ಮುಂದಿನ ದಿನಗಳಲ್ಲಿ ತೊಕ್ಕೊಟ್ಟು, ಉಳ್ಳಾಲದ ಪರಿಸರದಲ್ಲಿ ಆರೋಗ್ಯ ತಪಾಸಣೆ: ಚಿತ್ತರಂಜನ್ ಬೋಳಾರ್ ಮಾಹಿತಿ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಾಡೂರು ಶಾಖೆಯ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮಾಡೂರು ಹಾಗೂ ಶ್ರೀ ವನದುರ್ಗಾ ಅಯ್ಯಪ್ಪ ಭಜನಾ ಮಂದಿರ ಇವರ ಜಂಟಿ ಸಹಯೋಗದಲ್ಲಿ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ತಜ್ಞ ವೈದ್ಯರಿಂದ ಉಚಿತ ದಂತ ತಪಾಸಣೆ ಮತ್ತು ಎ.ಜೆ. ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೈನ್ಸ್, ಮಂಗಳೂರು ಇಲ್ಲಿನ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರ ಭಾನುವಾರ ಮಾಡೂರಿನ ಮಾತೃಶ್ರೀ ಕಾಂಪ್ಲೆಕ್ಸ್‌ನ ಆವರಣದಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಶ್ರೀ ವನದುರ್ಗಾ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ವೈದ್ಯ ಡಾ|ಪ್ರಮಾದ ಪ್ರಭಾಕರ್ ಮಾತನಾಡಿ ಎಲ್ಲರೂ ಉದ್ಯೋಗದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಬೇಕು. ಈ ಶಿಬಿರದಲ್ಲಿ ದಂತ ತಪಾಸಣೆ, ಹುಳುಕು ಹಲ್ಲುಗಳ ಭರ್ತಿ, ಶುಚಿಗೊಳಿಸುವುದು, ಕೀಳುವುದು ಮತ್ತು ಹಲ್ಲುಗಳ ತಪಾಸಣೆ ಮಾಡಿಸಿ, ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಹಸಿರು ಕಾರ್ಡನ್ನು ವಿತರಿಸಲಾಗುವುದು. ಶಿಬಿರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ನಿರಂತರವಾಗಿ ಶಾಖೆಯ ವಾರ್ಷಿಕೋತ್ಸವ ಸಂದರ್ಭ ವೈದ್ಯಕೀಯ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ. ಹಲ್ಲುಗಳ ಸುರಕ್ಷತೆಯ ಬಗ್ಗೆ ಜಾಗರೂಕತೆ ವಹಿಸಿ ಚಿಕಿತ್ಸೆ ಪಡೆಯಬೇಕು. ಶಿಬಿರಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 13 ವರ್ಷಗಳಿಂದ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿರಂತರವಾಗಿ ವೈದ್ಯಕೀಯ ಶಿಬಿರ ಏರ್ಪಡಿಸುತ್ತಿದೆ. ಈ ವರ್ಷ ಕೂಡ ಪರಿಸರದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಶಿಬಿರ ಆಯೋಜಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಆರೋಗ್ಯಕರ ಸಮಾಜ ರೂಪಿಸುವಲ್ಲಿ ನಮ್ಮೊಂದಿಗೆ ಕೈ ಜೋಡಿಸಬೇಕು. ಸಂಘದ 87ನೇ ಉಚಿತ ವೈದ್ಯಕೀಯ ಶಿಬಿರ ಇದಾಗಿದ್ದು, ಮುಂದಿನ ತಿಂಗಳಲ್ಲಿ ತೊಕ್ಕೊಟ್ಟು ಹಾಗೂ ಉಳ್ಳಾಲದ ಪರಿಸರದಲ್ಲಿ ಶಿಬಿರ ಆಯೋಜಿಸಲಾಗುವುದೆಂದು ತಿಳಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ನವೀನ್ ಕಂಬ್ಲಕೋಡಿ, ಎ.ಜೆ. ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೈನ್ಸ್, ವೈದ್ಯರಾದ ಡಾ| ಆಶೀಷ್, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇದರ ಪಿಆರ್‌ಒ ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
150ಕ್ಕೂ ಅಧಿಕ ಶಿಬಿರಾರ್ಥಿಗಳು ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಸಂಘದ ಹಿರಿಯ ಶಾಖಾಧಿಕಾರಿ ರವಿಕಲಾ ವಿಶ್ವನಾಥ್ ಸ್ವಾಗತಿಸಿ, ಹಿರಿಯ ಶಾಖಾಧಿಕಾರಿ ಸೌಮ್ಯಲತಾ ವಂದಿಸಿದರು. ಮಾಡೂರು ಶಾಖೆಯ ಪ್ರಭಾರ ಶಾಖಾಧಿಕಾರಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com