ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಭಿಪ್ರಾಯ
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳ ಪೈಕಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸರಕಾರದಿಂದ ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಿದ ಕೀರ್ತಿ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಅವರಿಗೆ ಸಲ್ಲುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹಳೆನೇರೆಂಕಿ ಶಾಖಾ ಕಛೇರಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಅಭಿವೃದ್ಧಿಯಲ್ಲಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಮಾದರಿಯಾಗಿದೆ. ಹಲವಾರು ವರ್ಷಗಳಿಂದ ನಿರಂತರವಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ ಪಡೆಯುತ್ತ ಬಂದಿದೆ. ಪುತ್ತೂರು ತಾಲೂಕಿನಲ್ಲಿ ಪ್ರಥಮವಾಗಿ ರಾಜ್ಯ ಅಪೆಕ್ಸ್ ಬ್ಯಾಂಕಿನ ಪ್ರಶಸ್ತಿ ಪಡೆದ ಸಂಘ ಆಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘ. ಈ ಸಂಘದ ಪ್ರಧಾನ ಕಛೇರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಂಘದ ಕಚೇರಿಯಂತೆ ಎಲ್ಲಾ ಸೌಲಭ್ಯವನ್ನು ಹೊಂದಿದೆ. ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಅಭಿವೃದ್ಧಿಗಾಗಿ ಸರಕಾರದಿಂದ ಅತೀ ಹೆಚ್ಚು ಅನುದಾನ ತರುವುದರೊಂದಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಕೂಡ ಹೆಚ್ಚು ಅನುದಾನ ಪಡೆದು ಸದ್ಭಳಕೆ ಮಾಡಿ ಸಂಸ್ಥೆಯನ್ನು ಬೆಳಗಿಸುವ ಕಾರ್ಯ ಮಾಡಿದ್ದಾರೆ. ಹಾಗಾಗಿ ಇದೊಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಮಾತನಾಡಿ, ಹಳೆನೇರೆಂಕಿ ಭಾಗದ ಸದಸ್ಯರು ಸಂಘದ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕು ಎಂದು ಬಹಳ ವರ್ಷದಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದಾರೆ. ಆದರೆ ಇಲ್ಲಿ ನಿವೇಶನದ ಕೊರತೆ ಇತ್ತು. ಅದು ನಿವಾರಣೆಯಾಗಿ ಇದೀಗ ನೂತನ ಕಟ್ಟಡ ನಿರ್ಮಾಣವಾಗಿದೆ. ಅದರಲ್ಲಿದ್ದ ಸಮಸ್ಯೆಗಳನ್ನು ನಿವಾಸಿಕೊಂಡು ಇದೀಗ ಲೋಕಾರ್ಪಣೆ ಮಾಡಲಾಗಿದೆ. ಇಲ್ಲಿ ಬ್ಯಾಂಕಿಂಗ್ ವ್ಯವಹಾರದಲ್ಲೇ ಲಾಭದಾಯಕವಾಗಿ ಮಾಡಲು ಸಾಧ್ಯವಿಲ್ಲ, ಹಾಗಾಗಿ ಶಾಖೆಯಲ್ಲಿ ಬೇರೆ ವ್ಯವಹಾರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಇದಕ್ಕೆ ಎಲ್ಲಾ ರೈತಾಪಿ ವರ್ಗದ ಸಹಕಾರ ಬೇಕು ಎಂದು ಮನವಿ ಮಾಡಿದರು.
ಪುತ್ತೂರು ಮಾಸ್ಟರ್ ಪ್ಲಾನರಿಯ ಮಾಲೀಕ ಆನಂದ ಎಸ್.ಕೆ. ಮುಖ್ಯ ಅತಿಥಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕ ಶರತ್ ಡಿ, ಸಂಘದ ನಿರ್ದೇಶಕರಾದ ಕೇಶವ ಗೌಡ ಆಲಡ್ಕ, ಅಶೋಕ್ ಕೊಯಿಲ, ಅಶೋಕ್ ಎಚ್, ರತ್ನಾ ಬಿ.ಕೆ., ವಿಜಯ ಎಸ್ ಅಂಬಾ, ಗಾಯತ್ರಿ ಸುರೇಶ್, ಉದಯ ಸಾಲ್ಯಾನ್, ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಮಾಜಿ ಉಪಾಧ್ಯಕ್ಷ ರಮೇಶ್ ಎನ್. ಸಿ., ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಗೌಡ ಪಜ್ಜಡ್ಕ, ಪ್ರಶಾಂತ್ ರೈ ಮನವಳಿಕೆ, ಮಾಜಿ ಸಹಾಯಕ ಕಾರ್ಯನಿರ್ವಹಣಾದಿಕಾರಿ ಮುತ್ತಪ್ಪ ಪುಜಾರಿ, ವ್ಯವಸ್ಥಾಪಕ ಆನಂದ ಗೌಡ ಪಜ್ಜಡ್ಕ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರವಿರಾಜ್ ಶೆಟ್ಟಿ, ಶಾಖಾ ವ್ಯವಸ್ಥಾಪಕರಾದ ಆಶಾಲತಾ, ರಾಧಾಕೃಷ್ಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್ ವಂದಿಸಿದರು. ಶಾಖಾ ವ್ಯವಸ್ಥಾಪಕ ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

