ಕೃಷ್ಣಾಪುರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ನಿಕಟಪೂರ್ವ ಕಾರ್ಪೊರೇಟರ್ ಲಕ್ಷ್ಮೀ ಶೇಖರ್ ದೇವಾಡಿಗ ಶ್ಲಾಘನೆ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ನಿರಂತರವಾಗಿ ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ಆತ್ಮಶಕ್ತಿ ಸಹಕಾರಿ ಸಂಘದಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಿರುವುದು ಶ್ಲಾಘನೀಯ. ಹೆಣ್ಣುಮಕ್ಕಳು ಕುಟುಂಬ ಸಾಗಿಸಲು ಆರ್ಥಿಕ ಶಕ್ತಿಯಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬೆನ್ನೆಲುಬಾಗಿ ನಿಂತಿದೆ ಎಂದು ನಿಕಟಪೂರ್ವ ಕಾರ್ಪೊರೇಟರ್ ಲಕ್ಷ್ಮೀ ಶೇಖರ್ ದೇವಾಡಿಗ ಹೇಳಿದರು.
https://chat.whatsapp.com/EbVKVnWB6rlHT1mWtsgbch
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೃಷ್ಣಾಪುರ ಶಾಖೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಕೃಷ್ಣಾಫುರ ಯುವಕ ಮಂಡಲ, ಯುವತಿ ಮಂಡಲ, ವನಿತಾ ಸೇವಾ ಸಮಾಜ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೃಷ್ಣಾಪುರ-ಕಾಟಿಪಳ್ಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಕೃಷ್ಣಾಪುರ ಯುವಕ ಮಂಡಲದ ಗೌರವಾಧ್ಯಕ್ಷ ಪ್ರಶಾಂತ್ ಮುಡಾಯಿಕೋಡಿ ಮಾತನಾಡಿ ಮನುಷ್ಯರಾಗಿ ಹುಟ್ಟಿದ ಮೇಲೆ ತಂದೆ-ತಾಯಿ, ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಜೊತೆಗೆ ಸಮಾಜದ ಕಷ್ಟಕ್ಕೂ ಸ್ಪಂದಿಸಬೇಕು ಎಂಬುದು ಹಿರಿಯರ ಸಂದೇಶ. ಅದೇ ರೀತಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಾಮಾಜಿಕ ಕಳಕಳಿಯಿಂದ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.




ಮಂಗಳಾ ಕಿಡ್ನಿ ಫೌಂಡೇಶನ್ನ ಬ್ಯುಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಜೆ.ಸಿ.ನಾಯ್ಕ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಮಂಗಳಾ ಆಸ್ಪತ್ರೆಯು ಉಚಿತ ಶಿಬಿರಗಳನ್ನು ಆಯೋಜನೆ ಮಾಡಿದ್ದು, ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಬಿ.ಪಿ. ಮತ್ತು ಮಧುಮೇಹ ತಪಾಸಣೆ, ಎಲುಬು, ಕೀಲು, ಕಿವಿ, ಮೂಗು, ಗಂಟಲು ತಪಾಸಣೆ, ಜನರಲ್ ವೈದ್ಯಕೀಯ ಸಮಾಲೋಚನೆ ಮೊದಲಾದ ವೈದ್ಯಕೀಯ ಸೇವೆಗಳು ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ‘ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತಿವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಶಿಬಿರ ಏರ್ಪಡಿಸುತ್ತಿದೆ. ಜನರು ಆರೋಗ್ಯವಂತರಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಇದು ಸಂಘದ ೮೭ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಸಂಘವು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರ ನೀಡಿವೆ ಎಂದು ಹೇಳಿರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ರಮಾನಾಥ್ ಸನಿಲ್, ಗೋಪಾಲ್ ಎಂ, ಮಂಗಳಾ ಕಾಲೇಜ್, ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್ ಸಾರ್ವಜನಿಕ ಸಂಪರ್ಕ ಅಧಿಕಾರಿವಿಜೇಶ್ ಕುಮಾರ್, ಕೃಷ್ಣಾಫುರ ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಬೊಳ್ಳಾಜೆ , ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ವನಿತಾ ಸೇವಾ ಸಮಾಜದ ಅಧ್ಯಕ್ಷೆ ರೇಣುಕಾ ತಿಲಕ್‌ರಾಜ್, ಪ್ರಧಾನ ಕಾರ್ಯದರ್ಶಿ ಶ್ವೇತಾ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು ೨೫೦ಕ್ಕೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ, ಉಚಿತ ಕನ್ನಡಕ ವಿತರಣೆ ಹಾಗೂ ನೇತ್ರ ತಪಾಸಣೆ ನಡೆಸಲಾಯಿತು. ಸಂಘದ ಶಾಖಾಧಿಕಾರಿ ಸುಜಾತ ಸ್ವಾಗತಿಸಿ, ಶಾಖಾಧಿಕಾರಿ ಭಾಗ್ಯಶ್ರೀ ವಂದಿಸಿದರು. ಹಿರಿಯ ಶಾಖಾಧಿಕಾರಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

