ಡಿಸೆಂಬರ್ 31ರ ತನಕ ಮುಂದುವರಿಕೆ
ನವದೆಹಲಿ: ಅಕ್ಟೋಬರ್ 1ರಿಂದ ಆರಂಭವಾದ ಮೂರನೇ ತ್ರೈಮಾಸಿಕದಲ್ಲಿ ಪಿಪಿಎಫ್, ಎನ್‌ಎಸ್‌ಸಿ ಸೇರಿದಂತೆ ಹಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಇದರಿಂದ ಎರಡನೇ ತ್ರೈಮಾಸಿಕದಲ್ಲಿ ನಿಗದಿಪಡಿಸಿರುವ ಬಡ್ಡಿ ದರ ಅಕ್ಟೋಬರ್ 1ರಿಂದ ಡಿಸೆಂಬರ್ 31ರ ತನಕ ಮುಂದುವರಿಯಲಿದೆ.
https://chat.whatsapp.com/Ge11n7QCiMj5QyPvCc0H19
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿಗದಿಪಡಿಸಿರುವ ಬಡ್ಡಿ ದರ ಅಕ್ಟೋಬರ್ 1ರಿಂದ ಡಿಸೆಂಬರ್ 31ರ ತನಕ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಪ್ರಸ್ತುತ ಸುಕನ್ಯಾ ಸಮೃದ್ಧಿಗೆ ಶೇ.8.2, ಪಿಪಿಎಫ್‌ಗೆ ಶೇ.7.1, ಅಂಚೆ ಕಚೇರಿಯ ಉಳಿತಾಯ ಠೇವಣಿಗೆ ಶೇ.4, ಕಿಸಾನ್ ವಿಕಾಸ್ ಪತ್ರಕ್ಕೆ ಶೇ.7.5, ಎನ್‌ಎಸ್‌ಸಿಗೆ ಶೇ.7.7 ಹಾಗೂ ಮಾಸಿಕ ಉಳಿತಾಯ ಯೋಜನೆಗೆ ಶೇ.7.4 ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.
ಹೊಸ ತಲೆಮಾರಿಗೆ ಎಸ್‌ಬಿಐ ಹೊಸ ಯೋಜನೆ
ಹೊಸ ತಲೆಮಾರಿನ ಜನರಲ್ಲೂ ಠೇವಣಿ ಯೋಜನೆಗಳನ್ನು ಜನಪ್ರಿಯಗೊಳಿಸಲು ಭಾರತೀಯ ಸ್ಟೇಟ್‌ಬ್ಯಾಂಕ್ (ಎಸ್‌ಬಿಐ) ತೀರ್ಮಾನಿಸಿದೆ. ಠೇವಣಿ ಸಂಗ್ರಹ ಹೆಚ್ಚಳಕ್ಕೆ ಬೃಹತ್ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹೊಸ ಯೋಜನೆ ರೂಪಿಸಲೂ ಚಿಂತನೆ ನಡೆಸಲಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ಚಲ್ಲ ಶ್ರೀನಿವಾಸಲು ಸೆಟ್ಟಿ ತಿಳಿಸಿದ್ದಾರೆ.
“ನಿಶ್ಚಿತ ಠೇವಣಿ (ಎಫ್.ಡಿ) ಮತ್ತು ವ್ಯವಸ್ಥಿತ ಹೂಡಿಕೆ (ಎಸ್‌ಐಪಿ) ಸಂಯೋಜಿತ ಹೊಸ ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ. ಗ್ರಾಹಕರಿಗೆ ಹಣಕಾಸಿನ ವ್ಯವಹಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದೆ. ಇದಕ್ಕೆ ಪೂರಕವಾಗಿ ತಮ್ಮ ಬೇಡಿಕೆಗಳನ್ನು ಕೂಡ ಮಂಡಿಸುತ್ತಾರೆ. ಹಾಗಾಗಿ, ನಾವು ಹೊಸ ಹೂಡಿಕೆಯ ವಿಧಾನ ಅನುಸರಿಸುವತ್ತ ದೃಷ್ಟಿ ಹರಿಸಿದ್ದೇವೆ,” ಎಂದು ಅವರು ವಿವರ ನೀಡಿದ್ದಾರೆ.
“ಆರ್ಥಿಕ ಸಾಕ್ಷರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಪ್ರಯೋಜನಗಳನ್ನು ನೀಡುವ ಯೋಜನೆಗಳನ್ನು ರೂಪಿಸುತ್ತೇವೆ. ರಿಸ್ಕ್ ಹೆಚ್ಚಿರುವ ಯೋಜನೆಗಳನ್ನು ಯಾರೂ ಒಪ್ಪುವುದಿಲ್ಲ. ನಾವು ಒದಗಿಸುವ ಯೋಜನೆಗಳು ಅವರ ಜೇಬನ್ನು ತುಂಬಬೇಕು, ಖಾಲಿ ಮಾಡಬಾರದು. ಈ ನಿಟ್ಟಿನಲ್ಲಿ ಎಲ್ಲರನ್ನೂ ಆಕರ್ಷಿಸುವ ಯೋಜನೆಗಳನ್ನು ರೂಪಿಸುತ್ತಿದ್ದೇವೆ,” ಎಂದು ಚಲ್ಲ ಶ್ರೀನಿವಾಸಲು ಸೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್-ಡಿಸೆಂಬರ್ 2024 ತ್ರೈಮಾಸಿಕದಲ್ಲಿ ಅಂಚೆ ಕಚೇರಿ ಯೋಜನೆಗಳ ಬಡ್ಡಿ ದರ
ಯೋಜನೆಗಳು ಬಡ್ಡಿ (%)
ಉಳಿತಾಯ ಠೇವಣಿ 4
1 ವರ್ಷ ಅವಧಿಯ ಠೇವಣಿ 6.9
2 ವರ್ಷ ಅವಧಿಯ ಠೇವಣಿ 7
3 ವರ್ಷ ಅವಧಿಯ ಠೇವಣಿ 7.1
5 ವರ್ಷ ಅವಧಿಯ ಠೇವಣಿ 7.5
5 ವರ್ಷಗಳ ಆರ್‌ಡಿ 6.7
ಹಿರಿಯ ನಾಗರಿಕರ ಉಳಿತಾಯ ಯೋಜನೆ 8.2
ಮಾಸಿಕ ಆದಾಯ ಖಾತೆ ಯೋಜನೆ 7.4
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ 7.7
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (ಪಿಪಿಎಫ್) 7.1
ಕಿಸಾನ್ ವಿಕಾಸ್ ಪತ್ರ 7.5 (115 ತಿಂಗಳಲ್ಲಿ ಮೆಚ್ಯುರಿಟಿ)
ಸುಕನ್ಯಾ ಸಮೃದ್ಧಿ ಯೋಜನೆ 8.2
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com