ಬೆಂಗಳೂರು, ಬೀದರ್, ಬೆಳಗಾವಿಯಂತೆ ಸಹಕಾರ ಕ್ಷೇತ್ರದಲ್ಲಿ ಕಲಬುರಗಿಯೂ ಪ್ರಗತಿ ಸಾಧಿಸಲಿ: ನಂಜನ ಗೌಡ ಅಭಿಪ್ರಾಯ
ಸೌಹಾರ್ದ ಸಹಕಾರಿ ಕಾಯಿದೆಯ ರಜತ ಮಹೋತ್ಸವ ನಿಮಿತ್ತ ಸಂವಾದ ಕಾರ್ಯಕ್ರಮ
ಕಲಬುರಗಿ: ನೂರು ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರ ಇಂದು ಬಹಳ ವಿಶಾಲವಾಗಿ ಬೆಳೆದಿದೆ. ನಮ್ಮ ದೇಶಕ್ಕೆ ಸಹಕಾರ ಕ್ಷೇತ್ರದ ಪರಿಕಲ್ಪನೆಯನ್ನು ನೀಡಿದ್ದು ಕರ್ನಾಟಕ ರಾಜ್ಯ. ಬೆಳಗಾವಿ, ಬೆಂಗಳೂರು ಹಾಗೂ ಬೀದರ್ ಜಿಲ್ಲೆಗಳಿಗೆ ಹೋಲಿಸಿದರೆ, ಸಹಕಾರ ಕ್ಷೇತ್ರದಲ್ಲಿ ಕಲಬುರಗಿ ಜಿಲ್ಲೆ ಹಿಂದುಳಿದಿದೆ. ಸಹಕಾರ ಕ್ಷೇತ್ರದಲ್ಲಿ ಕಲಬುರಗಿ ಜಿಲ್ಲೆಯೂ ಪ್ರಗತಿ ಸಾಧಿಸಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಅಭಿಪ್ರಾಯಪಟ್ಟರು.
https://chat.whatsapp.com/EbVKVnWB6rlHT1mWtsgbch
ಸೌಹಾರ್ದ ಸಹಕಾರಿ ಕಾಯಿದೆಯ ರಜತ ಮಹೋತ್ಸವದ ಪ್ರಯುಕ್ತ ಶುಕ್ರವಾರ ಕಲಬುರಗಿಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಸಹಯೋಗದೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರ ಬಿಟ್ಟರೆ, ಅತಿ ಹೆಚ್ಚು ಜನರು ಭಾಗವಹಿಸುವ ಅತಿದೊಡ್ಡ ವಲಯ ಎಂದರೆ ಸಹಕಾರಿ ಕ್ಷೇತ್ರ. ಸಮಾಜದ ಕಟ್ಟಕಡೆಯ ವ್ಯಕ್ತಿ, ಮಹಿಳೆಗೆ ಸ್ವಾವಲಂಬಿಯಾಗಿ ಬದುಕುವ ಹಕ್ಕನ್ನು ಸಹಕಾರಿ ಸಂಸ್ಥೆಗಳು ನೀಡುತ್ತಿವೆ. ಅನೇಕ ಮಹಿಳೆಯರು ಸಹಕಾರಿ ಸಂಘಗಳ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಂಡಿದ್ದಾರೆ. ಈ ಎಲ್ಲ ಲಾಭ ಪಡೆಯಲು ಕಲಬುರಗಿ ವಿಭಾಗದ ಹೆಚ್ಚಿನ ಜನರಿಗೆ ಸೌಹಾರ್ದ ಸಹಕಾರಿ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕೇಂದ್ರ ಸರಕಾರವು ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಗಳನ್ನು ಘೋಷಿಸಿದ್ದು ಅನೇಕ ಯೋಜನೆಗಳನ್ನು ರೂಪಿಸಿ ಸಹಕಾರ ಕ್ಷೇತ್ರವನ್ನು ಬಲಪಡಿಸುತ್ತಿದೆ ಎಂದರು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸಹಕಾರ ಕ್ಷೇತ್ರವೆಂದರೆ ನಮ್ಮದು ಎನ್ನುವ ಭಾವನೆ ಬರುತ್ತದೆ. ಎಲ್ಲರಿಗೂ ಮಾದರಿಯಾಗಿರುವ ಸಹಕಾರಿ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳ ಆರ್ಥಿಕ ಸುಧಾರಣೆ ಕಾಣಲು ಪ್ರಮುಖ ಪಾತ್ರ ವಹಿಸಿವೆ. ಅಲ್ಲದೆ ಬ್ಯಾಂಕಿಗೆ ಕಾಲಿಡದವರೂ ಕೂಡ ಬ್ಯಾಂಕ್ ವಹಿವಾಟು ಮಾಡುವ ಮಟ್ಟಿಗೆ ಅಕ್ಷರಸ್ಥರನ್ನಾಗಿ ಮಾಡಿದೆ. ಅದರಿಂದ ಸಹಕಾರಿ ಹಾಗೂ ಸರಕಾರ ಎರಡು ಜಂಟಿಯಾಗಿ ಕೆಲಸ ಮಾಡಿದರೆ ರಾಜ್ಯದ ಪ್ರಗತಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ರಾಜ್ಯದ ಸಹಕಾರಿ ವಲಯದಲ್ಲಿ ಬಹಳಷ್ಟು ಪರಿಣಾಮಕಾರಿ ಬದಲಾವಣೆ ಕಂಡುಬಂದಿದ್ದು, ಇದರಿಂದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಯೋಗಕ್ಷೇಮಕ್ಕಾಗಿ, ಭವಿಷ್ಯದ ಜೀವನಕ್ಕಾಗಿ ಪತ್ರಕರ್ತರ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆ ಮಾಡುವ ಚಿಂತನೆ ಇದೆ. ಇದಕ್ಕೆ ಎಲ್ಲ ಸಹಕಾರಿ ಸಂಘ ಸಂಸ್ಥೆಗಳ ಅಧಿಕಾರಿಗಳ ಸಹಕಾರ ಅಗತ್ಯ ಎಂದು ಹೇಳಿದರು.


