ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿಕೆ
ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕಿನ ಸ್ವರ್ಣ ಸಂಭ್ರಮದಲ್ಲಿ ಬಿಡುಗಡೆ ಮಾಡಿದ ಯೋಜನೆಗಳು ಸಮಾಜಮುಖಿಯಾಗಿದೆ. ಇದರಿಂದ ಸಾಕಷ್ಟು ಕುಶಲಕರ್ಮಿ ಸಮಾದಾಯದ ಜನರಿಗೆ ಪ್ರಯೋಜನವಾಗುತ್ತದೆ. ಈ ಸ್ವರ್ಣ ಜಯಂತಿ ವರ್ಷದ ಸ್ವರ್ಣ ಸಂಭ್ರಮ ಕಾರ್ಯಕ್ರಮಗಳ ಅಂಗವಾಗಿ ರೂಪಿಸಿರುವ ಹಲವಾರು ಯೋಜನೆಗಳು ಯಶಸ್ವಿಯಾಗಲಿ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಶುಭ ಹಾರೈಸಿದರು.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾನುವಾರ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ 49ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸ್ವರ್ಣ ಜಯಂತಿ ವರ್ಷದ “ಸ್ವರ್ಣ ಸಂಭ್ರಮ” ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
https://chat.whatsapp.com/EbVKVnWB6rlHT1mWtsgbch
ವಿಶ್ವಕರ್ಮ ಸಹಕಾರ ಬ್ಯಾಂಕ್ ಹಮ್ಮಿಕೊಂಡಿರುವ ಒಂದು ವರ್ಷದ ಕಾರ್ಯಕ್ರಮಗಳು ಯಶಸ್ವಿಯಾಗಿ ಬ್ಯಾಂಕ್‌ನ ವಹಿವಾಟು ದ್ವಿಗುಣಗೊಳ್ಳಲಿ. ಸಾಲ ತೆಗೆದುಕೊಂಡವರು ಅವರು ಯಾವ ಕಾರ್ಯಕ್ಕೆ ತೆಗೆದುಕೊಂಡಿರುತ್ತಾರೋ ಅದೇ ಕಾರ್ಯಕ್ಕೆ ವಿನಿಯೋಗಿಸಿದಾಗ ಅದರ ಮರು ಪಾವತಿ ಸುಲಭವಾಗುತ್ತದೆ. ನಾವು ಕೊಡುವ ಸಾಲವನ್ನು ಸದುಪಯೋಗಿಸಿಕೊಂಡು ಅವರು ಉನ್ನತಿ ಸಾಧಿಸಿದರೆ ಸಾಲ ತೆಗೆದುಕೊಂಡವರು ನಮ್ಮನ್ನು ಯಾವತ್ತೂ ಮರೆಯುವುದಿಲ್ಲ. ಸ್ತ್ರೀಯರಿಗೆ ಕೊಟ್ಟ ಸಾಲ ನೂರಕ್ಕೆ ನೂರು ಮರುಪಾವತಿಯಾಗುತ್ತದೆ. ಶುದ್ಧ ಮನಸ್ಸಿನಿಂದ ಸಾಲ ಕೊಡುವಾಗ ಅವರ ಅಭಿವೃದ್ಧಿಯಾಗಲಿ ಎಂಬ ಆಶಯದೊಂದಿಗೆ ಸಾಲ ಕೊಟ್ಟಾಗ ಅವರ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ, ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರಾವಳಿ ಭಾಗ ಸಾಕಷ್ಟು ಕೊಡುಗೆ ನೀಡಿದೆ. ಇಲ್ಲಿನ ತಾಯಂದಿರಲ್ಲಿ ಬಹಳ ಹಿಂದಿನ ಕಾಲದಲ್ಲಿಯೇ ಪರಸ್ಪರ ಸಹಕಾರ ಮನೋಭಾವದ ಉಳಿತಾಯ ಮನೋಭಾವಗಳು ಇದ್ದ ಕಾರಣ ಸಹಕಾರ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿವೆ. ರಾಷ್ಟ್ರೀಕೃತ ಬ್ಯಾಂಕ್ ಒಳಗಡೆ ಹೋಗಲು ಧೈರ್ಯ ಸಾಲದ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್‌ಗಳು