ದೇಶದ ಜಿಡಿಪಿ ಪಾಲು ಮೂರು ಪಟ್ಟು ಹೆಚ್ಚಳ, 50 ಕೋಟಿ ಸಕ್ರಿಯ ಸದಸ್ಯರ ಸಂಯೋಜನೆ
ಸಹಕಾರಿ ವಲಯದ ಪುನರುಜ್ಜೀವನದ ಗುರಿ
ಸಹಕಾರಕ್ಕೆ ಭವಿಷ್ಯವಿಲ್ಲ ಎಂಬ ಕಾಲವೊಂದಿತ್ತು; ಆದರೆ ಈಗ ಸಹಕಾರವೇ ಭವಿಷ್ಯ ಎಂಬಂತಾಗಿದೆ: ಅಮಿತ್ ಷಾ ಮಾರ್ಮಿಕ ನುಡಿ
ನವದೆಹಲಿ: ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಹಕಾರಿ ನೀತಿ -2025ನ್ನು ಗುರುವಾರ ಸಂಜೆ ದೆಹಲಿಯ ಉರ್ಜಾ ಭವನದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅನಾವರಣ ಮಾಡಿದ್ದು ಸಹಕಾರಿ ವಲಯದ ಪುನರುಜ್ಜೀವನದ ಗುರಿ ಹೊಂದಲಾಗಿದೆ. 2034ರ ವೇಳೆಗೆ ದೇಶದ ಜಿಡಿಪಿಗೆ ಸಹಕಾರ ವಲಯದ ಪಾಲನ್ನು ಮೂರು ಪಟ್ಟು ಹೆಚ್ಚಿಸುವ ಗುರಿ ಹೊಂದಿರುವ ದೂರದೃಷ್ಟಿಯ ಸಹಕಾರ ನೀತಿಯನ್ನು ಅನಾವರಣ ಮಾಡಿದ ಬಳಿಕ ಮಾತನಾಡಿದ ಸಚಿವರು ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
2025ರ ವೇಳೆಗೆ ದೇಶದ ಜಿಡಿಪಿಗೆ ಸಹಕಾರ ವಲಯದ ಕೊಡುಗೆಯನ್ನು ಮೂರು ಪಟ್ಟು ಹೆಚ್ಚಿಸುವುದು ಮತ್ತು ೫೦ ಕೋಟಿ ಸಕ್ರಿಯ ಸದಸ್ಯರನ್ನು ಸಹಕಾರ ಕ್ಷೇತ್ರದಲ್ಲಿ ಸಂಯೋಜಿಸುವ ಎಂಬ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ. ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ಒದಗಿಸಿಕೊಡುವ ವಿಷಯದಲ್ಲೂ ಈ ನೀತಿ ಪೂರಕವಾಗಲಿದೆ. ಸಹಕಾರ ನೀತಿಯ ಕರಡು ರಚನೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು, ವಿವಿಧ ರಾಜ್ಯಗಳ ಸಚಿವರು, ಸಹಕಾರ ಕಾರ್ಯದರ್ಶಿ ಆಶಿಶ್ ಕುಮಾರ್ ಭೂತಾನಿ ಮೊದಲಾದವರ ಉಪಸ್ಥಿತಿಯಲ್ಲಿ ಸಹಕಾರ ನೀತಿಯನ್ನು ಬಿಡುಗಡೆ ಮಾಡಿದ ಅಮಿತ್ ಷಾ, ಈ ನೀತಿಯು ಐತಿಹಾಸಿಕ, ದೂರದೃಷ್ಟಿಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ “ಸಹಕಾರ ಸೇ ಸಮೃದ್ಧಿ” (ಸಹಕಾರದ ಮೂಲಕ ಸಮೃದ್ಧಿ) ಎಂಬ ದೃಷ್ಟಿಕೋನದಲ್ಲಿ ರೂಪಿತವಾಗಿದೆ ಎಂದು ಹೇಳಿದರು.



