ಕಾರವಾರ: ಇಲ್ಲಿನ ಕಾರವಾರ ಅರ್ಬನ್ ಬ್ಯಾಂಕ್‌ಗೆ ಲಿಕ್ವಿಡೇಟರ್ (ಸಮಾಪನಾಧಿಕಾರಿ) ಅನ್ನು ನೇಮಕ ಮಾಡಲಾಗಿದ್ದು, ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮುಂದಿನ ಆದೇಶದ ತನಕ ಈ ಬ್ಯಾಂಕ್‌ನ ಕಾರ್ಯಚಟುವಟಿಕೆಗಳು ಲಿಕ್ವಿಡೇಟರ್ ಅವರ ನೇತೃತ್ವದಲ್ಲೇ ತೆರೆಯಲಿದ್ದು, ಸಾಲ ವಸೂಲಿ ಹಾಗೂ ಇತರ ಕಾರ್ಯಗಳೂ ಈ ಹಿಂದಿನಂತೆ ನಡೆಯಲಿದೆ ಎಂದು ಲಿಕ್ವಿಡೇಟರ್ ಮಾಹಿತಿ ನೀಡಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಕಳೆದ ಜುಲೈ 22ರಂದು ಕಾರವಾರ ಅರ್ಬನ್ ಬ್ಯಾಂಕ್‌ನ ಲೈಸನ್ಸ್ ರದ್ದು ಮಾಡಿ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿತ್ತು. ಹಣಕಾಸಿನ ಪರಿಸ್ಥಿತಿ ಕಳವಳಕಾರಿಯಾಗಿದ್ದರಿಂದ ಬ್ಯಾಂಕಿನ ನಿರಂತರ ಕಾರ್ಯಾಚರಣೆಯು ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಅಭಿಪ್ರಾಯಪಟ್ಟಿದ್ದ ಆರ್‌ಬಿಐ, ಲಿಕ್ವಿಡೇಟರ್ ಅನ್ನು ನೇಮಿಸುವಂತೆ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸೂಚಿಸಿತ್ತು. ಅದರಂತೆ ಅಂಕೋಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಮಮತಾ ನಾಯಕ್ ಅವರು ಲಿಕ್ವಿಡೇಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ವಹಿಸಿದ ನಂತರ ಮಾತನಾಡಿರುವ ಮಮತಾ ನಾಯಕ್, ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರಿಗೆ ಗರಿಷ್ಠ 5 ಲಕ್ಷದವರೆಗೆ ವಿಮಾ ಸೌಲಭ್ಯವಿದೆ. 3670 ಗ್ರಾಹಕರು 5 ಲಕ್ಷದ ಒಳಗೆ ಠೇವಣಿ ಇಟ್ಟಿದ್ದು, ಅವರ ಪೈಕಿ 1588 ಜನರಿಗೆ ಒಟ್ಟು 37.79 ರೂ.ಗಳನ್ನು ಡಿಪಾಸಿಟ್ ಇನ್ಶೂರೆನ್ಸ್ ಆಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಜೂನ್ 30ರವರೆಗೆ ಹಣ ಪಾವತಿಸಿದೆ. ಇನ್ನೂ 2082 ಠೇವಣಿದಾರರಿಗೆ 32.52 ಕೋಟಿ ರೂ. ಪಾವತಿ ಮಾಡಬೇಕಿದ್ದು, ಆ ಪ್ರಕ್ರಿಯೆಯನ್ನು ಸದ್ಯದಲ್ಲೇ ಪ್ರಾರಂಭಿಸಲಿದ್ದೇವೆ ಎಂದು ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿ ಪ್ರಕ್ರಿಯೆ ಹಾಗೂ ಇತರ ಕಾರ್ಯಗಳನ್ನು ಮಾಡಲಿದ್ದಾರೆ. ಸಹಕಾರ ಸಂಘಗಳ ಕಾಯ್ದೆಯ ನಿಯಮ 64ರ ಅಡಿ ಬ್ಯಾಂಕ್ ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.




