ವೈದ್ಯಕೀಯ, ದಂತ, ನೇತ್ರ ತಪಾಸಣಾ, ಚಿಕಿತ್ಸಾ ರಕ್ತದಾನ ಶಿಬಿರದಲ್ಲಿ ಎಂ.ಎಸ್.ಗುರುರಾಜ್ ಹೇಳಿಕೆ
ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾನುವಾರ ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇವುಗಳ ಸಹಯೋಗದೊಂದಿಗೆ ಮಂಗಳೂರಿನ ಪಾಂಡೇಶ್ವರದಲ್ಲಿನ ಶ್ರೀ ಗುರುನರಸಿಂಹ ಸಭಾಭವನದಲ್ಲಿ ಬೃಹತ್ ಉಚಿತ ಆರೋಗ್ಯ -ದಂತ -ಕಣ್ಣಿನ -ತಪಾಸಣಾ -ಚಿಕಿತ್ಸಾ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
https://chat.whatsapp.com/Ge11n7QCiMj5QyPvCc0H19
ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆ ಹಾಗೂ ದೇರಳಕಟ್ಟೆ ಯೇನಪೊಯ ದಂತ ಕಾಲೇಜಿನ ನುರಿತ, ಅನುಭವಿ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. 485 ರೋಗಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಕಣ್ಣಿನ ಸಮಸ್ಯೆ ಇದ್ದ 85 ಜನರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕ ಹಾಗೂ ಎಲ್ಲಾ ಖಾಯಿಲೆಗಳಿಗೆ ಔಷಧಗಳನ್ನು ಉಚಿತವಾಗಿ ನೀಡಲಾಯಿತು. 48 ಜನರಿಗೆ ಇಸಿಜಿ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಆವಶ್ಯಕತೆಯುಳ್ಳವರನ್ನು ಗುರುವಾರ ಕೆಎಂಸಿ ಅತ್ತಾವರ ಆಸ್ಪತ್ರೆಗೆ ಹಾಗೂ ಹಲ್ಲಿನ ಸಮಸ್ಯೆಯುಳ್ಳವರಿಗೆ ದೇರಳಕಟ್ಟೆ ಯೆನೆಪೋಯ ದಂತ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ. ಅನೇಕರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ.
ಶ್ರೀಶಾ ಸೊಸೈಟಿ ಪ್ರತಿ ತಿಂಗಳೂ ಮಂಗಳೂರು ತಾಲೂಕಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಶಿಬಿರ 26ನೇ ಶಿಬಿರವಾಗಿದ್ದು ಮಂಗಳೂರು ಮಹಾನಗರದ ಹೃದಯಭಾಗದಲ್ಲೇ ಆಯೋಜಿಸಿದ್ದು ದೊಡ್ಡ ಸಂಖ್ಯೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಶಿಬಿರ ಉದ್ಘಾಟಿಸಿ ಮಾತನಾಡಿದ ಶ್ರೀಶಾ ಸೊಸೈಟಿ ಅಧ್ಯಕ್ಷ ಎಂ.ಎಸ್.ಗುರುರಾಜ್, “ಶ್ರೀಶಾ ಸೊಸೈಟಿ ಐದು ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಿದೆ. ಸೊಸೈಟಿಯು ತಾನು ಗಳಿಸಿದ ಲಾಭದ ದೊಡ್ಡ ಪಾಲನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಅವರ ಶಿಕ್ಷಣ ಹಾಗೂ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಈ ಬಗೆಯ ಶಿಬಿರಗಳೂ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸರ್ಕಾರಿ ಕನ್ನಡ ಮಾಧ್ಯಮದ 100 ಶಾಲೆಗಳ ಗ್ರಂಥಾಲಯಗಳಿಗೆ 10,000 ಪುಸ್ತಕಗಳನ್ನು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಉತ್ತೇಜಿಸುವ ಉದ್ದೇಶದಿಂದ ನೀಡಲಾಗುತ್ತಿದ್ದು,ಈಗಾಗಲೇ 5000 ಪುಸ್ತಕಗಳನ್ನು 50 ಶಾಲೆಗಳಿಗೆ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಆರು ವಿದ್ಯಾರ್ಥಿನಿಯರನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಸೊಸೈಟಿಯು ಭರಿಸುತ್ತಿದೆ ಎಂದರು.
ಕೂಟ ಮಹಾಜಗತ್ತು, ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷ ಶ್ರೀಧರ್ ಹೊಳ್ಳ ಸ್ವಾಗತಿಸಿದರು. ಶ್ರೀಶಾ ಸೊಸೈಟಿ ಉಪಾಧ್ಯಕ್ಷ ಉದಯ ವಿ.ಶಾಸ್ತ್ರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ, ಕೂಟ ಮಹಾಜಗತ್ತುಇದರ ಪದಾಧಿಕಾರಿಗಳಾದ ಗೋಪಾಲಕೃಷ್ಣ ಮಯ್ಯ, ಶಿವರಾಮಯ್ಯ, ಪ್ರಭಾ ಎಸ್.ರಾವ್,ಪ್ರ ವೀಣ್ ಮಯ್ಯ ಮುಂತಾದವರು ಉಪಸ್ಥಿತರಿದ್ದರು.
ಶ್ರೀಶಾ ಸೊಸೈಟಿಯ ನಿರ್ದೇಶಕ, ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರದ ಸಂಚಾಲಕ ಸುರೇಶ್ ಬೈಂದೂರ್ ಶಿಬಿರದ ನೇತೃತ್ವ ವಹಿಸಿದ್ದರು. ನಿರ್ದೇಶಕ ಪ್ರಸನ್ನ ಕುಮಾರ ಇರುವೈಲ್ ಶಿಬಿರವನ್ನು ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com