750ಕ್ಕೂ ಹೆಚ್ಚು ಸಲಹೆಗಳು, 17 ಸಭೆಗಳು ಮತ್ತು ಆರ್‌ಬಿಐ ಮತ್ತು ನಬಾರ್ಡ್‌ನಿಂದ ಬಂದ ಅಭಿಪ್ರಾಯ, ಸಲಹೆಗಳನ್ನು ಒಳಗೊಂಡ ಸಮಗ್ರ ಮಾಹಿತಿ ಹಾಗೂ ಹಲವು ಸುತ್ತಿನ ಸಮಾಲೋಚನೆಗಳ ನಂತರ ಸಹಕಾರ ನೀತಿಯನ್ನು ರಚಿಸಲಾಗಿದೆ. ಈ ಹಿಂದೆ 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಮೊದಲ ಸಹಕಾರ ನೀತಿಯನ್ನು ಪರಿಚಯಿಸಲಾಗಿತ್ತು. ಈಗ 23 ವರ್ಷಗಳ ನಂತರ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರದ ಸುಧಾರಣೆಗೆ ಎರಡನೇ ನೀಲಿನಕ್ಷೆಯನ್ನು ರೂಪಿಸಲಾಗಿದೆ.
ದೇಶದಲ್ಲಿ ಸಹಕಾರಿ ಸಂಘಗಳನ್ನು ಶೇ.30ರಷ್ಟು ಹೆಚ್ಚಿಸುವುದು, ಪ್ರತಿ ಗ್ರಾಮದಲ್ಲೂ ಕನಿಷ್ಠ ಒಂದು ಸಹಕಾರಿ ಸಂಘದ ಸ್ಥಾಪನೆ ಮತ್ತು ಪ್ರತಿ ತಹಸಿಲ್‌ಗೆ ಐದು ಮಾದರಿ ಸಹಕಾರಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ಸಹಕಾರಿ ನೀತಿಯ ಪ್ರಮುಖ ಗುರಿಗಳಾಗಿವೆ. ಪ್ರವಾಸೋದ್ಯಮ, ಟ್ಯಾಕ್ಸಿ ಸೇವೆಗಳು, ಹಸಿರು ಇಂಧನ ಮತ್ತು ವಿಮೆಯಂತಹ ವಲಯಗಳನ್ನು ಒಳಗೊಂಡಂತೆ ಸಹಕಾರಿ ಸಂಸ್ಥೆಗಳ ವ್ಯಾಪ್ತಿಯು ಸಾಂಪ್ರದಾಯಿಕ ಕ್ಷೇತ್ರಗಳನ್ನು ದಾಟಿ ವಿಸ್ತಾರಗೊಳ್ಳುವ ಗುರಿ ಇಡಲಾಗಿದೆ. ಇದರಿಂದ ಹೊಸ ಉದ್ಯೋಗ ಮಾರ್ಗಗಳು ಮತ್ತು ಅವುಗಳಿಂದ ಹೊಸದಾದ ಆರ್ಥಿಕ ಸಾಮರ್ಥ್ಯಗಳನ್ನೂ ತೆರೆದಿಡಲಿದೆ. ಸಹಕಾರಿ ಸಂಘಗಳು ಹೆಚ್ಚು ವೃತ್ತಿಪರ, ಸಕ್ರಿಯ ತಂತ್ರಜ್ಞಾನ ಹೊಂದಿದ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಸಹಕಾರಿ ನೀತಿಯ ಪ್ರಮುಖ ಧ್ಯೇಯಗಳಲ್ಲಿ ಒಂದು. ಕ್ಲಸ್ಟರ್-ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ ಮತ್ತು ಪಾರದರ್ಶಕ ಹಣಕಾಸು ನೀತಿಗಳಿಗೆ ಒತ್ತು ನೀಡುವುದರಿಂದ ಈ ವಲಯವನ್ನು ಹೆಚ್ಚು ಬಲಿಷ್ಠ ಮತ್ತು ಭವಿಷ್ಯದ ಬದಲಾವಣೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿದ್ಧವಾಗಿಸುವ ವಿಶಾಲವಾದ ಗುರಿಯನ್ನು ಈ ನೀತಿಯಲ್ಲಿ ಪ್ರಚುರಪಡಿಸಲಾಗಿದೆ.