ಜನರಲ್ಲಿ ಜಾಗೃತಿ ಅತ್ಯಗತ್ಯ
ಸ್ವಯಂ ಉದ್ಯೋಗ ಮಾಡಲು ಅಭಿರುಚಿ ಇರುವವರಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ಸಾಲ ಕೊಟ್ಟು ಸ್ವಾವಲಂಬಿಯಾಗಲು ಸಹಾಯ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಸ್ವಯಂ ಉದ್ಯೋಗ ಮೂಲಕ ಆತ್ಮನಿರ್ಭರ ಭಾರತ ಕಲ್ಪನೆಯನ್ನು ಸಹಕಾರ ಮಾಡುವ ಉದ್ದೇಶ ಹೊಂದಲಾಗಿದ್ದು, ಇದಕ್ಕೆ ನಮ್ಮ ಸಹಕಾರಿ ಸಂಘಗಳು ಮುಂದಾಗಿವೆ. ಕಲಬುರಗಿ ವಿಭಾಗದಲ್ಲಿ ಸಹಕಾರಿ ಪ್ರಗತಿ ಬಹಳಷ್ಟು ಕುಂಠಿತವಾಗಿದೆ. ಜನರಲ್ಲಿ ಅರಿವು ಮೂಡಿಸುವ ಮೂಲಕ ಈ ಭಾಗದಲ್ಲೂ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೂಡ ಹೇಳಿದರು.
ಆಗಸ್ಟ್ 16ರಿಂದ ಪ್ರತಿ ಜಿಲ್ಲೆಯಲ್ಲಿ ಸಂಪರ್ಕ ಸಭೆ
ರಜತ ಮಹೋತ್ಸವ ಆಚರಿಸುತ್ತಿರುವ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ಬಗ್ಗೆ ಅರಿವು ಮೂಡಿಸಲು ಆಗಸ್ಟ್ 16ರಿಂದ ಪ್ರತಿಯೊಂದು ಜಿಲ್ಲೆಯಲ್ಲೂ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶರಣುಗೌಡ ಪಾಟೀಲ್ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯು ಸ್ವಉದ್ಯೋಗ ಮಾಡುವ ಎಲ್ಲ ಸದಸ್ಯರಿಗೂ ಸಾಲ ನೀಡುತ್ತಿದೆ. 72 ಲಕ್ಷ ಸದಸ್ಯರನ್ನು ಹೊಂದಿರುವ ಸಹಕಾರಿ ಸಂಸ್ಥೆಯಲ್ಲಿ 42,000 ಕೋಟಿ ರೂ. ಠೇವಣಿ ಹೊಂದಿದೆ. 39,000 ಕೋಟಿ ರೂ. ಸಾಲ ನೀಡಿದೆ. ಕೇಂದ್ರ ಸರಕಾರ ಪ್ರಾರಂಭಿಸಿದ ಸಹಕಾರಿ ಸಚಿವಾಲಯದ ಸಹಕಾರಿ ಕ್ಷೇತ್ರವು ಪರಿಣಾಮಕಾರಿ ಸಾಧನೆ ಮಾಡಿದೆ ಎಂದು ಹೇಳಿದರು.


ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತದ ಸಹಕಾದಿಂದ ಪ್ರಾರಂಭಗೊಂಡ ಹತ್ತು ಕಾಮನ್ ಸರ್ವೀಸ್ ಸೆಂಟರ್‌ಗಳ ಕೀಲಿಕೈ ಸಾಂಕೇತಿಕವಾಗಿ ವಿತರಿಸಲಾಯಿತು. ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕಿ ಶೈಲಜಾ ತಪಲಿ, ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕಲೆ, ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ್ ರೇವಂತಗಾಂವ್, ಚಂದ್ರಶೇಖರ ಪರಸರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.


ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

