ಕಲಬುರಗಿ ಸಹಕಾರ ಭಾರತಿ ಜಿಲ್ಲಾ ಅಭ್ಯಾಸ ವರ್ಗ ಉದ್ಘಾಟಿಸಿ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯ
ಕಲಬುರಗಿ: ಸಹಕಾರ ಭಾರತಿ ಸಂಘಟನೆಯು ಸಂಘಟನಾತ್ಮಕವಾಗಿ ಬಲಶಾಲಿಯಾದಾಗ ಮಾತ್ರ ಸಹಕಾರ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಿ ಐದು ವರ್ಷಗಳು ಕಳೆದಿದ್ದು, ಹೊಸ ಸಹಕಾರಿ ನೀತಿ ಮತ್ತು ಸಹಕಾರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಾಗಿ ಕೇಂದ್ರ ಸರಕಾರ ಹಲವಾರು ಕಾರ್ಯಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಸಹಕಾರ ಭಾರತಿ ಸಂಘಟನಾತ್ಮಕವಾಗಿ ಬಲಶಾಲಿಯಾದಾಗ ಮಾತ್ರ ಸಹಕಾರ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ತಿಳಿಸಿದರು.
https://chat.whatsapp.com/FCEnlTkAKCC0MGPhXtX4i4
ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರ ಪ್ರಾಂತೀಯ ಕಚೇರಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಕಲಬುರಗಿ ಸಹಕಾರ ಭಾರತಿ ಜಿಲ್ಲಾ ಅಭ್ಯಾಸ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಲಬರಗಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ನೂತನ ಪೂರ್ಣ ಪ್ರಮಾಣದ ಜಿಲ್ಲಾಸಮಿತಿ ರಚನೆಯಾಗಿ, ಪ್ಯಾಕ್ಸ್, ಮಿಲ್ಕ್, ಗೃಹ ನಿರ್ಮಾಣ ಮತ್ತು ಗ್ರಾಹಕ ಪ್ರಕೋಷ್ಟಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತ್ಯೇಕವಾದ ಜಿಲ್ಲಾ ಮಹಿಳಾ ಸಮಿತಿ ರಚನೆಗೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಬುರಗಿ ನಗರದ ಜಗತ್ ಸರ್ಕಲ್‌ನಲ್ಲಿರುವ ಆಮಂತ್ರಣ ಹೋಟೆಲ್ ಹಿಂಭಾಗದ ಜಿಲ್ಲಾ ಸಹಕಾರ ಭಾರತಿಯ ನೂತನ ಜಿಲ್ಲಾ ಕಚೇರಿ ಉದ್ಘಾಟಿಸಿ, ಭಾರತ ಮಾತಾ ಪೂಜನ ಮತ್ತು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನೂತನ ಜಿಲ್ಲಾ ಕಚೇರಿ ಕಾರ್ಯ ಆರಂಭದ ಬಳಿಕ ಸಹಕಾರ ಭಾರತಿ ಚಟುವಟಿಕೆಗಳಿಗೆ ಇನ್ನಷ್ಟು ವೇಗ ಸಿಗಲಿ ಎಂದು ಶುಭ ಹಾರೈಸಿದರು.

ಕಲಬುರಗಿ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷರಾದ ಕೆ.ಬಿ.ಶಟಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರ ಪ್ರಮುಖ್ ಕೃಷ್ಣ ಜೋಶಿ ಮಾತನಾಡಿ, ಪ್ರಸ್ತುತ ಸಹಕಾರ ಕ್ಷೇತ್ರದ ಬಗ್ಗೆ ಜನಸಾಮಾನ್ಯರಿಗೆ ಇರುವ ಅಪನಂಬಿಕೆಯನ್ನು ತೊಡೆದು ಹಾಕಿ, ಪಾರದರ್ಶಕ ಮತ್ತು ಉತ್ತಮ ಪ್ರಾಮಾಣಿಕ ಆಡಳಿತದ ಮೂಲಕ ಸಹಕಾರ ಭಾರತಿ ಕಾರ್ಯಕರ್ತರು ಸಂಘಟನೆ ಮತ್ತು ತಾವು ಪ್ರತಿನಿಧಿಸುತ್ತಿರುವ ಸಂಸ್ಥೆಯ ಗೌರವ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಶಿವಮೊಗ್ಗ ಸಾಗರದ ಬಿ.ವಿ.ರವೀಂದ್ರನಾಥ್ ಮತ್ತು ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿ ರಾಜಕುಮಾರ ಮಾನ್ವಿ, ರಾಜ್ಯ ಕಾನೂನು ಪ್ರಕೋಷ್ಟದ ಪ್ರಮುಖರಾದ ಸಂಜೀವ ಮಹಾಜನ್, ಜಿಲ್ಲಾ ಮಹಿಳಾ ಪ್ರಮುಖ ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ್ ಉಪಸ್ಥಿತರಿದ್ದರು. ಸಹಕಾರ ಭಾರತಿ ರಾಜ್ಯ ಗ್ರಾಹಕ ಪ್ರಕೋಷ್ಟದ ಸಹ ಸಂಚಾಲಕರಾದ ಎಸ್ ಎಸ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಸಹಕಾರ ಭಾರತಿ ರಾಷ್ಟ್ರೀಯ ಮಹಿಳಾ ಸಹಕಾರಿ ಪ್ರಕೋಷ್ಟದ ಪ್ರಮುಖರಾದ ಶೈಲಜಾ ತಪಲಿ ಸ್ವಾಗತಿಸಿ, ಜಿಲ್ಲಾ ಪದಾಧಿಕಾರಿ ಶಿವಶರಣಪ್ಪ ವಂದಿಸಿದರು. ಮಲ್ಲಮ್ಮ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




