ಇಫ್ಕೋ ಆಯೋಜನೆ, 17 ಸಂಘಟನೆಗಳ ಜಂಟಿ ಆಶ್ರಯ
ನವದೆಹಲಿ: ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ(ಐಸಿಎ)ದ ಸಾಮಾನ್ಯ ಸಭೆ ಮತ್ತು ಜಾಗತಿಕ ಸಹಕಾರ ಸಮ್ಮೇಳನ ನವೆಂಬರ್ 25ರಿಂದ 30ರ ತನಕ ನಡೆಯಲಿದೆ. ಐಸಿಎಯ 130 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಈ ಸಮ್ಮೇಳನ ಭಾರತದಲ್ಲಿ ನಡೆಯುತ್ತಿದ್ದು ದೇಶದ ಸಹಕಾರ ವಲಯದ ಬೆಳವಣಿಗೆಗೆ ಇದು ಮಹತ್ವದ ಕೊಡುಗೆ ನೀಡಲಿದೆ ಎಂದು ಇಫ್ಕೋ ಚೇರ್‌ಮೆನ್ ದಿಲೀಪ್ ಸಂಘಾನಿ ತಿಳಿಸಿದ್ದಾರೆ.
ಇಫ್ಕೋ ಮತ್ತು ಐಸಿಎಯ 17 ಇತರ ಸದಸ್ಯ ಸಂಘಟನೆಗಳು ಸಮ್ಮೇಳನವನ್ನು ಆಯೋಜಿಸಿದ್ದು ನವದೆಹಲಿಯ ಭಾರತ್ ಮಂಟಪ ಇದಕ್ಕೆ ಸಜ್ಜಾಗಿದೆ. ʼಸಹಕಾರ: ಎಲ್ಲರಿಗೂ ಸಮೃದ್ಧಿಯ ಬಾಗಿಲುʼ ಎಂಬುದು ಈ ಸಮ್ಮೇಳನದ ಧ್ಯೇಯವಾಕ್ಯವಾಗಿದ್ದು ಇದು ಸಹಕಾರದಿಂದ ಸಮೃದ್ಧತೆಯನ್ನು ಸಾಧಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿಗೆ ಪೂರಕವಾಗಿದೆ ಎಂದು ಸಂಘಾನಿ ತಿಳಿಸಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಭಾರತದ ಸಹಕಾರ ಕ್ಷೇತ್ರವು ಜಾಗತಿಕವಾಗಿ ಪ್ರಮುಖ ಶಕ್ತಿಯಾಗಿ ಪಡಿಮೂಡುವಲ್ಲಿ ಅಮಿತ್ ಶಾ ನೇತೃತ್ವದ ಸಚಿವಾಲಯವು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ತೆರಿಗೆ ಸುಧಾರಣೆಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ರಾಷ್ಟ್ರೀಯ ಮಟ್ಟದ ರಾಷ್ಟ್ರೀಯ ಡೇಟಾ ರಚನೆ, ಪ್ಯಾಕ್ಸ್‌ಗಳ ಕಂಪ್ಯೂಟರೀಕರಣ ಮೊದಲಾದ ಅನೇಕ ಸುಧಾರಣೆಗಳನ್ನು ಕೇಂದ್ರ ಸಹಕಾರ ಸಚಿವಾಲಯವು ಜಾರಿಗೆ ತಂದಿದೆ ಎಂದು ಅವರು ಹೇಳಿದರು.
1984ರಲ್ಲಿ ಜಾರಿಗೊಳಿಸಲಾದ ಬಹು-ರಾಜ್ಯ ಸಹಕಾರ ಸಂಘಗಳ (MSCS) ಕಾಯ್ದೆಯನ್ನು 2002ರಲ್ಲಿ ಮಾದರಿ ಸಹಕಾರಿ ಕಾಯ್ದೆಗೆ ಅನುಗುಣವಾಗಿ ಮಾರ್ಪಡಿಸಲಾಗಿದೆ. ಇದು ಸಹಕಾರಿ ಕ್ಷೇತ್ರದಲ್ಲಿ ಬಹುನಿರೀಕ್ಷಿತ ಸುಧಾರಣೆಗಳನ್ನು ಸಕ್ರಿಯವಾಗಿ ಜಾರಿಗೊಳಿಸಲು ಕಾರಣವಾಯಿತು. ಪಾರದರ್ಶಕ ಚುನಾವಣೆಗಳು ಕಾನೂನು ಇತ್ಯಾದಿ ನಿರ್ಣಾಯಕ ಕ್ರಮಗಳು ಭಾರತದಲ್ಲಿ ಸಹಕಾರದ ಮನೋಭಾವವನ್ನು ಉತ್ತೇಜಿಸಿವೆ ಎಂದು ಸಂಘಾನಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುವ ಜಾಗತಿಕ ಸಹಕಾರ ಸಮ್ಮೇಳನವು ಭಾರತೀಯ ಸಹಕಾರಿಗಳಿಗೆ ಇಲ್ಲಿನ ಸವಾಲುಗಳು, ಸಾಧನೆಗಳು ಮತ್ತು ಕೊಡುಗೆಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲು ವೇದಿಕೆ ಒದಗಿಸಲಿದೆ. ತನ್ಮೂಲಕ ಜಾಗತಿಕ ಕ್ಷೇತ್ರಕ್ಕೆ ಭಾರತದ ಸಹಕಾರಿಯ ಕೊಡುಗೆಯನ್ನು ತೋರಿಸಲು ಕಾರಣವಾಗಲಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಕಾರ ವರ್ಷ -2025ರ ಅಧಿಕೃತ ಘೋಷಣೆಯನ್ನೂ ಈ ಸಮ್ಮೇಳನದಲ್ಲಿಯೇ ಮಾಡಲಾಗುವುದು ಎಂದು ಸಂಘಾನಿ ಮಾಹಿತಿ ನೀಡಿದ್ದಾರೆ.
ಸಮ್ಮೇಳನದಲ್ಲಿ ಭೂತಾನ್‌ನ ಪ್ರಧಾನಮಂತ್ರಿ, ಯುನೆಸ್ಕೋದ ಅಧ್ಯಕ್ಷರು, ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟದ ಅಧ್ಯಕ್ಷರು, ಫಿಜಿಯ ಉಪಪ್ರಧಾನಿ, 100ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ದಿಲೀಪ್ ಸಂಘಾನಿ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com