ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಣೆ, 10 ಮಂದಿ ನಾಟಿ ವೈದ್ಯರಿಗೆ ಗೌರವ, 30 ಮಕ್ಕಳಿಗೆ ವಿದ್ಯಾರ್ಥಿವೇತನ
ಮೂಡುಬಿದಿರೆ: ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ಕರಿಂಜೆ ಇದರ ಆರನೇ ವಾರ್ಷಿಕ ಮಹಾಸಭೆ ಭಾನುವಾರ ಸಂಸ್ಥೆಯ ಅಧ್ಯಕ್ಷ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರವನ್ನು ಕಾಯುವ ಯೋಧರ ಹಿತರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ, ನಾವೆಲ್ಲರೂ ನೆಮ್ಮದಿಯಿಂದ ಇರಲು ಕಾರಣರಾಗಿರುವ ಭಾರತೀಯ ಸೇನೆಯ ಯೋಧರಿಗೆ ಗೌರವ ಸಲ್ಲಿಸುವ ಅಪೂರ್ವ ಕಾರ್ಯಕ್ರಮ ಮಹಾಸಭೆಯಲ್ಲಿ ನಡೆಯಿತು.
https://chat.whatsapp.com/Ge11n7QCiMj5QyPvCc0H19
ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಭಾವನೆಯಿಂದ ಸಂಸ್ಥೆಯ ಜೊತೆ ಕೈಜೋಡಿಸಿ ಸಂಸ್ಥೆಯ ಏಳಿಗೆಗೆ ಸದಸ್ಯರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಕುವೆಟ್ಟು, ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಹೊಸ ಶಾಖೆ ತೆರೆಯುವ ಇಂಗಿತವನ್ನೂ ಸ್ವಾಮೀಜಿ ವ್ಯಕ್ತಪಡಿಸಿದರು.
ಅಧ್ಯಕ್ಷ ಸುಧಾಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ಹೊಸ ಶಾಖೆ ತೆರೆಯುವ ವಿಷಯ ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳ ಸಮಾವೇಶ ನಡೆಸುವ ಇರಾದೆಯನ್ನೂ ವ್ಯಕ್ತಪಡಿಸಿದರು. ಲಾಭಾಂಶದಲ್ಲಿ ದೇಶದ ರಕ್ಷಣಾ ನಿಧಿಗೆ ಒಂದಷ್ಟು ಪಾಲು ತೆಗೆದಿರಿಸುವ ಬಗ್ಗೆ ಮಾಹಿತಿ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಮಾತನಾಡಿ, ಸಹಕಾರಿಯು ರೂ.23,59,000 ಪಾಲು ಬಂಡವಾಳವನ್ನು ಹೊಂದಿದ್ದು, ವರದಿ ವರ್ಷ 4,01,74,788.05 ಠೇವಣಾತಿ ಹೊಂದಿದೆ. ವರದಿಯ ವರ್ಷಾರಂಭಕ್ಕೆ ನೀಡಿದ ಸಾಲಗಳು 3,62,80,323 ರೂ.ಗಳು. ಸಹಕಾರಿಯ ಒಟ್ಟು ದುಡಿಯುವ ಬಂಡವಾಳ 4,40,62,677 ರೂ. 2023-24ನೇ ಸಾಲಿನ ಒಟ್ಟು ಆದಾಯ 63,20,143 ರೂ. ಒಟ್ಟು ವೆಚ್ಚ 35,55,578 ರೂ. ಗಳಿಸಿದ ನಿವ್ವಳ ಲಾಭ 27,64,567 ರೂ. ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 10 ಮಂದಿ ನಾಟಿ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ಸದಸ್ಯರ 30 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಹೊಸದಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ ಹಾಗೂ ಪ್ರಕಾಶ್ ಬಿ.ಎನ್ ಅವರನ್ನು ಅಭಿನಂದಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸುಧಾಕರ ಅವರನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ಮೂಡುಬಿದಿರೆ ಹಾಗೂ ಜೈನ್ ಮೆಡಿಕಲ್ ಸೆಂಟರ್ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಸಾಮಾನ್ಯ ಆರೋಗ್ಯ ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣೆ, ಮಧುಮೇಹ ತಪಾಸಣೆ, ಬಿ.ಪಿ ತಪಾಸಣೆ ನಡೆಸಲಾಯಿತು. ಡಾ.ಪ್ರಣಮ್ಯಾ ಜೈನ್ ಗರ್ಭಕೋಶ ಹಾಗೂ ಬಾಯಿಯ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರು.
ಸಂಘದ ಉಪಾಧ್ಯಕ್ಷ ಪ್ರಕಾಶ್ ಬಿ. ಎನ್, ನಿರ್ದೇಶಕರಾದ ಪ್ರಮೋದರ, ರಕ್ಷಿತ್ ಆರ್.ಕರ್ಕೇರ, ಸಂತೋಷ್, ಮೇಘನಾಥ, ಹರೀಣ್ ಸುವರ್ಣ, ಸುಹಾಸಿನಿ, ನಾಗರತ್ನ, ವಿಶ್ವನಾಥ ಶೆಟ್ಟಿ, ಭವ್ಯ, ಹೇಮಲತಾ ಎಸ್ ಉಪಸ್ಥಿತರಿದ್ದರು. ಸ್ವಸಹಾಯ ಸಂಘದ ಸೇವಾಪ್ರತಿನಿಧಿ ರಮೇಶ್ ಎಂ ಕಾರ್ಯಕ್ರಮ ನಿರೂಪಿಸಿದರು. ಪವನ್ ಕುಮಾರ್ ಸ್ವಾಗತಿಸಿದರು. ಸಹಕಾರಿಯ ಲೆಕ್ಕಿಗ ಸಂಜಿತಾ ವರದಿ ವಾಚಿಸಿದರು. ನಿರ್ದೇಶಕ ಶ್ಯಾಮ ಎಂ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com