ಮಂಗಳೂರು: ಗ್ರಾಹಕ ಸೇವೆ ಮತ್ತು ಪ್ರಗತಿಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವ ಎಂಸಿಸಿ ಬ್ಯಾಂಕಿನ ಮೂಡುಬಿದಿರೆ ಶಾಖೆಯು ಮಂಗಳವಾರದಂದು ಮೂಡುಬಿದಿರೆಯ ಇನ್ಸ್ಪೆಕ್ಷನ್ ಬಂಗ್ಲೋ ಸಮೀಪದ ಪತ್ರಿಕಾ ಭವನದ ನೆಲಮಹಡಿಯಲ್ಲಿರುವ ನೂತನ ಹಾಗೂ ಆಧುನಿಕ ಸೌಲಭ್ಯಗಳನ್ನೊಳಗೊಂಡ ಆವರಣಕ್ಕೆ ಸ್ಥಳಾಂತರಗೊಂಡಿತು.
ನೂತನ ಶಾಖಾ ಆವರಣವನ್ನು ಮೂಡುಬಿದಿರೆ ಕಾರ್ಪಸ್ ಕ್ರಿಸ್ಟಿ ಚರ್ಚ್ನ ವಲಯ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ವಂ. ಫಾ. ಓನಿಲ್ ಡಿಸೋಜ ಅವರು ಆಶೀರ್ವದಿಸಿದರು. ನೂತನ ಸುರಕ್ಷಿತ ಠೇವಣಿ ಲಾಕರ್ ಸೌಲಭ್ಯವನ್ನು ಅಲಂಗಾರಿನ ಅವರ್ ಲೇಡಿ ಆಫ್ ಹೋಲಿ ರೋಸರಿ ಚರ್ಚ್ನ ಧರ್ಮಗುರುಗಳಾದ ವಂ. ಫಾ. ಮೆಲ್ವಿನ್ ನೊರೊನ್ಹಾ ಉದ್ಘಾಟಿಸಿದರು.
https://chat.whatsapp.com/FCEnlTkAKCC0MGPhXtX4i4
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ವಹಿಸಿದ್ದರು. ಅಲಂಗಾರಿನ ಅವರ್ ಲೇಡಿ ಆಫ್ ಹೋಲಿ ರೋಸರಿ ಚರ್ಚ್ನ ಧರ್ಮಗುರುಗಳಾದ ವಂ. ಫಾ. ಮೆಲ್ವಿನ್ ನೊರೊನ್ಹಾ ಮುಖ್ಯ ಅತಿಥಿಗಳಾಗಿದ್ದರು. ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್ ಧರ್ಮಗುರುಗಳಾದ ವಂ. ಫಾ. ವಿನ್ಸೆಂಟ್ ಡಿಸೋಜ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೂಡುಬಿದಿರೆಯ ನ್ಯಾಯವಾದಿ ಹಾಗೂ ನೋಟರಿ ಪ್ರವೀಣ್ ಎಸ್. ಲೋಬೊ, ಆಶ್ಲಿ ಹಾರ್ಡ್ವೇರ್ ಆ್ಯಂಡ್ ಸ್ಟೀಲ್ ಮಾಲೀಕರಾದ ರೋಹನ್ ರಾಜೇಶ್ ಮೆಂಡಿಸ್, ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಎಂ. ಅಬ್ದುಲ್ ರಹಿಮಾನ್ ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸೀತಾರಾಮ ಆಚಾರ್ಯ ಅವರು ಗೌರವ ಅತಿಥಿಗಳಾಗಿದ್ದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಅವರು ಗಣ್ಯ ಅತಿಥಿಗಳು, ನಿರ್ದೇಶಕರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಗ್ರಾಹಕರು ಹಾಗೂ ಹಿತೈಷಿಗಳು ಬ್ಯಾಂಕಿನ ಮೇಲೆ ಇಟ್ಟಿರುವ ಅಚಲ ವಿಶ್ವಾಸ ಮತ್ತು ನಿರಂತರ ಸಹಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಎಂಸಿಸಿ ಬ್ಯಾಂಕನ್ನು ನಿಜವಾದ “ಜನರ ಬ್ಯಾಂಕ್” ಎಂದು ಬಣ್ಣಿಸಿದ ಅವರು, ಹಲವು ದಶಕಗಳಿಂದ ಬ್ಯಾಂಕ್ ವಿಶ್ವಾಸ ಮತ್ತು ಸೇವೆಯ ಶ್ರೀಮಂತ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಗ್ರಾಹಕರೇ ಬ್ಯಾಂಕಿನ ನಿಜವಾದ ಬ್ರ್ಯಾಂಡ್ ರಾಯಭಾರಿಗಳಾಗಿದ್ದು, ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರನ್ನು ಬ್ಯಾಂಕಿನೊಂದಿಗೆ ವ್ಯವಹರಿಸಲು ಪ್ರೇರೇಪಿಸುವಂತೆ ಕರೆ ನೀಡಿದರು.