ಸಾಮಾನ್ಯ ಜನರನ್ನು ಕೈಬೀಸಿ ಕರೆದವು. ಇವತ್ತು ಕೇಂದ್ರ, ರಾಜ್ಯ ಸರ್ಕಾರಗಳು ನೀಡುವ ಹಲವಾರು ಯೋಜನೆಗಳನ್ನು ಸಹಕಾರ ಬ್ಯಾಂಕ್‌ಗಳು ಜನರಿಗೆ ನೀಡುತ್ತಿವೆ. ಇದರಿಂದ ಜನಸಾಮಾನ್ಯರು ಸಹಕಾರಿ ಕ್ಷೇತ್ರದತ್ತ ಹೆಚ್ಚು ಮುಖ ಮಾಡತೊಡಗಿದ್ದಾರೆ. ಬ್ಯಾಂಕಿನಲ್ಲಿ ವ್ಯವಹಾರ ಮಾಡುವ ವ್ಯಕ್ತಿ ನಾನು ಬ್ಯಾಂಕಿನಲ್ಲಿ ಇಡುವ ಹಣ ಕೂಡಲೇ ನನಗೆ ಹಿಂತಿರುಗಿ ಸಿಗುತ್ತದೆಯೋ, ಹಣಕ್ಕೆ ಗ್ಯಾರಂಟಿ ಇದೆಯೋ ಮತ್ತು ಇಡುವ ಹಣ ಲಾಭ ಏನು ಎಂದು ಯೋಚಿಸಿ ಹಣ ಹೂಡುತ್ತಾನೆ. ಇದು ಒಂದು ಬ್ಯಾಂಕಿಂಗ್ ವ್ಯವಸ್ಥೆಯ ಉನ್ನತಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಬ್ಯಾಂಕಿನ ಸ್ಥಾಪಕ ಸದಸ್ಯರಾಗಿದ್ದ ಮುನಿಯಾಲು ದಾಮೋದರ ಆಚಾರ್ಯ, ಪಯ್ಯಾಲು ಭಾಸ್ಕರ ಆಚಾರ್ಯ, ನಾಗೇಶ್ ಶೇಟ್, ಶಿವರಾಮ ಆಚಾರ್ಯ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ಶ್ರೀ ಲಕ್ಷ್ಮೀ ಜ್ಯುವೆಲ್ಲರ್‌ನ ಮಾಲೀಕರಾದ ಬಿ.ಪ್ರವೀಣ್ ಶೇಟ್ ನಾಗ್ವೇಕರ್ ಶುಭ ಹಾರೈಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮುನಿಯಾಲು ದಾಮೋದರ ಆಚಾರ್ಯ, ಮುನಿಯಾಲು ಸಂಜೀವಿನಿ ಫಾರ್ಮ್ಸ್‌ನ ಸವಿತಾ ರಾಮಕೃಷ್ಣ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.
ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಶ್ರೀ ಭರತ್ ನಿಡ್ಪಳ್ಳಿ ಅವರು ವಂದಿಸಿದರು. ಕುಮಾರಿ ವಾರುಣಿ ನಾಗರಾಜ್ ಅವರು ಕಾರ್ಯಕ್ರಮ ನಿರೂಪಿಸಿದರು.
ನಾಲ್ಕು ಯೋಜನೆಗಳು ಅನಾವರಣ
ಪ್ರಾಸ್ತಾವಿಕ ಮಾತನಾಡಿದ ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಸ್ವರ್ಣ ಜಯಂತಿ ಕಾರ್ಯಕ್ರಮಗಳ ಅಂಗವಾಗಿ ರೂಪಿಸಲಾಗಿರುವ ನಾಲ್ಕು ಯೋಜನೆಗಳನ್ನು ಘೋಷಣೆ ಮಾಡಿದರು.
ನಮ್ಮ ಬ್ಯಾಂಕ್ ಸಾಂತ್ವನ ಯೋಜನೆ
ಬ್ಯಾಂಕ್ ಸದಸ್ಯರ ಮರಣ ಸಾಂತ್ವನ ಯೋಜನೆ. ಬ್ಯಾಂಕಿನ ಯಾವುದೇ ಸದಸ್ಯರು ಮರಣ ಹೊಂದಿದಲ್ಲಿ ಅಂತಹ ಸದಸ್ಯರ ಕುಟುಂಬದ ವಾರಸುದಾರರಿಗೆ 10,000 ರೂ. ಸಾಂತ್ವನ ಪರಿಹಾರ ನೀಡಲಾಗುತ್ತದೆ. ನಮ್ಮ ಬ್ಯಾಂಕ್ ಅಪಘಾತ ಸಾಂತ್ವನ ವಿಮಾ ಯೋಜನೆಯಲ್ಲಿ 2 ಲಕ್ಷ ರೂ.ವರೆಗಿನ ಅಪಘಾತ ವಿಮೆಯನ್ನು ಬ್ಯಾಂಕ್ ಅಪಘಾತ ಸಾಂತ್ವನ ವಿಮಾ ಯೋಜನೆಯಡಿ ಬ್ಯಾಂಕಿನ ಎಲ್ಲಾ ಸದಸ್ಯರಿಗೆ ಸಂಪೂರ್ಣ ಉಚಿತವಾಗಿ ನೀಡಿ ಜಾರಿಗೊಳಿಸಲಾಗುತ್ತಿದೆ.