ಹೊಸ ಸಹಕಾರಿ ನೀತಿಗೆ ಪೂರಕವಾಗಿ 83 ಯೋಜನೆಗಳನ್ನು ನಿಗದಿಪಡಿಸಲಾಗಿದ್ದು, ಅವುಗಳಲ್ಲಿ 58ನ್ನು ಪೂರ್ಣಗೊಳಿಸಲಾಗಿದೆ. ಈ ಪೈಕಿ 3 ಯೋಜನೆಗಳು ಸಂಪೂರ್ಣವಾಗಿ ಕಾರ್ಯಗತಗೊಂಡಿವೆ. ಗಮನಾರ್ಹ ಮೈಲಿಗಲ್ಲುಗಳಲ್ಲಿ 45,000 ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಗಣಕೀಕರಣ ಪ್ರಕ್ರಿಯೆ ಮತ್ತು ಜನೌಷಧ ಕೇಂದ್ರಗಳು, ಎಲ್‌ಪಿಜಿ ವಿತರಣೆ, ಪೆಟ್ರೋಲ್ ಪಂಪ್‌ಗಳು ಮತ್ತು ಪಿಎಂ ಸೂರ್ಯಘರ್ ಯೋಜನೆಯಂತಹ 25 ಹೊಸ ಕ್ಷೇತ್ರಗಳಿಗೆ ಪ್ಯಾಕ್ಸ್‌ಗಳ ವಿಸ್ತರಣೆ ಸೇರಿವೆ. ಸಹಕಾರ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಭಾಗವಾಗಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಸ್ಥಾಪನೆಯಾಗಿದೆ. ಈ ವರ್ಷದ ಕೊನೆಯಲ್ಲಿ ‘ಸಹಕಾರ್ ಟ್ಯಾಕ್ಸಿ’ ಪ್ರಾರಂಭವಾಗಲಿದೆ.
“ಸಹಕಾರಕ್ಕೆ ಭವಿಷ್ಯವಿಲ್ಲ ಎಂದು ಜನರು ಹೇಳುತ್ತಿದ್ದ ಕಾಲವೊಂದಿತ್ತು, ಆದರೆ ಇಂದು ಭವಿಷ್ಯವು ಸಹಕಾರಕ್ಕೆ ಸೇರಿದೆ” ಎಂದು ಅಮಿತ್ ಷಾ ಮಾರ್ಮಿಕವಾಗಿ ಘೊಷಣೆ ಮಾಡಿದರು. ಇದಕ್ಕೆ ಸಂಬಂಧಿಸಿ ಸರ್ಕಾರವು ಸಹಕಾರಿ ವಲಯವನ್ನು ದೇಶದ ಅಭಿವೃದ್ಧಿಯ ಇಂಜಿನ್ ಆಗಿ ಮಾಡಲು ಉದ್ದೇಶಿಸಿದೆ. ಇದರಲ್ಲಿ ಸಹಕಾರಿ ಬ್ಯಾಂಕುಗಳಿಗೆ ಕಾರ್ಯದಲ್ಲಿ ಸಮಾನತೆ ಮತ್ತು ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ ಮೂಲಕ ಅಂತಾರಾಷ್ಟ್ರೀಯ ವಿಸ್ತರಣೆಗಳನ್ನೂ ಅಳವಡಿಸಲಾಗಿದೆ. ಹೊಸ ಸಹಕಾರಿ ನೀತಿಯು ಜಿಡಿಪಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ವೈಯಕ್ತಿಕ ಸದಸ್ಯರಿಗೆ ಘನತೆ ಮತ್ತು ಸ್ವಾಭಿಮಾನವನ್ನು ಕೊಡಿಸುವ ವಿಷಯದಲ್ಲೂ ಪ್ರಾಮುಖ್ಯತೆ ನೀಡುತ್ತದೆ ಎಂದು ಅಮಿತ್ ಷಾ ತಿಳಿಸಿದ್ದು, ಭಾರತದ ಸಹಕಾರಿ ವಲಯವನ್ನು “ಆತ್ಮನಿರ್ಭರ ಭಾರತ್” ನ ಅಗತ್ಯ ಸ್ತಂಭವಾಗಿ ಇದು ರೂಪುಗೊಳಿಸಲಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

