ಬಿ.ಕಾಂ., ಬಿಬಿಎ/ಬಿಬಿಎಂ, ಎಂಬಿಎ ಪದವೀಧರರಿಗೆ ತರಬೇತಿ ನೀಡಿ ಲೈಸೆನ್ಸ್ ನೀಡುವ ಚಿಂತನೆ: ಸಚಿವ ಲಕ್ಷ್ಮಣ ಸವದಿ
ಬೆಂಗಳೂರು: ರಾಜ್ಯದ ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ (ಆಡಿಟ್) ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಸಹಕಾರಿ ಸಂಘಗಳ ಆಡಿಟ್ ಕಾರ್ಯಕ್ಕೆ ಅರ್ಹ ಯುವಕರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಬಿ.ಕಾಂ., ಬಿಬಿಎ/ಬಿಬಿಎಂ ಹಾಗೂ ಎಂಬಿಎ ಪದವೀಧರರಿಗೆ ಆರು ತಿಂಗಳ ಉಚಿತ ಲೆಕ್ಕಪರಿಶೋಧನಾ ತರಬೇತಿ ನೀಡುವ ಪ್ರಸ್ತಾವವಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ನಿಯಮಾನುಸಾರ ಲೈಸೆನ್ಸ್ ನೀಡಿ ಸಹಕಾರಿ ಸಂಘಗಳ ಆಡಿಟ್ ಮಾಡಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಸುಮಾರು ಎಂಟು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆಯಿದ್ದು, ಇದರಿಂದ ಸಹಕಾರಿ ಸಂಘಗಳ ಲೆಕ್ಕಪರಿಶೋಧನೆ ವಿಳಂಬವಾಗುವುದನ್ನು ಕಡಿಮೆ ಮಾಡುವುದರ ಜೊತೆಗೆ ಲೆಕ್ಕಪರಿಶೋಧನಾ ಕ್ಷೇತ್ರದಲ್ಲಿ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಸಹಕಾರಿ ಸಂಘಗಳ ಮಾಹಿತಿಗೆ QR ಕೋಡ್
ಸಹಕಾರಿ ಸಂಘಗಳ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ QR ಕೋಡ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಪ್ರತಿ ಸಂಘದ ಪ್ರಮುಖ ಹಣಕಾಸು ಮಾಹಿತಿಯನ್ನು QR ಕೋಡ್ ಮೂಲಕ ಸದಸ್ಯರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶವಿದೆ. ಠೇವಣಿ, ಸಾಲ, ದುಡಿಯುವ ಬಂಡವಾಳ, ಬಾಕಿ ಸೇರಿದಂತೆ ಸಂಘದ ಪ್ರಮುಖ ಮಾಹಿತಿಯನ್ನು ಸದಸ್ಯರು ಸುಲಭವಾಗಿ ತಿಳಿದುಕೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ.

ಶಿಕ್ಷಣ ನಿಧಿಯ ಬಳಕೆಗೆ ಒತ್ತು
ಸಹಕಾರಿ ಸಂಘಗಳು ತಮ್ಮ ಲಾಭದ ಶೇ.2ರಷ್ಟು ಮೊತ್ತವನ್ನು ಶಿಕ್ಷಣ ನಿಧಿಗೆ ನೀಡುತ್ತಿವೆ. ಈ ಮೂಲಕ ಸಂಗ್ರಹವಾಗಿರುವ ಸುಮಾರು ₹70–80 ಕೋಟಿ ನಿಧಿಯನ್ನು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ಬಳಸುವ ಚಿಂತನೆಯೂ ಇದೆ ಎಂದು ಸಚಿವರು ತಿಳಿಸಿದ್ದಾರೆ.
ನೇಮಕಾತಿಯಲ್ಲಿ ಮೆರಿಟ್ಗೆ ಆದ್ಯತೆ
ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗಳು, ಡಿಸಿಸಿ ಬ್ಯಾಂಕ್ಗಳು, ಅಪೆಕ್ಸ್ ಬ್ಯಾಂಕ್ ಹಾಗೂ ಕೆಎಂಎಫ್ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳ ನೇಮಕಾತಿಯಲ್ಲಿ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಆಡಳಿತದ ಗುಣಮಟ್ಟ, ಪಾರದರ್ಶಕತೆ ಮತ್ತು ವೃತ್ತಿಪರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಂದಿನಿ ಹಾಲಿನ ದರ ಏರಿಕೆ 4-5 ದಿನಗಳಲ್ಲಿ ನಿರ್ಧಾರ:
ನಂದಿನಿ ಹಾಲಿನ ದರ ಹೆಚ್ಚಿಸುವ ವಿಚಾರದ ಕುರಿತು ಮಾತನಾಡಿದ ಲಕ್ಷ್ಮಣ ಸವದಿ, ಹಾಲು ಒಕ್ಕೂಟಗಳು ಪ್ರತಿ ಲೀಟರ್ಗೆ ₹8ರಿಂದ ₹10ರಷ್ಟು ದರ ಹೆಚ್ಚಿಸುವಂತೆ ಮನವಿ ಸಲ್ಲಿಸಿವೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. 4-5 ದಿನಗಳಲ್ಲಿ ಹಾಲಿನ ದರ ನಿಗದಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ದರ ನಿಗದಿಪಡಿಸುವಾಗ ಗ್ರಾಹಕರು, ಹಾಲು ಉತ್ಪಾದಕರು ಹಾಗೂ ಸಹಕಾರಿ ಸಂಘಗಳ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದರು. ಕಬ್ಬಿನ ದರ ಹೆಚ್ಚಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಎಫ್ಆರ್ಪಿ ಹಾಗೂ ಎಂಎಸ್ಪಿ ನಿಗದಿಪಡಿಸುವಾಗ ಗ್ರಾಹಕರು, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತವನ್ನು ಪರಿಗಣಿಸಬೇಕು ಎಂದು ಸವದಿ ಹೇಳಿದರು.