ವಿಶ್ವಕರ್ಮ ಚೇತನಾ ಯೋಜನೆ
ನಮ್ಮ ಬ್ಯಾಂಕ್ ಚಿನ್ನದ ಕೆಲಸಗಾರರಂತಹ ಕುಶಲಕರ್ಮಿ ಸಮುದಾಯದ ಸದಸ್ಯರಿಂದ ಕೂಡಿದ ಬ್ಯಾಂಕ್ ಆಗಿರುವುದರಿಂದ ಕುಶಲಕರ್ಮಿ ಸಮುದಾಯದ ಆರ್ಥಿಕ ಸಬಲೀಕರಣದ ಮಹತ್ವದ ಉದ್ದೇಶವಿಟ್ಟುಕೊಂಡು ವಿಶ್ವಕರ್ಮ ಚೇತನಾ ಯೋಜನೆ ಜಾರಿಗೊಳಿಸುತ್ತಿದೆ. ಕುಶಲಕರ್ಮಿ ಸದಸ್ಯರಿಗೆ ಈ ಯೋಜನೆಯಡಿಯಲ್ಲಿ ಶೇಕಡಾ 12.5 ಬಡ್ಡಿದರದಲ್ಲಿ 2 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಭದ್ರತೆಯ ಮೇಲೆ ಮೀರೆಳೆತ ಸಾಲ (Over Draft) ಸೌಲಭ್ಯ ಒದಗಿಸಲಾಗುತ್ತದೆ. ಚಿನ್ನದ ಕೆಲಸ, ಬೆಳ್ಳಿಯ ಕೆಲಸ, ಕಂಚಿನ ಕೆಲಸ, ಕಬ್ಬಿಣದ ಕೆಲಸ, ಮರದ ಕೆಲಸ, ಶಿಲ್ಪದ ಕೆಲಸ, ಕಸೂತಿ ಕೆಲಸ, ಗೊಂಬೆ ತಯಾರಿಕೆ ಹಾಗೂ ಟೈಲರಿಂಗ್ ಕೆಲಸ ನಿರ್ವಹಿಸುವ ಕುಶಲಕರ್ಮಿ ಸದಸ್ಯರಿಗೆ ಈ ಸಾಲ ಸೌಲಭ್ಯ ದೊರಕಲಿದೆ.
ಸ್ವಚ್ಛ ಭಾರತ್ Awake Kudla
ನಮ್ಮ ಬ್ಯಾಂಕ್’ನ ಎಲ್ಲಾ ಐದು ಶಾಖೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ 50 ವಾರ ಒಟ್ಟು 50 ಸ್ವಚ್ಛ ಭಾರತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವುದು. ಸ್ವಚ್ಛ ಭಾರತ್ ಕಾರ್ಯವನ್ನು ಬ್ಯಾಂಕಿನ ಸಿಬ್ಬಂದಿಗಳು, ಸದಸ್ಯರು, ಗ್ರಾಹಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯರೂಪಕ್ಕೆ ತರಲಾಗುವುದು. ಸ್ವಚ್ಛ ಭಾರತ್ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಯ ಶ್ರಮದಾನ, ಒಣಕಸ-ಹಸಿಕಸ ನಿರ್ವಹಣೆಯ ಜಾಗೃತಿ, ಪರಿಸರ ಜಾಗೃತಿ, ವೃಕ್ಷಾರೋಪಣ, ನಗರ ಅರಣ್ಯ, ನಗರ ಸೌಂದರ್ಯ, ನೀರಿನ ಸದ್ಬಳಕೆ, ಸಾಮುದಾಯಿಕ ಜೀವನ ಕ್ರಮಗಳು ಇತ್ಯಾದಿ ಸಾಮಾಜಿಕ ಕಾರ್ಯಗಳನ್ನು ಜೋಡಿಸಲಾಗುವುದು.
ಸ್ವರ್ಣ ಸಂಭ್ರಮ ಸುಭದ್ರಾ ಯೋಜನೆಗಳು
ಸ್ವರ್ಣ ಸಂಭ್ರಮ ಸುಭದ್ರಾ- ನಗದು ಪ್ರಮಾಣಪತ್ರ, ಸ್ವರ್ಣ ಸಂಭ್ರಮ ಸುಭದ್ರಾ -ಫ್ಲೆಕ್ಸಿ ಯೂನಿಟ್ ಠೇವಣಿ ಯೋಜನೆ, ಸ್ವರ್ಣ ಸಂಭ್ರಮ ಸುಭದ್ರಾ – ಉಳಿತಾಯ ಖಾತೆ, ಸ್ವರ್ಣ ಸಂಭ್ರಮ ಸುಭದ್ರಾ – ಪ್ರಸ್ತುತ ಠೇವಣಿ ಖಾತೆ.