ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷ ಸಿ.ಪ್ರಭಾಕರ ಶೆಟ್ಟಿ ಅಭಿಪ್ರಾಯ
57.38 ಲಕ್ಷ ರೂ. ನಿವ್ವಳ ಲಾಭ, ಶೇ.8 ಡಿವಿಡೆಂಡ್ ಘೋಷಣೆ
ಮಂಗಳೂರು: ಎಲ್ಲರ ಸಹಕಾರದಿಂದ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘವನ್ನು ಸ್ಥಾಪಿಸಿದ್ದು ಶಿಸ್ತಿನಿಂದ ಮುನ್ನಡೆಸಿಕೊಂಡು ಬರಲಾಗಿದೆ. ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಸದಸ್ಯರು ಸಂಘದ ಮೇಲೆ ಇಟ್ಟಿರುವ ವಿಶ್ವಾಸವೇ ಕಾರಣ ಎಂದು ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ಅಧ್ಯಕ್ಷ ಸಿ.ಪ್ರಭಾಕರ ಶೆಟ್ಟಿ ಹೇಳಿದರು.
ಉರ್ವ ಕೆನರಾ ಹೈಸ್ಕೂಲ್‌ನ ಮಿಜಾರು ಗೋವಿಂದ ಪೈ ಸ್ಮಾರಕ ಸಭಾಂಗಣದಲ್ಲಿ ನಡೆದ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ ನಿಯಮಿತ ಮಂಗಳೂರು ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
https://chat.whatsapp.com/Ge11n7QCiMj5QyPvCc0H19
ಸಂಘವು ಪ್ರಸ್ತುತ ಸಾಲಿನಲ್ಲಿ 3911 ಸದಸ್ಯರನ್ನು ಹೊಂದಿದ್ದು ರೂ.4,95,58,700 ಪಾಲು ಬಂಡವಾಳ, ರೂ. 56,39,19,671 ದುಡಿಯುವ ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ ಸಂಘದ ಒಟ್ಟು ವ್ಯವಹಾರ ರೂ.77,43,22,930 ಹೊಂದಿದ್ದು, ರೂ. 35,04,50,206 ಹೊರಬಾಕಿ ಸಾಲ ಇದೆ. ಕಾಲಮಿತಿಗೊಳಪಟ್ಟು ಈ ಹಿಂದೆ ಶೇ 9.5%ರ ಬಡ್ಡಿ ದರದಲ್ಲಿ ಸುಮಾರು 13 ಕೋಟಿಯಷ್ಟು ಸಾಲ ನೀಡಲಾಗಿದೆ. ಇದರಿಂದ ಸದಸ್ಯರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ ಲಾಭಾಂಶದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಸಂಘವು 2023-24ನೇ ಸಾಲಿನಲ್ಲಿ ರೂ. 57,38,001.32 ನಿವ್ವಳ ಲಾಭ ಹೊಂದಿದ್ದು, ಶೇ.8 ಲಾಭಾಂಶ ನೀಡಲಾಗುವುದು.
ವರದಿ ವರ್ಷದಲ್ಲಿ ನಿಧನ ಹೊಂದಿದ ಸದಸ್ಯರಿಗೆ ಶಿಕ್ಷಕ್ ಸುರಕ್ಷಿತ್ ಯೋಜನೆಯಿಂದ ರೂ.3,61,000 ಪರಿಹಾರ ಮೊತ್ತ ನೀಡಲಾಗಿದ್ದು ಸದಸ್ಯರು ಈ ಯೋಜನೆಗೆ ಸೇರಿದರೆ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧ್ಯಕ್ಷ ಸಿ.ಪ್ರಭಾಕರ ಶೆಟ್ಟಿ ತಿಳಿಸಿದರು. 2017ರಲ್ಲಿ ಪ್ರಾರಂಭವಾದ ಶಿಕ್ಷಕ್ ಸುರಕ್ಷಿತ್ ಯೋಜನೆಯಿಂದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಿದ್ದು ಪ್ರಸ್ತುತ ಈ ಯೋಜನೆಯಲ್ಲಿ ರೂ. 72,47,840.88 ಮೊತ್ತವು ಸಂಗ್ರಹವಾಗಿದೆ.
ಸದಸ್ಯೆ ರತ್ನಾವತಿ ಜೆ.ಬೈಕಾಡಿ ಪ್ರಾರ್ಥನೆ ಹಾಡಿದರು. 2023-24ನೇ ಸಾಲಿನ ವರದಿ, ಲೆಕ್ಕ ಪತ್ರ ಮಂಡನೆ, ಅಂದಾಜು ಅಯ್ಯವ್ಯಯದ ಮಂಡನೆ ಇತ್ಯಾದಿಗಳನ್ನು ಕಾರ್ಯ ಸೂಚಿಯಂತೆ ನೆರವೇರಿಸಲಾಯಿತು. ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ವರದಿ ಸಾಲಿನಲ್ಲಿ ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ನಿರ್ದೇಶಕರಾದ ರಾಮಶೇಷ ಶೆಟ್ಟಿ, ರಜನಿ ಬಿ, ಉದಯಶಂಕರ ನಾಯ್ಕ್ ಟಿ., ಪಿ.ಡಿ. ಶೆಟ್ಟಿ, ಅಂಬರೀಶ್, ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ವಸಂತ ಕೆ., ಪುಟ್ಟಸ್ವಾಮಿ ಆರ್., ವಿಜಯ ಆಳ್ವ, ಮಾರ್ಕ್ ಜೆ.ಮೆಂಡೋನ್ಸಾ, ಚಂದ್ರಶೇಖರ್ ಸಿ.ಎಚ್. ತಿಪ್ಪೋಜಿ ಎಂ.ವೈ., ರೀಟಾ ಡೇಸಾ, ವನಿತಾ, ಉಸ್ಮಾನ್ ಜಿ. ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರ್ಮಿಳಾ ಕೆ. 2023-24ರ ವರದಿ ಮತ್ತು ತಿಳುವಳಿಕೆ ಪತ್ರ ವಾಚಿಸಿದರು. ಉಪಾಧ್ಯಕ್ಷ ಕೆ.ಎಂ.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರ
2023-24ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರತಿಭಾ ಪುರಸ್ಕಾರದ ಪ್ರಾಯೋಜಕತ್ವ ವಹಿಸಿದ ಸಂಘದ ಸದಸ್ಯ ಮಿಲಾಗ್ರಿಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೊ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪಂಜಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವಾಣಿ, ಬೊಕ್ಕಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಡ್ರೆಸಿಲ್ ಲಿಲ್ಲಿ ಮಿನೆಜಸ್, ಕುಂದಾಪುರ ವಲಯ ಹಂಗಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ ಇವರನ್ನು ಗೌರವಿಸಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com