ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಿಕ ವಾಟ್ಸ್ಯಾಪ್ ಮೇಲೂ ವಂಚಕರ ಕಣ್ಣು..!
ಮಂಗಳೂರು: ಯಾರ್ಯಾರದ್ದೋ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳನ್ನು ನಕಲಿಯಾಗಿ ಸೃಷ್ಟಿಸಿ ಪರಿಚಯಸ್ಥರಲ್ಲಿ ಹಣದ ಬೇಡಿಕೆ ಇಡುತ್ತಿದ್ದ ವಂಚಕರ ಜಾಲ ಇದೀಗ ವಾಟ್ಸ್ಯಾಪ್ ಮೇಲೂ ಕಣ್ಣು ಹಾಕಿದೆ. ವಾಟ್ಸ್ಯಾಪ್ ನಂಬರ್ ಅನ್ನೇ ಹೈಜಾಕ್ ಮಾಡಿ ಅದರಿಂದ ಸಂದೇಶ ಕಳುಹಿಸಿ ಹಣ ಪೀಕಿಸಲು ತಂತ್ರ ಹೂಡಿದ ಘಟನೆ ಮಂಗಳವಾರ ಪುತ್ತೂರಿನಲ್ಲಿ ವರದಿಯಾಗಿದೆ.
https://chat.whatsapp.com/EbVKVnWB6rlHT1mWtsgbch
ಪತ್ರಿಕಾ ಸಂಸ್ಥೆಯೊಂದರ ಉದ್ಯೋಗಿಯ ವಾಟ್ಸ್ಯಾಪ್ ಖಾತೆಯನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರು ಅವರ ಸಂಪರ್ಕ ಪಟ್ಟಿಯಲ್ಲಿದ್ದ ಅವರ ಸ್ನೇಹಿತರಿಗೆ ತುರ್ತು ಸಂದೇಶ ರವಾನಿಸಿ ತಾನು ಕಷ್ಟದಲ್ಲಿದ್ದು, ಯುಪಿಐ ನಂಬರ್ ಸ್ಟ್ರಕ್ ಆಗಿದೆ ಎಂದು ನಂಬಿಸುವಂತೆ ಸಂದೇಶ ಕಳುಹಿಸಿ ಹಣ ನೀಡುವಂತೆ ಕೋರಿದ್ದರು. ಆ ಉದ್ಯೋಗಿಯ ಸಂಪರ್ಕದಲ್ಲಿದ್ದ 100ಕ್ಕೂ ಅಧಿಕ ಮಂದಿಗೆ ಈ ಸಂದೇಶ ರವಾನೆ ಆಗಿದ್ದು ಈ ಸಮಯದಲ್ಲಿ ವಂಚನೆಗೆ ಒಳಗಾದ ವ್ಯಕ್ತಿಯ ಮೊಬೈಲ್ ಕಾರ್ಯನಿರ್ವಹಣೆಯೂ ಕೆಲವು ಗಂಟೆ ಕಾಲ ಕಾರ್ಯಾಚರಣೆಯನ್ನೇ ನಿಲ್ಲಿಸಿತ್ತು.
ವಾಟ್ಸ್ಯಾಪ್ ನಂಬರ್ ಹ್ಯಾಕ್ ಮಾಡಿ ಅವರದೇ ನಂಬರ್‌ನಲ್ಲಿ ಸಂದೇಶ ಕಳುಹಿಸಿದ ವಂಚಕರು, ಇಂಗ್ಲಿಷ್‌ನಲ್ಲಿ ‘ನನ್ನ ಯುಪಿಐ ಕೆಲಸ ಮಾಡುತ್ತಿಲ್ಲ. ತುರ್ತಾಗಿ 60 ಸಾವಿರ ರೂ. ಬೇಕು. ಎರಡೇ ಗಂಟೆಯಲ್ಲಿ ವಾಪಸ್ ಹಾಕುವುದಾದಗಿ ಸಂದೇಶ ರವಾನೆ ಮಾಡಲಾಗಿತ್ತು. ತನಗೆ ಬೇಕಾದ ಹಣವನ್ನು ಇನ್ನೊಬ್ಬರ ಖಾತೆಗೆ ಕಳುಹಿಸವಂತೆಯೂ ಸೂಚಿಸಲಾಗಿತ್ತು. ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ಹಾಕಲು ಹೇಳಿದ್ದರಿಂದ ಸಂಶಯಗೊಂಡ ಗೆಳೆಯರು ಅವರ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಇದರಿಂದ ಇದು ನಕಲಿ ಸಂದೇಶ ಎಂಬುದು ಗಮನಕ್ಕೆ ಬಂದಿದೆ.

