ಸಂಸ್ಥೆಯಿಂದ ಮಹಿಳಾ ಸಬಲೀಕರಣ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರಶಂಸೆ
ಗೋಲ್ಡ್‌ಫಿಂಚ್ ಮೈದಾನದಲ್ಲಿ ನವೋದಯ ಗುಂಪುಗಳ ರಜತ ಸಂಭ್ರಮ ಅದ್ದೂರಿ ಕಾರ್ಯಕ್ರಮ
ಮಂಗಳೂರು: ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮ ಭಾರತದಲ್ಲಿಯೇ ಐತಿಹಾಸಿಕ ಕಾರ್ಯಕ್ರಮ. ಸುಮಾರು ಒಂದೂವರೆ ಲಕ್ಷ ಮಹಿಳೆಯರನ್ನು ಒಂದೇ ಬಣ್ಣದ ಸಮವಸ್ತ್ರದಲ್ಲಿ ಒಂದೆಡೆ ಸೇರಿಸುವ ಈ ಕಾರ್ಯಕ್ರಮ ಅಭೂತಪೂರ್ವವಾದುದು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರಶಂಶಿಸಿದರು.
ಕೂಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಶನಿವಾರ ನಡೆದ ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಸಂಸ್ಥೆಯ ರಜತ ಸಂಭ್ರಮದ ವಿಶಿಷ್ಟ ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ದೇಶದ ಆರ್ಥಿಕ ಬಲವರ್ಧನೆ ಮತ್ತು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಸ್ವ ಸಹಾಯ ಗುಂಪುಗಳು ಮಹತ್ತರವಾದ ಪಾತ್ರ ವಹಿಸಿವೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ದೃಢತೆ ಕಂಡುಬಂದಿದ್ದರೆ ಅದರಲ್ಲಿ ಸ್ವಸಹಾಯ ಗುಂಪುಗಳ ಕೊಡುಗೆಯೂ ಇದೆ. ನವೋದಯ ಸ್ವಸಹಾಯ ಗುಂಪುಗಳ ಚಟುವಟಿಕೆಗಳಿಂದ ಮಹಿಳೆಯರು ಸಂಘಟಿತರಾಗುವುದರೊಂದಿಗೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕುಟುಂಬ ಸುಧಾರಣೆಯಲ್ಲೂ ಅವರ ಶ್ರಮ ಗಮನಾರ್ಹವಾದುದು ಎಂದು ಶ್ಲಾಘಿಸಿದರು. ಗ್ರಾಮೀಣ ಭಾಗದಲ್ಲಿ ಮಹಿಳೆಗೆ ಶಕ್ತಿ ನೀಡಿದ್ದೇ ಸ್ವಸಹಾಯ ಸಂಘಗಳು. ಅನೇಕ ಉತ್ಪನ್ನಗಳನ್ನು ಅವರು ತಯಾರಿಸಿ ಮಾದರಿ ಬದುಕು ಕಟ್ಟಿಕೊಂಡಿದ್ದಾರೆ. ಸ್ವಸಹಾಯ ಸಂಘಗಳ ಉತ್ಪನ್ನಗಳು ಇ ಕಾಮರ್ಸ್ ಪ್ರವೇಶಿಸಬೇಕು. ಆಗ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲು ಸಾಧ್ಯವಾಗಲಿದೆ ಎಂದು ರಾಜ್ಯಪಾಲರು ಹೇಳಿದರು.
