ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ
ವಿಟ್ಲ: ಸಿಬ್ಬಂದಿಯ ಅರ್ಪಣಾ ಮನೋಭಾವದಿಂದ ಸಂಘವು ಯಶಸ್ವಿಯಾಗಿ ಮುನ್ನಡೆದಿದೆ. ಸೇವೆಯೇ ಸಾಧನೆಯಾಗಬೇಕು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ರೈತರ ಒಳಿತಿಗಾಗಿ ಶ್ರಮಿಸುತ್ತಿದೆ. ಸಹಕಾರಿ ಸಂಘದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಭಾನುವಾರ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 15ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯೀ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ, ಗುರುಗಳ ಸಂಕಲ್ಪದಿಂದ ಸಹಕಾರಿ ಸಂಘವು ಅತ್ಯಂತ ವೇಗವಾಗಿ 24 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ. ಸಮರ್ಥ ನಾಯಕತ್ವದ ಅಧ್ಯಕ್ಷರು, ನಿರ್ದೇಶಕ ಮಂಡಳಿ, ಸಿಇಒ ಮತ್ತು ಸಿಬ್ಬಂದಿಗಳ ಶ್ರಮದಿಂದ ಸಂಘ ಅಭಿವೃದ್ಧಿ ಹೊಂದಿರುವುದು ಸಂತಸವಾಗಿದೆ ಎಂದರು.
ಸಂಘದ ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಂಘವು 831 ಕೋಟಿ ರೂ. ವ್ಯವಹಾರ ದಾಖಲಿಸಿದೆ. 2025-26ನೇ ಸಾಲಿನಲ್ಲಿ 51,323 ಸದಸ್ಯರಿಂದ 2.53 ಕೋಟಿ ರೂ. ಶೇರು ಮೊತ್ತ ಸಂಗ್ರಹ ಮಾಡಿ, 458.71 ಕೋಟಿ ಠೇವಣಿ ಸಂಗ್ರಹ ಮಾಡಿದೆ. 7.56 ಕೋಟಿ ರೂ. ಲಾಭ ಗಳಿಸಿದ್ದು, ಎ ಗ್ರೇಡ್ ಅರ್ಹತೆ ಪಡೆದಿದೆ. ಸದಸ್ಯರಿಗೆ ಶೇ.21 ಲಾಭಾಂಶ ನೀಡಲಾಗುವುದು. ಮುಂದಿನ ದಿನಗಳಲ್ಲಿ ನೆಲ್ಯಾಡಿ, ಪಂಜ, ಗುತ್ತಿಗಾರು ಮತ್ತು ಮುಡಿಪುಗಳಲ್ಲಿ ಶಾಖೆಗಳನ್ನು ತೆರೆಯಲಿದೆ. ಸೆ.20ರಂದು ಗ್ರಾಮ ವಿಕಾಸ ಯೋಜನೆಯ ಬೆಳ್ಳಿ ಹಬ್ಬದ ಆಚರಣೆ ನಡೆಯಲಿದೆ ಎಂದು ಹೇಳಿದರು.

ಲೆಕ್ಕಪರಿಶೋಧಕ ಬಾಲಸುಬ್ರಹ್ಮಣ್ಯ ಎನ್., ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಆಡಳಿತ ಮಂಡಳಿಯ ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರಾನಾಥ ಶೆಟ್ಟಿ, ಶಾರದಾಮಣಿ, ಸರಿತಾ ಅಶೋಕ್, ಮೋನಪ್ಪ ಪೂಜಾರಿ ಕೆರೆಮನೆ, ಸೋಮಪ್ಪ ನಾಯ್ಕ್ ಕಡಬ, ಗಣೇಶ್ ಅತ್ತಾವರ, ಭವಾನಿಶಂಕರ್, ಅಶೋಕ್ ಕುಮಾರ್ ಯು.ಎಸ್, ಜಯಪ್ರಕಾಶ್ ರೈ ನೂಜಿಬೈಲು ಉಪಸ್ಥಿತರಿದ್ದರು.
ಉತ್ತಮ ನಿರ್ವಹಣೆ ತೋರಿದ ಶಾಖೆ ಮತ್ತು ಶಾಖಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಐವರು ಅದೃಷ್ಟವಂತ ಸದಸ್ಯರಿಗೆ ವಿಶೇಷ ಬಹುಮಾನ ನೀಡಲಾಯಿತು. ನಿರ್ದೇಶಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವರದಿ ವಾಚಿಸಿದರು. ನಿರ್ದೇಶಕ ಯು.ದೇವಪ್ಪ ನಾಯಕ್ ಉಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕಿ ಪವಿತ್ರ ಪ್ರಸಾದ್ ನಿರೂಪಿಸಿದರು.