ಪಾರ್ಸೆಲ್ ಇದೆ ಎಂದು ಕರೆ..!
ವಂಚನೆಗೊಳಗಾದ ವ್ಯಕ್ತಿಗೆ ಕರೆಯೊಂದು ಬಂದಿದ್ದು ನಿಮಗೊಂದು ಪಾರ್ಸೆಲ್ ಇದೆ, ಅದನ್ನು ಪಡೆಯಲು ಅವರು ಕೊಟ್ಟ ನಂಬರ್‌ಗೆ ಕರೆ ಮಾಡುವ ಮೊದಲು #* ಈ ಬಟನ್‌ಗಳನ್ನು ಒತ್ತಲು ಹೇಳಿದ್ದರು. ಅದರಂತೆ ಮಾಡಿದಾಗ ಪೂರ್ತಿ ಮೊಬೈಲ್ ಜಾಮ್ ಆಗಿ ವಾಟ್ಸ್ಯಾಪ್ ಹ್ಯಾಕ್ ಮಾಡಿದವರ ನಿಯಂತ್ರಣಕ್ಕೆ ಸಿಕ್ಕಿತ್ತು. ಬೆಳಗ್ಗೆ 11.30ರ ವೇಳೆಗೆ ಇವರ ಮೊಬೈಲ್‌ನಲ್ಲಿದ್ದ ಸ್ನೇಹಿತರ, ಪರಿಚಿತರ ನಂಬರ್‌ಗಳಿಗೆ ಹಣದ ಬೇಡಿಕೆ ಸಲ್ಲಿಸಲಾಗಿತ್ತು.
ವಾಟ್ಸ್ಯಾಪ್ ಕೂಡ ಅಸುರಕ್ಷಿತ!!
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳನ್ನು ನಕಲಿಯಾಗಿ ಸೃಷ್ಟಿಸಿ ಮೆಸೆಂಜರ್ ಮೂಲಕ ಹಣದ ಬೇಡಿಕೆ ಇರಿಸುತ್ತಿರುವುದು ನಿತ್ಯದ ಸಂಗತಿ ಆಗಿದೆ. ಈಗ ಈ ಆತಂಕ ವಾಟ್ಸ್ಯಾಪ್‌ಗೂ ತಟ್ಟಿದೆ. ಕೋಟ್ಯಂತರ ಜನ ವಾಟ್ಸ್ಯಾಪ್ ಬಳಸುತ್ತಿದ್ದು, ಉಳಿದ ಸಾಮಾಜಿಕ ಜಾಲತಾಣಗಳಿಂತ ಇದು ಸುರಕ್ಷಿತ ಎಂಬ ಭಾವನೆ ಇದುವರೆಗೆ ಇತ್ತು. ಆದರೆ ಈಗ ವಾಟ್ಸ್ಯಾಪ್ ಕೂಡ ವಂಚಕರ ಖೆಡ್ಡಾಕ್ಕೆ ಬಿದ್ದಿರುವುದು ಇದರ ಬಳಕೆಯು ಎಷ್ಟು ಸುರಕ್ಷಿತ ಎಂಬ ಭಾವ ಮೂಡಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com






