ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 114ನೇ ಸಂಸ್ಥಾಪಕರ ದಿನಾಚರಣೆಯನ್ನು ಆಡಳಿತ ಕಚೇರಿ ಆವರಣದಲ್ಲಿ ಆಚರಿಸಿತು. ಬ್ಯಾಂಕಿನ ಸಂಸ್ಥಾಪಕರಾದ ದಿವಂಗತ ಪಿ.ಎಫ್.ಎಕ್ಸ್. ಸಲ್ದಾನ್ಹ ಅವರ ದೂರದೃಷ್ಟಿಯ ಸೇವೆಯನ್ನು ಸ್ಮರಿಸಿ, ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ನಿರಂತರ ಪ್ರಗತಿಯನ್ನು ಗೌರವಿಸಲಾಯಿತು. ಪಿ.ಎಫ್.ಎಕ್ಸ್. ಸಲ್ದಾನ್ಹ ಅವರ ಭಾವಚಿತ್ರಕ್ಕೆ ಪುಷ್ಪ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ), ಮಂಗಳೂರು ಇದರ ಉಪಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್, ಕರ್ಣಾಟಕ ಬ್ಯಾಂಕಿನ ಮಾಜಿ ಮಹಾಪ್ರಬಂಧಕ ಹಾಗೂ ಮುಖ್ಯ ಅನುಸರಣಾಧಿಕಾರಿ ಡಾ| ಮೀರಾ ಅರಾನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ರಚನಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಐಸಾಕ್ ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಸಂಸ್ಥಾಪಕರ ದೃಷ್ಟಿಕೋನ ಮತ್ತು ಧ್ಯೇಯವನ್ನು ಸ್ಮರಿಸುವ ಉದ್ದೇಶದಿಂದ ಸಂಸ್ಥಾಪಕರ ದಿನಾಚರಣೆ ಪ್ರಾರಂಭಿಸಲಾಗಿದೆ. 2018ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್ ವೃತ್ತಿಪರತೆಯೊಂದಿಗೆ ಗಮನಾರ್ಹ ಬೆಳವಣಿಗೆ ಸಾಧಿಸಿದೆ. 24 ವರ್ಷಗಳ ಬಳಿಕ ಶಾಖೆಗಳ ಸಂಖ್ಯೆ 16ರಿಂದ 21ಕ್ಕೆ ಏರಿಕೆಯಾಗಿದೆ. ಬ್ಯಾಂಕಿನ ಒಟ್ಟು ವ್ಯವಹಾರ ರೂ.500 ಕೋಟಿಯಿಂದ ರೂ.1,525 ಕೋಟಿಗೆ ಏರಿಕೆಯಾಗಿದ್ದು, ಠೇವಣಿಗಳು ರೂ.300 ಕೋಟಿಯಿಂದ ರೂ.875 ಕೋಟಿಗೆ ಹೆಚ್ಚಳವಾಗಿವೆ. ಬ್ಯಾಂಕ್ ರೂ.13 ಕೋಟಿ ಲಾಭ ದಾಖಲಿಸಿದ್ದು, ನಿರಂತರವಾಗಿ ಎ ದರ್ಜೆಯ ಲೆಕ್ಕಪರಿಶೋಧನಾ ವರ್ಗೀಕರಣ ಪಡೆಯುತ್ತಿದೆ. ಪ್ರಸ್ತುತ ಇರುವ 21 ಶಾಖೆಗಳನ್ನು ಈ ಆರ್ಥಿಕ ವರ್ಷದಲ್ಲಿ 25ಕ್ಕೆ ವಿಸ್ತರಿಸುವ ಯೋಜನೆ ಇದೆ ಎಂದು ಘೋಷಿಸಿದರು.


