ಪಕ್ಷಿಕೆರೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆರೋಗ್ಯ ಶಿಬಿರ ಉದ್ಘಾಟಿಸಿ ಧನಂಜಯ ಶೆಟ್ಟಿಗಾರ್ ಅಭಿಪ್ರಾಯ
ಮಂಗಳೂರು: ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬೇಕು. ನಾವು ಆರೋಗ್ಯವಾಗಿ ಇದ್ದರೆ ಸಮಾಜವೂ ಆರೋಗ್ಯ ಪೂರ್ಣವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ವಿವಿಧ ಸಂಘ-ಸಂಸ್ಥೆಗಳ ಜೊತೆ ಸೇರಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಶಿಬಿರದ ಪ್ರಯೋಜನ ಊರಿಗೆ ಸಿಗಲಿ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಇನ್ನಷ್ಟು ಬೆಳವಣಿಗೆ ಕಾಣಲಿ ಎಂದು ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಪಕ್ಷಿಕೆರೆಯ ಕೋರ್ದಬ್ಬು ದೈವಸ್ಥಾನದ ಬಳಿಯ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಕ್ಷಿಕೆರೆ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇಲ್ಲಿನ ವೈದ್ಯರ ತಂಡದವರಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಮಂಗಳೂರು ಇಲ್ಲಿನ ಸಮುದಾಯ ದಂತ ಆರೋಗ್ಯ ಶಿಬಿರದ ಮುಖ್ಯಸ್ಥೆ ಡಾ| ರಮ್ಯ ಶೆಣೈ ಮಾತನಾಡಿ, ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 14 ವರ್ಷಗಳಿಂದ ನಿರಂತರವಾಗಿ ಆರೋಗ್ಯ ಶಿಬಿರ ನಡೆಸಿಕೊಂಡು ಬರುತ್ತಿದೆ. ಇದು ಸಂಘದ 108ನೇ ಉಚಿತ ವೈದ್ಯಕೀಯ ಶಿಬಿರ. ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ನಮ್ಮಲ್ಲಿ ಎಷ್ಟೇ ಹಣವಿದ್ದರೂ ಆರೋಗ್ಯ ಚೆನ್ನಾಗಿರದಿದ್ದರೆ ಪ್ರಯೋಜನವಿಲ್ಲ. ಹಾಗಾಗಿ ಆರೋಗ್ಯ ಸ್ಥಿತಿಯ ಬಗ್ಗೆ ಮೊದಲಿಗೆ ತಿಳಿದುಕೊಂಡರೆ, ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಬಹುದು. ಜನರ ಈ ಬಿಡುವಿಲ್ಲದ ದಿನಚರಿಯಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಜಾದಿನದಲ್ಲಿ ಇಂಥ ಶಿಬಿರಗಳನ್ನು ಆಯೋಜಿಸಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಯತ್ನ ಮಾಡಲಾಗುತ್ತಿದೆ. ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ರಮಾನಾಥ ಸನಿಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಎಸ್.ಕೋಡಿ ತೋಕೂರು ಇದರ ಅಧ್ಯಕ್ಷ ನವೀನ್ ಕುಮಾರ್, ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಧನರಾಜ್ ಅಂಚನ್ ಹಾಗೂ ವಿನಾಯಕ ಮಹಿಳಾ ಮಂಡಳಿಯ ಅಧ್ಯಕ್ಷೆ ಧನಲಕ್ಷ್ಮೀ ಶೆಟ್ಟಿಗಾರ್, ಹರಿಪಾದ ಜಾರಂದಾಯ ಯುವಕ ಮಂಡಲದ ಉಪಾಧ್ಯಕ್ಷ ಯಾದವ ಸಾಲ್ಯಾನ್, ಕೋರ್ದಬ್ಬು ದೈವಸ್ಥಾನದ ಗುರಿಕಾರ ಸತೀಶ್ ಸಿ.ಅಮೀನ್, ಪಕ್ಷಿಕೆರೆ ಕೋರ್ದಬ್ಬು ದೈವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ರಮಾನಾಥ್, ಪಕ್ಷಿಕೆರೆ ಶಾಖೆಯ ಕಟ್ಟಡ ಮಾಲೀಕ ಶೀನ ಕೋಟ್ಯಾನ್, ಕೆ.ಎಂ.ಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಬಟ್ ಮರಿಯೊ, ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಸಿಬ್ಬಂದಿ ಲಿಲ್ಲಿ ಮೇರಿ ಮತ್ತಿತರರು ಉಪಸ್ಥಿತರಿದ್ದರು.
ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಎಸ್ ಕೋಡಿ ತೋಕೂರು, ವಿನಾಯಕ ಮಿತ್ರ ಮಂಡಳಿ ಹಾಗೂ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ, ಶ್ರೀ ಹರಿಪಾದ ಜಾರಂದಾಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ಪಂಜ ಕೊಯಿಕುಡೆ, ಕೋರ್ದಬ್ಬು ದೈವಸ್ಥಾನ ಸೇವಾ ಸಮಿತಿ ಪಕ್ಷಿಕೆರೆ ಇವರುಗಳ ಜಂಟಿ ಸಹಯೋಗದೊಂದಿಗೆ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿತ್ತು.150ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೃಷ್ಣಾಪುರ ಶಾಖೆಯ ಶಾಖಾಧಿಕಾರಿ ಸುಜಾತಾ ಸ್ವಾಗತಿಸಿ, ಬಜ್ಪೆ ಶಾಖೆಯ ಶಾಖಾಧಿಕಾರಿ ಹರ್ಷಿತಾ ವಂದಿಸಿದರು. ಸಂಘದ ಪಕ್ಷಿಕೆರೆ ಶಾಖೆಯ ಶಾಖಾಧಿಕಾರಿ ರಮ್ಯ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com



