ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಲಾಲ್‌ಭಾಗ್ ಶಾಖೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರವು ಕುದ್ರೋಳಿ ಯುವಕ ಸಂಘ ಕುದ್ರೋಳಿ, ಮಂಗಳೂರು ಹಾಗೂ ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಕುದ್ರೋಳಿ ಯುವಕ ಸಂಘದಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಶಿಬಿರವನ್ನು ಉದ್ಯಮಿ ಸುಕುಮಾರ್ ಶೆಟ್ಟಿ ಉದ್ಘಾಟಿಸಿ, ಮಾತನಾಡಿ ಆಧುನಿಕ ಕಾಲದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಅಗತ್ಯ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲಾ ವರ್ಗದ ಬಡ ಜನರಿಗೆ ಆರೋಗ್ಯದ ದೃಷ್ಟಿಯಿಂದ ಜನರ ಕಾಳಜಿ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜನೆ ಮಾಡಿ, ಹೆಚ್ಚು ಜನರು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ತಿಳಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ 14 ವರ್ಷಗಳಿಂದ ಸಂಘದ ಪ್ರತೀ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತ ಬರುತ್ತಿದ್ದು, ಈ ವೈದ್ಯಕೀಯ ಶಿಬಿರವು 103ನೇ ಶಿಬಿರವಾಗಿದ್ದು, ತುಂಬಾ ಜನರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅಗತ್ಯ. ರೋಗ ಬರುವ ಮೊದಲೇ ನಿಯಮಿತ ಆರೋಗ್ಯ ತಪಾಸಣೆ ಮಾಡುವುದು ಉತ್ತಮ. ಹೆಚ್ಚಿನ ಬಡ ಜನರು ವರ್ಷಕ್ಕೆ ಒಮ್ಮೆಯಾದರೂ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ಮಾಡುವುದೇ ವೈದ್ಯಕೀಯ ಶಿಬಿರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ನೋಂದಣಿಯ ಪ್ರಯೋಜನ ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.
ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್, ಮಂಗಳೂರು ಇದರ ವಿದ್ಯಾರ್ಥಿನಿ ಮಂಜುಳ ಮಾತನಾಡಿ ಆರೋಗ್ಯವೇ ಭಾಗ್ಯ, ಎಲ್ಲಾ ರೀತಿಯ ಸಾಧನೆಗೆ ಆರೋಗ್ಯವು ಮುಖ್ಯವಾದದ್ದು. ರೋಗದ ಸೂಚನೆ ಬಂದಾಗಲೇ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯವೆಂದು ತಿಳಿಸಿ, ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕುದ್ರೋಳಿ ಯುವಕ ಸಂಘದ ಅಧ್ಯಕ್ಷರಾದ ರಾಜೇಶ್ ಕುದ್ರೋಳಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾದ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಗೋಪಾಲ್ ಎಂ, ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ , ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಪೌಂಡೇಶನ್, ಮಂಗಳೂರು ಇದರ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜೇಶ್, ಕುದ್ರೋಳಿ ಯುವಕ ಸಂಘದ ಸಂಚಾಲಕಿ ರಾಧಾ ಭಾಸ್ಕರ್, ಕಾರ್ಯದರ್ಶಿ ಕೃಷ್ಣಕುಮಾರ್ , ಜೊತೆ ಕಾರ್ಯದರ್ಶಿ ರವಿ ಅಮೀನ್, ಕೋಶಾಧಿಕಾರಿ ದಿನೇಶ್ ಅಂಚನ್ ಮತ್ತಿತರರು ಉಪಸ್ಧಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.
ಕುದ್ರೋಳಿ ಯುವಕ ಸಂಘದ ಸದಸ್ಯರಾದ ಅಶೋಕ್ ಕುಮಾರ್ ಸ್ವಾಗತಿಸಿ, ರಂಜಿತ ಪ್ರಕಾಶ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