ಡಾ|ಪ್ರವೀಣ್ ಮಾರ್ಟಿಸ್ ಮಾತನಾಡಿ, ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೊ ಅವರ ನಾಯಕತ್ವವನ್ನು ಶ್ಲಾಘಿಸಿ, ಬ್ಯಾಂಕ್ ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿರುವ ಪರಿವರ್ತನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವಾಗುವ ವಿದ್ಯಾಧನ ವಿದ್ಯಾರ್ಥಿ ಕ್ರೆಡಿಟ್ ಯೋಜನೆಯನ್ನು ವಿಶೇಷವಾಗಿ ಪ್ರಶಂಸಿಸಿದರು. ಡಾ| ಮೀರಾ ಅರನ್ಹಾ ಅವರು ವಿದ್ಯಾಧನ ಶಿಕ್ಷಣ ಯೋಜನೆಯನ್ನು ಉದ್ಘಾಟಿಸಿದರು. ರಾಯ್ ಕ್ಯಾಸ್ಟೆಲಿನೋ ಅವರು ಕೇವಲ ಏಳು ವರ್ಷಗಳಲ್ಲಿ ಬ್ಯಾಂಕ್ ಮೂರು ಪಟ್ಟು ಬೆಳವಣಿಗೆ ಸಾಧಿಸಿರುವುದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.
ಐಸಾಕ್ ವಾಸ್ ಅವರು ಸಂಪಾದಕರಾದ ಡಾ. ಜೆರಾಲ್ಡ್ ಪಿಂಟೊ ಅವರೊಂದಿಗೆ ಬ್ಯಾಂಕಿನ ಬುಲೆಟಿನ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ಸ್‌ಗಳಾದ ಸಿಎ ಮ್ಯೂರಿಯಲ್ ಮಸ್ಕರೇನ್ಹಾಸ್ ಹಾಗೂ ಸಿಎ ಜಾಯ್ಸ್ಟನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸೆಂಟ್ರಲ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆನ್ರಿ ಮೆಂಡೋನ್ಕಾ (ಎಚ್.ಎಂ. ಪೆರ್ನಾಲ್), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಿಶೆಲ್ ಫರ್ನಾಂಡಿಸ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ| ಜೋಸೆಫ್ ಲೋಬೊ, ಝೇವಿಯರ್ ಡಿಸೋಜ ಮತ್ತು ಪ್ರೇಮ್ ಜೆ. ಮೊರಾಸ್ ಅವರನ್ನು ಗೌರವಿಸಲಾಯಿತು.
ನಿರ್ದೇಶಕರಾದ ಶ್ರೀ ರೋಶನ್ ಡಿಸೋಜ ಹಾಗೂ ಅನಿಲ್ ಪತ್ರಾವೊ ಅವರನ್ನು ಅವರ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು. ಬ್ಯಾಂಕಿನ ಹೊಸ ಲೋಗೋ ವಿನ್ಯಾಸಗೊಳಿಸಿದ ಬನ್ನು ಫೆರ್ನಾಂಡಿಸ್ ಹಾಗೂ ಪಿಎಫ್ಎಕ್ಸ್ ಮೆಮೋರಿಯಲ್ ಆಡಿಟೋರಿಯಂ ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ದೀಪಕ್ ಡಿಸೋಜ ಅವರನ್ನು ಸಹ ಗೌರವಿಸಲಾಯಿತು.
ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದನಾರ್ಪಣೆ ಸಲ್ಲಿಸಿದರು. ಜೇಸನ್ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಆಂಡ್ರೂ ಡಿಸೋಜ, ಹೆರಾಲ್ಡ್ ಮೊಂತೇರೊ, ಅನಿಲ್ ಪತ್ರಾವೊ, ಡೇವಿಡ್ ಡಿಸೋಜ, ಜೆ.ಪಿ. ರೋಡ್ರಿಗಸ್, ರೋಶನ್ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ದಾನ್ಹಾ, ಐರಿನ್ ರೆಬೆಲ್ಲೊ, ಆಲ್ವಿನ್ ಪಿ.ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಡಾ| ಜೆರಾಲ್ಡ್ ಪಿಂಟೊ ಹಾಗೂ ಸಿ.ಜಿ. ಪಿಂಟೊ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com


