಮತ್ತು ಆ ಕಾಯ್ದೆಯನ್ನು ರೂಪಿಸಿದ ಉದ್ದೇಶವೂ ವ್ಯರ್ಥವಾಗುತ್ತದೆ. ಸಹಕಾರಿ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಆ ಸಂಸ್ಥೆಗಳಲ್ಲಿ ಸಾಂವಿಧಾನಿಕ ತತ್ವಗಳೊಂದಿಗೆ ದಕ್ಷತೆ, ಪಾರದರ್ಶಕತೆ ಮತ್ತು ಹೊಂದಾಣಿಕೆ ಖಾತರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ.
ಹೈಕೋರ್ಟ್‌ನ ಅಭಿಪ್ರಾಯ ಹೊರಬೀಳುವ ಮೊದಲೇ ರಾಜ್ಯ ಸರಕಾರವು ಇದೇ ವರ್ಷ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ_2025ನ್ನು ರೂಪಿಸಿ ಅದಕ್ಕೆ ಎರಡೂ ಸದನಗಳಿಂದ ಅಂಗೀಕಾರ ಪಡೆದಿದೆ. ಆದರೆ ಈ ತಿದ್ದುಪಡಿಯಲ್ಲಿ ಮಾಡಿರುವ ಅಂಶಗಳು ಕೆಲವೇ ಕೆಲವು ವಿಷಯಗಳಿಗೆ ಸೀಮಿತವಾಗಿದೆಯೇ ಹೊರತು ಹೈಕೋರ್ಟ್ ಹೇಳಿರುವಂತೆ ಕಾಯ್ದೆಯನ್ನು ಕೂಲಂಕಶವಾಗಿ ಪರಿಶೀಲನೆಗೆ ಒಳಪಡಿಸಿ ಸಮಗ್ರ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿರಲಿಲ್ಲ.
ರಾಜ್ಯ ಸರಕಾರದ ಸಹಕಾರಿ ಇಲಾಖೆಯು ಹೈಕೋರ್ಟ್ ಹೇಳಿರುವಂತೆ ಹೊಸ ಸಮಗ್ರ ಸಹಕಾರಿ ಕಾಯ್ದೆಯನ್ನು ರೂಪಿಸಲು ತಜ್ಞರ ಸಮಿತಿ ರಚಿಸಿ, ಹಿರಿಯ ಅನುಭವಿ ಸಹಕಾರಿಗಳ ಸಲಹೆ ಪಡೆದು ಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗಾಗಿ ಹೊಸ ಕಾಯ್ದೆಯನ್ನು ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾಣೂರು ನರಸಿಂಹ ಕಾಮತ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com







