ಏಪ್ರಿಲ್ 26ರಂದು ಚುನಾವಣೆ, ಅಂದೇ ಮತ ಎಣಿಕೆ, ಫಲಿತಾಂಶ
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುವುದು ಪಕ್ಕಾ ಆಗಿದೆ. ಏಪ್ರಿಲ್ 26ರಂದು ಚುನಾವಣೆ ನಡೆಯಲಿದ್ದು, ಒಟ್ಟು 16 ನಿರ್ದೇಶಕ ಸ್ಥಾನಕ್ಕೆ ಅಂತಿಮವಾಗಿ 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
https://chat.whatsapp.com/EbVKVnWB6rlHT1mWtsgbch
16 ನಿರ್ದೇಶಕ ಸ್ಥಾನಗಳಿದ್ದು ದ.ಕ. ಮತ್ತು ಉಡುಪಿ ಜಿಲ್ಲೆಗಳ ತಲಾ 8 ಸ್ಥಾನಗಳಂತೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ತಲಾ ಒಂದು ಸ್ಥಾನ ಮಹಿಳೆಯರಿಗೆ ಮೀಸಲು. ಅವಿಭಜಿತ ದ.ಕ. ಜಿಲ್ಲೆಗಳಿಂದ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ ಒಟ್ಟು 60 ನಾಮಪತ್ರ ಸಿಂಧುವಾಗಿತ್ತು. ಹಾಲಿ 16 ನಿರ್ದೇಶಕರ ಪೈಕಿ 13 ಮಂದಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಹಾಲಿ ಅಧ್ಯಕ್ಷ ಸುಚರಿತ ಶೆಟ್ಟಿ 4ನೇ ಬಾರಿ, ಮಾಜಿ ಅಧ್ಯಕ್ಷರಾದ ರವಿರಾಜ ಹೆಗ್ಡೆ ಹಾಗೂ ಕಾಪು ದಿವಾಕರ ಶೆಟ್ಟಿ5ನೇ ಬಾರಿ, ಪ್ರಕಾಶ್ಚಂದ್ರ ಶೆಟ್ಟಿ, ಮಂಜಯ್ಯ ಶೆಟ್ಟಿ, ಎಸ್ .ಬಿ.ಜಯರಾಮ ರೈ 3ನೇ ಬಾರಿ, ಸುಭದ್ರಾ ರಾವ್ 2ನೇ ಬಾರಿ ಕಣಕ್ಕೆ ಇಳಿದಿದ್ದಾರೆ.
ಉಡುಪಿಯಿಂದ ಕಮಲಾಕ್ಷ ಹೆಬ್ಬಾರ್, ಉದಯ ಕೋಟ್ಯಾನ್, ದ.ಕ.ದಿಂದ ಕೆ.ಚಂದ್ರಶೇಖರ ರಾವ್ ಮಾಡ್ನೂರು, ಬಿ.ಸುಧಾಕರ ರೈ ಬೋಳಂತೂರು, ಶರ್ಮಿಳಾ ಬಾಳುಗೋಡು, ಉಷಾ ಅಂಚನ್ ಕೊಣಾಲು, ಸವಿತಾ ಎನ್. ಶೆಟ್ಟಿ ಬಡಗಬೆಳ್ಳೂರು ಮತ್ತಿತರ ಹೊಸ ಮುಖಗಳು ಕಣದಲ್ಲಿದ್ದಾರೆ.
ಅವಿರೋಧ ಆಯ್ಕೆಗೆ ವಿಫಲ ಪ್ರಯತ್ನ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ 2009 ಹಾಗೂ 2014ರಲ್ಲಿ ಹಾಲು ಒಕ್ಕೂಟ ನಿರ್ದೇಶಕ ಸ್ಥಾನಕ್ಕೆ ಆವಿರೋಧ ಆಯ್ಕೆ ನಡೆದಿತ್ತು. ಈ ಬಾರಿಯೂ ಅವಿರೋಧ ಆಯ್ಕೆಗೆ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ.
ಏ.26ರಂದು ಬೆಳಗ್ಗೆ 9ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಹಾಲು ಒಕ್ಕೂಟದ 750 ಸಂಘಗಳ ಪೈಕಿ 710 ಸಂಘಗಳು ಮತದಾನದ ಅರ್ಹತೆ ಪಡೆದುಕೊಂಡಿವೆ. ಒಂದು ಹಾಲು ಸೊಸೈಟಿಯಿಂದ ಒಬ್ಬರಿಗೆ ಮಾತ್ರ ಮತದಾನಕ್ಕೆ ಅವಕಾಶವಿದ್ದು, ಸೊಸೈಟಿಯ ಆಡಳಿತ ಮಂಡಳಿ ಸೂಚಿಸಿದ ವ್ಯಕ್ತಿ ಮತದಾನ ಮಾಡುವ ಅಧಿಕಾರ ಹೊಂದಿದ್ದಾರೆ. ಮತದಾನ ಮುಕ್ತಾಯ ಬಳಿಕ ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಮತದಾನ ಕುಲಶೇಖರದಲ್ಲಿರುವ ಹಾಲು ಒಕ್ಕೂಟ ಕಚೇರಿಯಲ್ಲಿ ನಡೆಯಲಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com