ಬಡ ಕುಟುಂಬಕ್ಕೆ ಮನೆ ಕೊಡುಗೆ ಅದ್ಭುತ ಮಾದರಿ ಕಾರ್ಯ; ಶಶಿಕುಮಾರ್ ರೈ ಬಾಲ್ಯೊಟ್ಟು ಶ್ಲಾಘನೆ
ಕಾಣಿಯೂರು: ಸಮಾಜಮುಖ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ವಿವಿಧ ಯೋಜನೆಗಳನ್ನು ಹಾಕಿಕೊಂಡು ಎಲ್ಲಾ ರೈತಾಪಿ ವರ್ಗದವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿರುವಂತಹ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಒಂದು ಮಾದರಿ ಸಂಘವಾಗಿ ಹೊರಹೊಮ್ಮಿದೆ. ಯಾವುದೇ ರೀತಿಯಿಂದಲೂ ಸರಕಾರಿ ಯೋಜನೆಯಡಿಯಲ್ಲಿ ಸವಲತ್ತುಗಳನ್ನು ನೀಡುವುದಕ್ಕೆ ಸಾಧ್ಯವಾಗದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವ ಸಂಘದ ಕೆಲಸ ಕಾರ್ಯ ಅದ್ಭುತವಾಗಿದೆ ಎಂದು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವದ ಸವಿನೆನಪಿಗೆ ಬಡ ಕುಟುಂಬಕ್ಕೆ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ ಮತ್ತು ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ (ನಿರ್ವಹಣೆ ಪ್ರಸಾದ್ ನೇತ್ರಾಲಯ), ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ವತಿಯಿಂದ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮನೆಯ ಕೀ ಹಸ್ತಾಂತರ ಮಾಡಿ ಮಾತನಾಡಿದರು.
ಸಹಕಾರ ರಂಗ ಒಬ್ಬ ಮನುಷ್ಯನ ಚಿಂತನೆ ಮಾಡಿದರೆ ಏನು ಮಾಡಬಹುದೆಂಬುದನ್ನು ಚಾರ್ವಾಕ ಪ್ರಾಥಮಿಕ ಸಹಕಾರ ಸಂಘ ತೋರಿಸಿಕೊಟ್ಟಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸುವ ಕೆಲಸವನ್ನು ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ನೇತೃತ್ವದಲ್ಲಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಮಾಡಿದ್ದಾರೆ ಎಂಬುದನ್ನು ನಾವು ಮನಗಂಡಿದ್ದೇವೆ. ಸಂಘವು ಶೇಕಡಾ 100 ಸಾಲ ವಸೂಲಾತಿ ಸಾಧನೆ ಮಾಡುತ್ತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಸಂಘದ ಸವಲತ್ತುಗಳು ಸಿಗುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ನೂರು ವರ್ಷಗಳನ್ನು ಪೂರೈಸಿರುವ ಜಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಜವಾಬ್ದಾರಿ ತೆಗೆದುಕೊಂಡು ಯಾವ ರೀತಿಯಲ್ಲಿ ಕಾರ್ಯಕ್ರಮ ಮಾಡಿಕೊಡಬಹುದೆಂಬುದನ್ನು ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ನೇತೃತ್ವದಲ್ಲಿ ಆಡಳಿತ ಮಂಡಳಿಯವರು ಸಂಘದ ಶತಮಾನೋತ್ಸವ ಕಾರ್ಯಕ್ರಮದ ಮುಖಾಂತರ ಜಿಲ್ಲೆಗೆ, ಎಲ್ಲಾ ಸಹಕಾರ ಸಂಘಗಳಿಗೆ ತೋರಿಸಿಕೊಟ್ಟಿದ್ದಾರೆ. ಸರಕಾರದಿಂದ ಈ ಕುಟುಂಬಕ್ಕೆ ಯಾವುದೇ ಸವಲತ್ತು ಸಿಗದಿರುವುದನ್ನು ಮನಗಂಡ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಡುವಂತಹ ಕೆಲಸ ಮಾಡಿರುವುದು ಶ್ಲಾಘನೀಯ. ಗಣೇಶ್ ಉದನಡ್ಕ ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘವನ್ನು ಗಟ್ಟಿ ಮಾಡುವಂತಹ ಕೆಲಸ ಮಾಡಿದ್ದಾರೆ. ಸಂಘ ಬೆಳೆದಾಗ ಜನಪರ ಕಾರ್ಯಕ್ರಮ ಸಂಘಟಿಸಲು ಸಾಧ್ಯವಾಗುತ್ತದೆ ಎಂದರು.
ಕಾಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ ಮಾತನಾಡಿ, ಗಣೇಶ್ ಉದನಡ್ಕ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿಯೂ ಸಾಕಷ್ಟು ಸಹಕಾರ ನೀಡುತ್ತಿದ್ದರು. ಇದೀಗ ಸಹಕಾರ ಸಂಘದ ಮುಖಾಂತರ ರೈತಾಪಿ ವರ್ಗದವರ ಜೊತೆ ತೊಡಗಿಸಿಕೊಂಡು ಜನರಿಗೆ ಸವಲತ್ತುಗಳನ್ನು ನೀಡುತ್ತಾ ಸಂಘದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮ ಪಂಚಾಯತ್ ವತಿಯಿಂದ ಮಾಡಬೇಕಾದ ಇಂತಹ ಕಾರ್ಯಕ್ರಮಗಳನ್ನು ಸಹಕಾರ ಸಂಘದ ಮೂಲಕ ಮಾಡಿರುವುದಲ್ಲದೆ ಶ್ಲಾಘನೀಯ ಎಂದವರು ಸಂಘದ ಅಧ್ಯಕ್ಷ ಗಣೇಶ್ ಉದನಡ್ಕರವರ ಕಾರ್ಯವೈಖರಿ ಮೆಚ್ಚಲೇಬೇಕು ಎಂದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು ಮಾತನಾಡಿ, ನೂರು ವರ್ಷಗಳನ್ನು ಪೂರೈಸಿದ ಸಂಘದ ಶತಮಾನೋತ್ಸವ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ, ಜಿಲ್ಲೆಗೆ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದರು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, 1924ರಲ್ಲಿ ಪ್ರಾರಂಭಗೊಂಡ ಸಂಘವು 2024ರಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ನೂರು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ರೈತರಿಗೆ ಕಾರ್ಯಕ್ರಮ ಸದುಪಯೋಗವಾಗಿ ಇರಬೇಕು ಎಂಬ ದೃಷ್ಟಿಕೋನವನ್ನು ಸಂಘದ ಆಡಳಿತ ಮಂಡಳಿ ಇಟ್ಟುಕೊಂಡು ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಮೂರು ಗ್ರಾಮದ ಎಲ್ಲರೂ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಯಾವುದೇ ದಾಖಲೆಗಳು ಇಲ್ಲದೇ ಇರುವ ಬಡಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಕೊಡಬೇಕೆಂಬ ಯೋಚನೆ ಶತಮಾನದ ಸವಿನೆನಪಿಗಾಗಿ ಸಂಘ ಹಾಕಿಕೊಂಡಿತ್ತು. ಇದೀಗ ಸಾಕಾರಗೊಂಡು ಮನೆ ಹಸ್ತಾಂತರ ಕಾರ್ಯಕ್ರಮ ನಡೆದಿದೆ. ಸಂಘವು ಶೇಕಡಾ 100 ಸಾಲ ವಸೂಲಾತಿ ಸಾಧನೆ ಮಾಡಿದ್ದು, ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಸಂಘವು ಎಲ್ಲಾ ವ್ಯವಹಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಸೂರು ಒದಗಿಸುವ ಮೂಲಕ ಬಡ ಕುಟುಂಬಕ್ಕೆ ಬೆಳಕು
ಟಾರ್ಪಲ್ ಹೊದಿಸಿದ್ದ ಗುಡಿಸಲನಲ್ಲಿ ವಾಸವಾಗಿದ್ದ ಬಡ ಕುಟುಂಬಕ್ಕೆ ಸೂರು ಒದಗಿಸುವ ಮೂಲಕ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆ ಮನೆಗೆ ಬೆಳಕಾಗಿದೆ. ಚಾರ್ವಾಕ ಗ್ರಾಮದ ಅಜೀಲು ಎಂಬಲ್ಲಿ ವಾಸವಾಗಿದ್ದ ದೇವಕಿ ಅವರ ಕುಟುಂಬವು ಹಲವು ವರ್ಷಗಳಿಂದ ಟಾರ್ಪಲ್ ಹೊದಿಸಿದ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಯಾವುದೇ ದಾಖಲೆ ಇಲ್ಲದ ಕಾರಣ ಸರಕಾರದ ಯೋಜನೆಯನ್ನು ಪಡೆಯಲು ಸಾಧ್ಯವಾಗದ್ದನ್ನು ಗಮನಿಸಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನಿರ್ಮಾಣ ಮಾಡಿದ ಮನೆ ಹಸ್ತಾಂತರ ಕಾರ್ಯಕ್ರಮ ಮೇ 26ರಂದು ನಡೆಯಿತು. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ದೇವಕಿ ಮತ್ತು ಮನೆಯವರಿಗೆ ಕೀ ಹಸ್ತಾಂತರ ಮಾಡಿದರು.
ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕಿ ಚಂದ್ರಾವತಿ ಅಧಿಕಾರ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ರಮೇಶ್ ಉಪ್ಪಡ್ಕ, ಪರಮೇಶ್ವರ ಅನಿಲ, ಅನಂತ ಕುಮಾರ್ ಜೈಲಂಗಡಿ, ವಿಶ್ವನಾಥ ದೇವಿನಗರ, ಸುಂದರ ಗೌಡ ದೇವಸ್ಯ, ಲೋಕೇಶ್ ಗೌಡ ಆತಾಜೆ, ದಿವಾಕರ ಮರಕ್ಕಡ, ವೀಣಾ ಅಂಬುಲ, ಶೀಲಾವತಿ ಮುಗರಂಜ, ಬಾಲಕೃಷ್ಣ ಗೌಡ ಇಡ್ಯಡ್ಕ, ಸಿಬ್ಬಂದಿ ವಾಣಿ ಅತಿಥಿಗಳನ್ನು ಗೌರವಿಸಿದರು. ಮನೆ ನಿರ್ಮಾಣ ಸಂದರ್ಭದಲ್ಲಿ ಸಹಕರಿಸಿದ ಜತ್ತಪ್ಪ ಗೌಡ ಉದಲಡ್ಡ, ವಿಶ್ವನಾಥ ಖಂಡಿಗ, ಪುನೀತ್ ಮರ್ಲಾಣಿ ಅವರನ್ನು ಗೌರವಿಸಲಾಯಿತು. ವರ್ಷಿಕಾ ದಲಾರಿ, ವರ್ಣಿಕ ದಲಾರಿ ಪ್ರಾರ್ಥಿಸಿದರು. ಚಾರ್ವಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವಂದಿಸಿದರು. ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

