ಉಡುಪಿ: ಕೇಂದ್ರದಲ್ಲಿ ಸಹಕಾರ ಸಚಿವಾಲಯವನ್ನು ಆರಂಭಿಸಿ ಐದು ವರ್ಷಗಳಾಗಿರುವ ಕಾರಣ ಮುಂದೊಡ್ಡಿ ಕೇಂದ್ರ ಸರ್ಕಾರವು ಜೂನ್ 29ರಿಂದ ಜುಲೈ 6ರ ತನಕ ಸಹಕಾರಿ ಸಪ್ತಾಹವನ್ನು ಆಚರಿಸಲು ಕರೆ ಕೊಟ್ಟಿರುವುದನ್ನು ಆಕ್ಷೇಪಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ಸಹಕಾರಿ ಧುರೀಣ ಅಲೆವೂರು ಹರೀಶ್ ಕಿಣಿಯವರು, ಬಿಜೆಪಿ ಸರ್ಕಾರವು ಜವಾಹರಲಾಲ್ ನೆಹರೂ ಅವರನ್ನು ಅವಮಾನಿಸುವ ಚಾಳಿಯನ್ನು ಮುಂದುವರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಸ್ವತಂತ್ರ ಭಾರತದ ಅಭ್ಯುದಯದಲ್ಲಿ ಸಹಕಾರ ಕ್ಷೇತ್ರದ ಮಹತ್ವವನ್ನು ಮನಗಂಡ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಿದ್ದರು. ಆ ಕಾರಣಕ್ಕಾಗಿ ಅವರ ಜನ್ಮದಿನಾಂಕವಾದ ನವೆಂಬರ್ 14ರಿಂದ ಒಂದು ವಾರಗಳ ಕಾಲ ರಾಷ್ಟ್ರಾದ್ಯಂತ ಸಹಕಾರ ಸಪ್ತಾಹವು ಏಳು ದಶಕಗಳಿಂದ ಆಚರಿಸಲಾಗುತ್ತಿದೆ.
ಆದರೆ ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೂತನ ಸಹಕಾರಿ ಸಚಿವಾಲಯ ಆರಂಭಿಸಿ ಐದು ವರ್ಷ ಕಳೆದಿರುವ ಹೆಸರಿನಲ್ಲಿ ಜೂನ್ 29ರಿಂದ ಜುಲೈ 6ರವರೆಗೆ ರಾಷ್ಟ್ರಾದ್ಯಂತ ಸಹಕಾರ ಸಪ್ತಾಹ ಆಚರಿಸಲು ನಿರ್ಧರಿಸಿದೆ. ಈ ದಿನಾಂಕ ಬದಲಾವಣೆಯು ಬಿಜೆಪಿ ಸರ್ಕಾರದ ನೆಹರೂ ಅವರನ್ನು ಅವಮಾನಿಸುವ ಮುಂದುವರಿದ ಚಾಳಿ. ಅವರ ಕೊಡುಗೆಗಳನ್ನು ಕ್ಷೀಣಗೊಳಿಸಲು ನಡೆಸಿರುವ ಹುನ್ನಾರ ಇದರಲ್ಲಿ ಅಡಗಿದೆ. ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಿ VB GRAMGI ಎಂದು ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಅಳಿಸಲು ನಡೆಸಿದ ಪ್ರಯತ್ನದ ಇನ್ನೊಂದು ಮಜಲು. ಆದುದರಿಂದ ಸಹಕಾರ ಸಪ್ತಾಹದ ದಿನಾಂಕ ಬದಲಿಸದೇ ನವೆಂಬರ್ 14ರಂದೇ ಆರಂಭಿಸಬೇಕು ಎಂದು ಮನವಿ ಮಾಡಿ ಈ ಕುರಿತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರಿಗೂ ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜ್ಯ ಸಹಕಾರ ಸಂಘಗಳ ನಿಬಂಧಕರು, ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಯೂನಿಯನ್‌ಗಳಿಗೆ ನೀಡಿರುವ ಆದೇಶವನ್ನು ಹಿಂಪಡೆಯುವ ಸೂಚನೆ ನೀಡುವಂತೆ ಅವರು ವಿನಂತಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com







