ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ತಗ್ಗಿಸಲು ಚಿಂತನೆ
100ಕ್ಕೂ ಅಧಿಕ ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಣೆ ಸಾಧ್ಯತೆ
ನವದೆಹಲಿ: ಕೃಷಿ ಉತ್ಪನ್ನ, ರಸಗೊಬ್ಬರ, ಜವಳಿ, ಕೈಮಗ್ಗ, ಶೈಕ್ಷಣಿಕ ಸಾಮಗ್ರಿ ಸೇರಿದಂತೆ 100ಕ್ಕೂ ಅಧಿಕ ವಸ್ತುಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಲು ಗೋವಾದಲ್ಲಿ ಬುಧವಾರ ನಡೆದ ಆರು ಸಚಿವರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸರಕುಗಳ ಮೇಲೆ ವಿಧಿಸುತ್ತಿರುವ ಶೇ.12ರಷ್ಟು ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸುವ ಬಗ್ಗೆಯೂ ಸಮಾಲೋಚನೆ ನಡೆದಿದೆ. ಆದರೆ ಈ ವಿಷಯದಲ್ಲಿ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ.
https://chat.whatsapp.com/Ge11n7QCiMj5QyPvCc0H19
ಅಕ್ಟೋಬರ್ 20ರಂದು ನಡೆಯುವ ಸಚಿವರ ಸಮಿತಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ನವೆಂಬರ್‌ನಲ್ಲಿ ನಡೆಯುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಪ್ರಸ್ತುತ ಸರಕು ಮತ್ತು ಸೇವಾ ತೆರಿಗೆ 5, 12, 18 ಮತ್ತು 28ರಷ್ಟು ಸ್ಲ್ಯಾಬ್‌ಗಳನ್ನು ಹೊಂದಿರುವ ನಾಲ್ಕು ಹಂತದ ತೆರಿಗೆ ರಚನೆಯಾಗಿದೆ. ಆದಾಗ್ಯೂ, ಜಿಎಎಸ್‌ಟಿ ಕಾನೂನಿನ ಪ್ರಕಾರ ಸರಕು ಮತ್ತು ಸೇವೆಗಳ ಮೇಲೆ ಶೇ.40ರವರೆಗೆ ತೆರಿಗೆ ವಿಧಿಸಲು ಅವಕಾಶವಿದೆ.
ಪ್ರಸಾಧನ ಪರಿಕರ ತುಟ್ಟಿ?
ಹೇರ್ ಡೈಯರ್‌ಗಳು, ಹೇರ್ ಕಲರ್‌ಗಳು ಮತ್ತು ಸೌಂದರ್ಯವರ್ಧಕಗಳ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.28ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.
ಸಭೆಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ಪಾಲ್ಗೊಂಡಿದ್ದರು.
ಸರಾಸರಿ ತೆರಿಗೆ ದರ ಕುಸಿತ
2024ರಲ್ಲಿ ಜಿಎಸ್‌ಟಿ ಅಡಿಯಲ್ಲಿ ಸರಾಸರಿ ತೆರಿಗೆ ದರವು ಶೇ.11.55ಕ್ಕೆ ಕುಸಿದಿದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ತಿಳಿಸಿದ್ದಾರೆ. 23ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಶೇ.28ರ ಸ್ಲ್ಯಾಬ್‌ನಿಂದ 178 ವಸ್ತುಗಳನ್ನು ತೆಗೆದುಹಾಕಲಾಗಿದೆ. ಈ ನಿರ್ಧಾರ ಮರುಪರಿಶೀಲಿಸಲು ಸಲಹೆ ನೀಡಲಾಗಿದೆ. ಇದರಿಂದ ಹೆಚ್ಚಿನ ವರಮಾನ ಗಳಿಸಲು ಸಹಕಾರಿಯಾಗಲಿದೆ. ಅಲ್ಲದೆ ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಶೇ.5ಕ್ಕೆ ಇಳಿಸಿದರೆ ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದಿದ್ದಾರೆ. ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆದಿಲ್ಲ. ಜನಸಾಮಾನ್ಯರು ಬಳಸುವ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಸಾಮಾನ್ಯ ಜನರು ಬಳಸುವ ವಸ್ತುಗಳಿಗೆ ಕಡಿಮೆ ತೆರಿಗೆ ವಿಧಿಸಬೇಕು, ಮತ್ತು ಆಹಾರ ಪದಾರ್ಥಗಳನ್ನು ಶೇ.12ರಿಂದ 5ರಷ್ಟು ಸ್ಲ್ಯಾಬ್‌ಗೆ ಬದಲಾಯಿಸುವುದರಿಂದ ಬೆಲೆ ಇಳಿಕೆಯ ವಿಷಯದಲ್ಲಿ ಪರಿಹಾರ ಸಿಗುತ್ತದೆ ಎಂದು ಚಂದ್ರಿಮಾ ಭಟ್ಟಾಚಾರ್ಯ ತಿಳಿಸಿದ್ದಾರೆ.
ಸೈಕಲ್ ಮೇಲೆ ತೆರಿಗೆ ಕಡಿತ?
ದೇಶದಲ್ಲಿ ಜನಸಾಮಾನ್ಯರು ಬೈಸಿಕಲ್ ಅನ್ನು ದೊಡ್ಡ ಸಂಖ್ಯೆಯಲ್ಲಿ ಬಳಸುತ್ತಿದ್ದು ಇದರ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಸಚಿವರ ಸಮಿತಿಯಲ್ಲಿ ಚರ್ಚೆ ನಡೆದಿದೆ. ಪ್ರಸ್ತುತ ಬೈಸಿಕಲ್‌ಗಳು ಮತ್ತು ಅದರ ಬಿಡಿಭಾಗಗಳ ಮೇಲೆ ಶೇ.12ರಷ್ಟು, ಇ-ಸೈಕಲ್‌ಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಪ್ರಸ್ತುತ ಔಷಧ ಮತ್ತು ವೈದ್ಯಕೀಯ ಸಾಮಗ್ರಿಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಕಡಿಮೆಗೊಳಿಸುವ ವಿಷಯವು ಸಭೆಯ ಮುಂದೆ ಪ್ರಸ್ತಾಪವಾಗಿದೆ. ಆದರೆ ಅಕ್ಟೋಬರ್ 20ರಂದು ನಡೆಯುವ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com