ಎಂಸಿಸಿ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ದ್ವಂದ್ವ ನಿಯಂತ್ರಣ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ ಅಧ್ಯಕ್ಷರು, ಡಿಐಸಿಜಿಸಿ ವಿಮಾ ಯೋಜನೆಯಡಿ ಗ್ರಾಹಕರ ಠೇವಣಿಗಳಿಗೆ ದೊರೆಯುವ ವಿಮಾ ರಕ್ಷಣೆಯ ಬಗ್ಗೆ ಭರವಸೆ ನೀಡಿದರು. ನಾಯಕತ್ವದ ಮಹತ್ವವನ್ನು ವಿವರಿಸುತ್ತ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಜವಾದ ನಾಯಕತ್ವವೆಂದರೆ ದೈಹಿಕ ಶಕ್ತಿಗಿಂತಲೂ ದೃಢವಾದ ಮನೋಬಲ, ಸ್ಪಷ್ಟವಾದ ದೂರದೃಷ್ಟಿ ಹಾಗೂ ಸಹಾನುಭೂತಿಯ ಹೃದಯವನ್ನು ಹೊಂದಿರುವುದಾಗಿದೆ ಎಂದು ಅಭಿಪ್ರಾಯಪಟ್ಟರು. 2018ರ ಚುನಾವಣೆಯ ಸಂದರ್ಭದಲ್ಲಿ ತಾವು ಮತ್ತು ತಮ್ಮ ತಂಡ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕಿನ ಸ್ಥಾಪಕ ಹಿರಿಯರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದರು.
ಬ್ಯಾಂಕಿನ ಗಮನಾರ್ಹ ಪ್ರಗತಿಯನ್ನು ವಿವರಿಸಿದ ಲೋಬೊ ಅವರು, ಮೂಡುಬಿದಿರೆ ಶಾಖೆಯ ವ್ಯವಹಾರವು ₹15 ಕೋಟಿಯಿಂದ ₹65 ಕೋಟಿಗೆ ಏರಿಕೆಯಾಗಿದ್ದು, ಶಾಖೆಯು ₹40 ಕೋಟಿ ಠೇವಣಿ ಹಾಗೂ ₹25 ಕೋಟಿ ಮುಂಗಡಗಳನ್ನು ಹೊಂದಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿರುವ 262 ನಗರ ಸಹಕಾರಿ ಬ್ಯಾಂಕುಗಳ ಪೈಕಿ ವಿಶೇಷ NRI ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿರುವ ಏಕೈಕ ನಗರ ಸಹಕಾರಿ ಬ್ಯಾಂಕ್ ಎಂಸಿಸಿ ಬ್ಯಾಂಕ್ ಆಗಿದೆ ಎಂದು ತಿಳಿಸಿದರು.
ಬ್ಯಾಂಕಿನ ವಿಸ್ತರಣಾ ಯೋಜನೆಗಳ ಕುರಿತು ಮಾತನಾಡಿದ ಅಧ್ಯಕ್ಷರು, 24ನೇ ಶಾಖೆಯನ್ನು 2027ರ ಜನವರಿ 17ರಂದು ಪಡಿಲ್ನಲ್ಲಿ ಹಾಗೂ 25ನೇ ಶಾಖೆಯನ್ನು 2027ರ ಮಾರ್ಚ್ 14ರಂದು ಕದ್ರಿ-ಮಲ್ಲಿಕಟ್ಟದಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.