https://chat.whatsapp.com/EbVKVnWB6rlHT1mWtsgbch
ಸ್ವಸಹಾಯ ಸಂಘಗಳ ಮೂಲಕ ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಮಹಿಳಾ ಶಕ್ತಿಯ ದೃಢತೆಯ ಜೊತೆಗೆ ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಮತ್ತು ಮಹಿಳಾ ಪರಿವಾರದ ಅಭಿವೃದ್ಧಿಗೆ ಪೂರಕವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಮಧ್ಯಪ್ರದೇಶಗಳಲ್ಲಿ ಸ್ವಸಹಾಯ ಗುಂಪುಗಳು ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿವೆ. 25 ವರ್ಷಗಳಿಂದ ನವೋದಯ ಸ್ವಸಹಾಯ ಸಂಘ ಅದ್ಭುತ ಪ್ರಗತಿ ಸಾಧಿಸುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮಾದರಿ ಸಂಘಟನೆಯಾಗಿ ಇದು ಬೆಳೆದು ನಿಂತಿದೆ. ಇದರ ಹಿಂದೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಶ್ರಮವೂ ಇದೆ ಎಂದು ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

ಕರಾವಳಿಯ ಸಹಕಾರಿ ವ್ಯವಸ್ಥೆ ಬಲಿಷ್ಠ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್, 25 ವರ್ಷಗಳ ಹಿಂದೆ ನಾನೇ ಸಹಕಾರಿ ಸಚಿವನಾಗಿದ್ದಾಗ ಡಾ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನವೋದಯ ಸ್ವ ಸಹಾಯ ಸಂಘಗಳ ಉದ್ಘಾಟಿಸಿದ್ದೆ. ಅದು ಈಗ ಹೆಮ್ಮರವಾಗಿ ಬೆಳೆದು ನಿಂತಿದ್ದು ಲಕ್ಷಾಂತರ ಕುಟುಂಬಗಳಿಗೆ ಒಳ್ಳೆಯ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು. ಕರಾವಳಿ ಪ್ರದೇಶದಲ್ಲಿ ಸಹಕಾರಿ ವ್ಯವಸ್ಥೆ ಬಲಶಾಲಿಯಾಗಿದೆ. ಇಲ್ಲಿನ ಜನ ಸಾಲ ಮರುಪಾವತಿಯಲ್ಲಿ ಮುಂಚೂಣಿಯಲ್ಲಿದ್ದು, ಸಹಕಾರಿ ತತ್ವದ ಈ ಪರಂಪರೆ ಬಲಶಾಲಿಯಾಗಿಯೇ ಮುಂದುವರಿಯಲಿ ಎಂದು ಆಶಿಸಿದರು. ಹೆಣ್ಣು ಕುಟುಂಬದ ಕಣ್ಣು ಎಂದು ಸ್ತ್ರೀಶಕ್ತಿ ಗುಂಪುಗಳನ್ನು ಸರಕಾರ ಆರಂಭಿಸಿತ್ತು. ಹೆಣ್ಮಕ್ಕಳು ಸ್ವಾವಲಂಬಿಗಳಾಗಿ ದೊಡ್ಡ ಶಕ್ತಿಯಾಗಿದ್ದಾರೆ. ಅವರು ದೇಶದ ಆಸ್ತಿ. ಹೆಣ್ಮಕ್ಕಳಿಗೆ ಸಮಾಜದಲ್ಲಿ ಮೊದಲ ಸ್ಥಾನವಿದೆ ಎಂದು ಹೇಳಿದರು.
ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಹಕಾರಿ ಧ್ವಜಾರೋಹಣ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು. ಕಾಪು ಮಜೂರಿನ ನಂದಿನಿ ಗುಂಪಿನ ಪ್ರಭಾವತಿ ಅನಿಸಿಕೆ ವ್ಯಕ್ತಪಡಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಇಫ್ಕೋ ಅಧ್ಯಕ್ಷ ಉದಯ ಶಂಕರ್ ಅವಸ್ಥಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ.ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ರೈ, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಯಶ್‌ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಎಸ್.ಎಲ್.ಭೋಜೇ ಗೌಡ, ಮಂಜುನಾಥ ಭಂಟಾರಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮುರುಗೇಶ್ ನಿರಾಣಿ, ಅಭಯಚಂದ್ರ ಜೈನ್, ಜಾಗತಿಕ ಬಂಟರ ಸಂಘಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರಮುಖ ಮುಖಂಡರಾದ ಮಿಥುನ್ ರೈ, ಇನಾಯತ್ ಅಲಿ, ಸಂಜೀವ ಮಠಂದೂರು, ಆರ್.ಪದ್ಮರಾಜ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಮೊಳಹಳ್ಳಿ, ರಕ್ಷಿತ್ ಶಿವರಾಂ, ಕಿಶೋರ್ ಆಳ್ವ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್. ಧರ್ಮ, ಆಳ್ವಾಸ್ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಮೊದಲಾದವರು ಹಾಜರಿದ್ದರು.
ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕರಿಸಿದರು. ಗಣೇಶ್ ಗಂಗೊಳ್ಳಿ ತಂಡದವರು ರಾಷ್ಟ್ರಗೀತೆ, ನಾಡಗೀತೆ ಹಾಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com