ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಮಹಾಸಭೆಯಲ್ಲಿ ಅಧ್ಯಕ್ಷ ಭಾಸ್ಕರ ದೇವಸ್ಯ ಹೇಳಿಕೆ
ಮಂಗಳೂರು: ರಾಜ್ಯ ಸರ್ಕಾರದ ಕೆಲವು ಹೊಸ ನೀತಿಗಳಿಂದಾಗಿ ಸೌಹಾರ್ದ ಸಹಕಾರಿ ಸಂಘಗಳಿಗೂ ಸಮಸ್ಯೆ ಉಂಟಾಗಿದೆ. ಇವುಗಳ ವಿರುದ್ಧ ಹೋರಾಟ ಮಾಡುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯು ಸದಾಕಾಲ ಸೌಹಾರ್ದ ಸಹಕಾರಿ ಸಂಘಗಳ ಜೊತೆ ಇರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಮಂಗಳೂರಿನ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವರ್ಷದಿಂದ ಹೊಸ ಆಡಳಿತ ಸಮಿತಿ ರಚನೆಯಾದ ಬಳಿಕ ಒಕ್ಕೂಟಕ್ಕೆ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅದು ನಡೆಯಲಿಲ್ಲ. ಈ ವರ್ಷ ಶೇ.೧೦೦ ಸದಸ್ಯತ್ವ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಎಲ್ಲ ಸೌಹಾರ್ದ ಸಂಘಗಳೂ ಜಿಲ್ಲಾ ಒಕ್ಕೂಟದಲ್ಲಿ ಸದಸ್ಯತ್ವ ಪಡೆದು ಬಲಶಾಲಿಯಾಗಿ ರೂಪುಗೊಳ್ಳಬೇಕು ಎಂದು ಅವರು ಹೇಳಿದರು.

ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಮಾತನಾಡಿ, ಸೌಹಾರ್ದ ಸಹಕಾರಿ ಸಂಘಗಳ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು. ಸೆಪ್ಟೆಂಬರ್ ೧ರ ಮೊದಲು ಎಲ್ಲಾ ಸೌಹಾರ್ದ ಸಹಕಾರಿ ಸಂಘಗಳು ಆಡಿಟ್ ವರದಿಯನ್ನು ಸಂಬಂಧಪಟ್ಟ ಇಲಾಖೆಗಳು ಹಾಗೂ ಸಂಯುಕ್ತ ಸಹಕಾರಿಗೆ ಸಲ್ಲಿಸಬೇಕು. ಈ ವಿಷಯದ ಬಗ್ಗೆ ಎಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಿ ಹಾಗೂ ಸಿಇಒಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಗೌರವ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಬೈಲಾ ತಿದ್ದುಪಡಿ ಹಾಗೂ ಸರ್ಕಾರದ ಹೊಸ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿ ಹೊಸ ಕಾಯ್ದೆಗಳಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ಬಗ್ಗೆ ಚರ್ಚೆ ನಡೆದು ಮುಂದಿನ ಕಾರ್ಯಯೋಜನೆಗಳನ್ನು ರೂಪಿಸುವ ಬಗ್ಗೆ ಸಲಹೆ ವ್ಯಕ್ತವಾಯಿತು. ಶ್ರೀಶಾ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎಂ.ಎಸ್ ಗುರುರಾಜ್, ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಣೈ, ಪುತ್ತೂರಿನ ಅಶ್ವಿನಿ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಶಿವರಾಮ್ ಪ್ರಭು ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎನ್, ಫೆಡರಲ್ ಅಧಿಕಾರಿ ರೋಹಿತ್ ಹಾಗೂ ಜಿಲ್ಲೆಯ ಸಹಕಾರಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಸಂಜೀವ ಅಡ್ಯಾರ್ ಸ್ವಾಗತಿಸಿದರು. ಒಕ್ಕೂಟದ ಗೌರವ ಮುಖ್ಯ ಕಾರ್ಯನಿರ್ವಾಹಕರಾದ ಚೇತನ್ ಕೊಟ್ಟಾರಿ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