ರೋಹನ್ ರಾಜೇಶ್ ಮೆಂಡಿಸ್ ಮಾತನಾಡಿ, ಅನಿಲ್ ಲೋಬೊ ಅವರ ನೇತೃತ್ವದಲ್ಲಿ ಯುವ ಹಾಗೂ ಕ್ರಿಯಾಶೀಲ ನಾಯಕತ್ವದ ಉದಯದೊಂದಿಗೆ ಎಂಸಿಸಿ ಬ್ಯಾಂಕ್ ಹೊಸ ಬದಲಾವಣೆಯನ್ನು ಕಂಡಿದೆ ಎಂದು ತಿಳಿಸಿದರು. ಅಧ್ಯಕ್ಷರ ದೃಢಸಂಕಲ್ಪ, ಶಿಸ್ತು ಮತ್ತು ದೂರದೃಷ್ಟಿಗೆ ನಿರ್ದೇಶಕ ಮಂಡಳಿ, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ನಿಷ್ಠಾವಂತ ಗ್ರಾಹಕರ ಸಹಕಾರ ದೊರೆತಿರುವುದರಿಂದ ಬ್ಯಾಂಕ್ ಹೊಸ ಎತ್ತರವನ್ನು ತಲುಪಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಸ್ಪರ್ಧಾತ್ಮಕ ಯುಗದಲ್ಲಿ MCC ಬ್ಯಾಂಕ್ ನೀಡುತ್ತಿರುವ ಅತ್ಯುತ್ತಮ ಸೇವೆಯನ್ನು ಅವರು ಶ್ಲಾಘಿಸಿದರು.
ಬ್ಯಾಂಕಿನ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ, ಅಳಂಗಾರಿನ ಹೆಲ್ಪರ್ಸ್ ಆಫ್ ಮೌಂಟ್ ರೋಸರಿಗೆ ₹1,00,000/- ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಶಾಖೆಯ ಗ್ರಾಹಕರ ಮಕ್ಕಳ ಪೈಕಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಅವರ ವಿಶೇಷ ಸಾಧನೆಗಳು ಹಾಗೂ ಕೊಡುಗೆಗಳನ್ನು ಗುರುತಿಸಿ ಗೌರವಿಸಲಾಯಿತು. ಸನ್ಮಾನಿತರಲ್ಲಿ ಕ್ರೀಡಾಪಟು ಕುಮಾರಿ ಅಸ್ಲಿನ್ ಮರೀನಾ ರೊಡ್ರಿಗಸ್, ನ್ಯಾಯವಾದಿ ಟಾರ್ಶಿಸ್ ಡಿಸಿಲ್ವಾ, ಸಮಾಜಸೇವಕ ಹಾಗೂ ದಾನಿಗಳಾದ ಪೀಟರ್ ಫೆಲಿಕ್ಸ್ ಡಿಸೋಜಾ, ಕ್ರೀಡಾಪಟು ಹಾಗೂ ಸಮಾಜಸೇವಕರಾದ ಅನಿಲ್ ರೆಬೆನ್ ಮೆಂಡೊನ್ಸಾ ಮತ್ತು ಕ್ರೀಡಾಪಟು ಜಾಯ್ಲಿನ್ ಮುರಲ್ ಲೋಬೊ ಅವರು ಸೇರಿದ್ದರು. ಹಿಂದಿನ ಶಾಖಾ ಆವರಣದ ಕಟ್ಟಡ ಮಾಲೀಕರು ಹಾಗೂ ನೂತನ ಆವರಣದ ಮಾಲೀಕರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ನೂತನ ಶಾಖೆಯ ವಿನ್ಯಾಸ ಹಾಗೂ ಕಾಮಗಾರಿಯ ಮೇಲ್ವಿಚಾರಣೆ ಮಾಡಿದ ವಾಸ್ತುಶಿಲ್ಪಿ ಶ್ರೀ ಅನಿಲ್ ಲೋಬೊ ಅವರನ್ನೂ ಸನ್ಮಾನಿಸಲಾಯಿತು. ಎಂಸಿಸಿ ಬ್ಯಾಂಕಿನ ಇತಿಹಾಸ, ಸಾಧನೆಗಳು ಹಾಗೂ ಭವಿಷ್ಯದ ದೂರದೃಷ್ಟಿಯನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೆರೊ, ಡಾ. ಜೆರಾಲ್ಡ್ ಪಿಂಟೊ, ವಿನ್ಸೆಂಟ್ ಲಸ್ರಾದೊ, ರೋಷನ್ ಡಿಸೋಜ, ಫೆಲಿಕ್ಸ್ ಡಿಕ್ರೂಜ್, ಸಿ.ಜಿ. ಪಿಂಟೊ, ಐರಿನ್ ರೆಬೆಲ್ಲೊ, ಜೆ.ಪಿ. ರೊಡ್ರಿಗಸ್, ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೆಜಸ್, ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗ್ರಾಹಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಮೂಡುಬಿದಿರೆ ಶಾಖೆಯ ಶಾಖಾ ಬೆಂಬಲ ನಿರ್ದೇಶಕರಾದ ಆಂಡ್ರ್ಯೂ ಡಿಸೋಜ ಸ್ವಾಗತಿಸಿದರು. ಜೇಸನ್ ಪಿರೇರ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.

