ನವದೆಹಲಿ: ಭಾರತದ ಎರಡನೇ ಅತಿದೊಡ್ಡ ಸಹಕಾರಿ ಸಂಸ್ಥೆ ಎನಿಸಿರುವ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಭ್ಕೋ)ದ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಎಸ್.ಎಸ್ ಯಾದವ್(ಸುಂದರ್ ಸಿಂಗ್ ಯಾದವ್) ಅವರನ್ನು ನೇಮಕ ಮಾಡಲಾಗಿದೆ. 2019ರ ಡಿಸೆಂಬರ್‌ನಿಂದ ಎಸ್.ಎಸ್ ಯಾದವ್ ಹೆಚ್‌ಆರ್ ನಿರ್ದೇಶಕರಾಗಿದ್ದು ಪ್ರಸಕ್ತ ಭಡ್ತಿ ನೀಡಿ ಎಂ.ಆರ್. ಶರ್ಮಾ ಅವರ ಬದಲಿಗೆ ನೇಮಿಸಲಾಗಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಕ್ರಿಭ್ಕೋದ 45ನೇ ವಾರ್ಷಿಕ ಮಹಾಸಭೆಯ ಒಂದು ದಿನ ಮೊದಲಷ್ಟೇ ಈ ನೇಮಕಾತಿ ಪ್ರಕಟಣೆ ಘೋಷಣೆಯಾಗಿದೆ. ಇತ್ತೀಚೆಗಷ್ಟೇ ಕ್ರಿಭ್ಕೋದ ಅಧ್ಯಕ್ಷರಾಗಿ ಸುಧಾಕರ್ ಚೌಧರಿ ಆಯ್ಕೆಯಾಗಿದ್ದರು. ತಮ್ಮ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್.ಎಸ್ ಯಾದವ್, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ಹೆಚ್ಚಿನ ಉನ್ನತಿ ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ಸಹಕಾರಿ ಮಾದರಿಯು ಅಪಾರವಾದ ಸಾಮರ್ಥ್ಯವನ್ನು ಹೊಂದಿದ್ದು, ರೈತರಿಗೆ ನಮ್ಮಿಂದೇನು ಪ್ರಯೋಜನ ಸಿಗಬೇಕೋ ಅದನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಎಸ್.ಎಸ್. ಯಾದವ್ ಸಾರ್ವಜನಿಕ ಸೇವೆ ಮತ್ತು ಸಾಂಸ್ಥಿಕ ನಿರ್ವಹಣೆಯಲ್ಲಿ 30 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.

ಉತ್ತರಾಖಂಡದ ಜಿ.ಬಿ. ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವೀಧರರಾಗಿರುವ ಎಸ್.ಎಸ್ ಯಾದವ್ ಅವರು 1989ರಲ್ಲಿ ಭಾರತೀಯ ಟೆಲಿಕಾಂ ಸೇವೆಗೆ ಸೇರಿದ್ದು ನಂತರ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಿಂದ ಸಾರ್ವಜನಿಕ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ವೃತ್ತಿಜೀವನದ ಅವಧಿಯಲ್ಲಿ, ಯಾದವ್ ಭಾರತದ ಟೆಲಿಕಾಂ ವಲಯದಲ್ಲಿ 18 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದು, ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ (2009-2011) ನಿರ್ದೇಶಕರಾಗಿ ಮತ್ತು ಭಾರತದ ಚುನಾವಣಾ ಆಯೋಗದಲ್ಲಿ (2012-2014) ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಕ್ರಿಭ್ಕೋದಲ್ಲಿ ಯೋಜನಾ ನಿರ್ವಹಣೆ, ಸಿಬ್ಬಂದಿ ಅಭಿವೃದ್ಧಿ, ಹಣಕಾಸು ನಿರ್ವಹಣೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com








